Basaveshwar Kademani: ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ಅನಾವರಣಗೊಂಡ ಬಸವನಾಡಿನ ಕಲಾವಿದ ಚಿತ್ರಿಸಿದ ಭಾವಚಿತ್ರ

ವಿಜಯಪುರ: ಬೆಳಗಾವಿ ಸುವರ್ಣ ಸೌಧದಲ್ಲಿರುವ ವಿಧಾನ ಸಭೆ ಸಭಾಂಗಣದಲ್ಲಿ ದಾರ್ಶನಿಕರ ಭಾವಚಿತ್ರ ಅನಾವರಣ ಮಾಡಲಾಗಿದ್ದು, ಇವುಗಳಲ್ಲಿ ಬಸವನಾಡಿನ ಹೆಸರಾಂತ ಕಲಾವಿದರು ಚಿತ್ರಿಸಿರುವ ಭಾವಚಿತ್ರವೂ ಸೇರಿಸುವುದು ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.

ವಿಜಯಪುರ ನಗರದಲ್ಲಿರುವ ಜ್ಞಾನ ಯೋಗಾಶ್ರಮ ಬಳಿ ಇರುವ ಇರುವ ಟೀಚರ್ ಕಾಲೋನಿ ನಿವಾಸಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಚಿತ್ರಕಲಾವಿದ ಪಿ. ಎಸ್. ಕಡೆಮನಿ ಅವರು ಚಿತ್ರಿಸಿರುವ ಬಸವಣ್ಣನವರ ಭಾವಚಿತ್ರ ಈಗ ಸುವರ್ಣ ವಿಧಾನಸೌಧದಲ್ಲಿ ರಾರಾಜಿಸುತ್ತಿದೆ.

ನಡೆದಾಡುವ ದೇವರೆಂದೇ ಹೆಸರಾಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪರಮಭಕ್ತರಾಗಿರುವ ಪಿ. ಎಸ್. ಕಡೆಮನಿ, ತಮ್ಮಲ್ಲಿರುವ ಚಿತ್ರಕಲೆಯ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದಾರೆ.  ಈಗ ಇವರು ಚಿತ್ರಿಸಿರುವ 12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನವರ ಭಾವಚಿತ್ರ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಅಳವಡಿಸಿರುವುದು ಗಮನ ಸೆಳೆದಿದೆ.

ಬಸವ ನಾಡಿನ ಖ್ಯಾತ ಚಿತ್ರಕಲಾವಿದ ಪಿ. ಎಸ್. ಕಡೆಮನಿ ತಯಾರಿಸುತ್ತಿರುವ ಭಾವಚಿತ್ರ

ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಜೊತೆಯಲ್ಲಿಯೇ ಸ್ವಾಮಿ ವಿವೇಕಾನಂದ, ಸುಭಾಷಚಂದ್ರ ಭೋಸ, ಡಾ. ಬಾಬಾಸಾಹೇಬ ಅಂಬೇಡ್ಕರ, ಮಹಾತ್ಮಾ ಗಾಂಧಿ, ಸರ್ದಾರ ವಲ್ಲಭಭಾಯಿ ಪಟೇಲ ಮತ್ತು ವೀರ ಸಾವರ್ಕರ ಅವರ ಭಾವಚಿತ್ರಗಳನ್ನೂ ಅಳವಡಿಸಲಾಗಿದೆ.

ಬಸವಣ್ಣನವರ ಜನ್ಮಸ್ಥಳ ಬಸವನಾಡಿನ ಕಲಾವಿದ ಚಿತ್ರಿಸಿರುವ ಈ ಚಿತ್ರ ಈಗ ಕುಂದಾನಗರಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಳವಡಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ.  ಇದು ನಮಗೆಲ್ಲರಿಗೂ ಸಂತಸ ವಿಷಯವಾಗಿದೆ ಎಂದು ಪಿ. ಎಸ್. ಕಡೆಮನಿ ಅವರ ಆತ್ಮೀಯರಾದ ಕಾಖಂಡಕಿ ಗ್ರಾಮದ ಅಶೋಕ ಶಿ. ತಿಮಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌