Varsity MoU: ಚಿಕ್ಯಾಗೋ ವಿವಿ- ಬಿ ಎಲ್ ಡಿ ಇ ಡೀಮ್ಡ್ ವಿವಿ ಮಧ್ಯೆ ಶೈಕ್ಷಣಿಕ, ಸಂಶೋಧನೆ ಒಡಂಬಡಿಕೆ ಕುರಿತು ಮಹತ್ವದ ಚರ್ಚ

ವಿಜಯಪುರ: ಅಮೇರಿಕಾದ ಚಿಕ್ಯಾಗೋ ವಿಶ್ವವಿದ್ಯಾಲಯದ ಖ್ಯಾತ ವಿಜ್ಞಾನಿ ಪ್ರೊ.ನಂದೂರಿ ಆರ್. ಪ್ರಭಾಕರ ಅವರು ವಿಜಯಪುರ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಶೈಕ್ಷಣಿಕ ಹಾಗೂ ಸಂಶೋಧನೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಮುಂಬರುವ ದಿನಗಳಲ್ಲಿ ಅಮೇರಿಕಾದ ಚಿಕ್ಯಾಗೋ ವಿವಿ ಜೊತೆ ಶೈಕ್ಷಣಿಕ ಹಾಗೂ ಸಂಶೋಧನೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸಿದರು. ಅಲ್ಲದೇ, ಎರಡು ದಿನಗಳ ಕಾಲ ಬಿ.ಎಲ್.ಡಿ.ಇ ಸಂಸ್ಥೆಯ ನಾನಾ ಕಾಲೇಜುಗಳಿಗೆ ಭೇಟಿ ನೀಡಿದ ಅವರು ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ವೈದ್ಯರು, ಸಂಶೋಧಕರು ಭಾಗಿಯಾಗಿದ್ದರು.

ಶರೀರ ರಚನಾಶಾಸ್ತ್ರ ವಿಭಾಗದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ‘ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಮತ್ತು ಕಾರ್ಟಾಯಿಡ್ ಕಣಗಳ ಆಮ್ಲಜನಕ ಸಂವೇದನೆ’ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆಗಳು ಮತ್ತು ಲಭ್ಯವಿರುವ ಚಿಕಿತ್ಸೆಗಳ ಕುರಿತು ಮಹತ್ವದ ಮಾಹಿತಿ ನೀಡಿದರು. ಅಲ್ಲದೇ, ವಿದ್ಯಾರ್ಥಿಗಳು ಮತ್ತು ವೈದ್ಯರು ಹಾಗೂ ಬೋಧಕ ಸಿಬ್ಬಂದಿ ಜೊತೆ ಸಂವಾದ ನಡೆಸಿದರು.

ವಿಶ್ವದ ಖ್ಯಾತ ವಿಜ್ಞಾನಿ ಗ್ರೇಗ್ ಸೆಮಿಂಜಾ ಜೊತೆ ಕೆಲಸ ಮಾಡಿದ ಅನುಭವ ಹೊಂದಿರುವ ಅವರು ಪ್ರಸಕ್ತ ಆರೋಗ್ಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳ ಕುರಿತು ವಿದ್ಯಾರ್ಥಿಗಳು ಮತ್ತು ವೈದ್ಯರು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಗೌರವ ಡಾಕ್ಟರೇಟ್ ಪ್ರದಾನ

ಇದೇ ಸಂದರ್ಭದಲ್ಲಿ ಪ್ರೊ. ನಂದೂರಿ ಆರ್. ಪ್ರಭಾಕರ ಅವರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿವಿ ವತಿಯಿಂದ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ ಡೀಮ್ಡ್ ವಿವಿ ಸಮಕುಲಾಧಿಪತಿ ಪ್ರೊ. ವಾಯ್. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ರಜಿಸ್ಟ್ರಾರ್ ಡಾ. ಆರ್ರ್. ವಿ. ಕುಲರ್ಕಣಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌