ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಏಕರೂಪದ ಬೆಲೆ ನಿಗದಿಪಡಿಸಿ ಐತೀರ್ಪನ್ನು ರಚಿಸುವ ಮೂಲಕ ಪರಿಹಾರ ವಿತರಿಸಲು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಕೃಷ್ಣಾ ನದಿಯ ಎಡದಂಡೆಯಲ್ಲಿ ಮುಳುಗಡೆಯಾಗಲಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳು ಕೊಲ್ಹಾರ ತಾಲ್ಲೂಕಿನ ಆರು ಗ್ರಾಮಗಳು, ನಿಡಗುಂದಿ ತಾಲ್ಲೂಕಿನ ಒಂಬತ್ತು ಗ್ರಾಮಗಳು ಮುಳುಗಡೆ ಹೊಂದುತ್ತಿವೆ. ಮುಳಗುಡೆ ಹೊಂದಲಿರುವ ಜಮೀನುಗಳ ಭೂಪರಿಹಾರದಲ್ಲಿ ವ್ಯತ್ಯಾಸ ಉಂಟಾಗಿ 2016-17 ರಲ್ಲಿ ಈ ಗ್ರಾಮಗಳು ಮಾರ್ಗದರ್ಶಿ ಬೆಲೆ ಪರಿಷ್ಕೃತ ಗೊಂಡ ನಂತರ ಈವರೆಗೆ ಪರಿಷ್ಕೃತಗೊಳ್ಳದೇ ಇರುವುದರಿಂದ ರೈತರಿಗೆ ಆಗಿರುವ ಘೋರ ಅನ್ಯಾಯವನ್ನು ಪರಿಗಣನೆಗೆ ತೆಗೆದುಕೊಂಡು ಏಕರೂಪದ ಬೆಲೆ ಮತ್ತು ಸಮ್ಮತಿ ಐತೀರ್ಪನ್ನು ರಚಿಸಲು ಅನುಮೋದನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಅವರು ತಿಳಿಸಿದ್ದಾರೆ.
ಈ ಗ್ರಾಮಗಳಲ್ಲಿ ಪ್ರತೀ ಎಕರೆ ಒಣ ಭೂಮಿಗೆ 5.00 ಲಕ್ಷ ರೂಪಾಯಿ ಹಾಗೂ ಪ್ರತೀ ಎಕರೆ ನೀರಾವರಿ/ಬಾಗಾಯತ್ ಭೂಮಿಗೆ ರೂ. 6 ಲಕ್ಷ ರೂಪಾಯಿ ಮತ್ತು ಕಟ್ಟಡಗಳಿಗೆ ಸವಕಳಿರಹಿತವಾಗಿ ಶೇ. 20 ರಷ್ಟು ಹೆಚ್ಚುವರಿ ಮೊತ್ತವನ್ನು ಸೇರಿಸಿ, ಪರಿಹಾರವನ್ನು ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಈ ಐತಿಹಾಸಿಕ ತೀರ್ಮಾನ ವಿಜಯಪುರ ಜಿಲ್ಲೆಯ ಬಬಲೇಶ್ವರ, ನಿಡಗುಂದಿ ಮತ್ತು ಕೊಲ್ಹಾರ ತಾಲ್ಲೂಕುಗಳಲ್ಲಿ ಹೋರಾಟ ಮಾಡಿಕೊಂಡು ಬಂದ ರೈತರಿಗೆ ಗೌರವಿಸಿದಂತಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕೆಳಕಂಡ ಹಳ್ಳಿಗಳು ಈ ನಿರ್ಣಯದಿಂದ ಫಲಾನುಭವಿಗಳಾಗಿವೆ.
ಬಬಲೇಶ್ವರ ತಾಲೂಕು
ಹಂಗರಗಿ, ಬೆಳ್ಳುಬ್ಬಿ, ಜೈನಾಪೂರ, ಮಂಗಳೂರ, ತಾಜಪೂರ, ದೇವರಗೆಣ್ಣೂರ, ಲಿಂಗದಳ್ಳಿ, ಸುತಗುಂಡಿ, ಹೊಸೂರ, ಚಿಕ್ಕಗಲಗಲಿ, ಜಂಬಗಿ, ಬಬಲಾದ, ಶಿರಬೂರ, ಕಣಬೂರ
ನಿಡಗುಂದಿ ತಾಲೂಕು
ನಿಡಗುಂದಿ, ಚಿಮ್ಮಲಗಿ, ಬೇನಾಳ, ವಂದಾಲ, ಮುಜರೆಕೊಪ್ಪ, ದೇವಲಾಪೂರ, ಗೋನಾಳ, ಮಾರಡಗಿ, ಗಣಿ
ಕೊಲ್ಹಾರ ತಾಲೂಕು
ಅರಷಣಗಿ, ಬಳೂತಿ, ಹಳೆರೊಳ್ಳಿ, ಸಿದ್ಧನಾಥ, ಮಟ್ಟಿಹಾಳ, ಕೊಲ್ಹಾರ
ಈ ಐತಿಹಾಸಿಕ ನಿರ್ಣಯದಿಂದ ಭೂಮಿ ಕಳೆದುಕೊಳ್ಳುವ ಮೂಲಕ ದೇಶದ ಅತ್ಯಂತ ಮಹತ್ವದ ಯೋಜನೆಗೆ ತ್ಯಾಗ ಮಾಡುವ ರೈತರು ಮತ್ತು ನಾಗರೀಕರಿಗೆ ನ್ಯಾಯಬದ್ಧ ಪರಿಹಾರ ನೀಡುವ ಇಂದಿನ ಸಚಿವ ಸಂಪುಟದ ನಿರ್ಣಯ ಕೃಷ್ಣಾ ತೀರದ ಭೂಸ್ವಾಧೀನ ಇತಿಹಾಸದಲ್ಲಿ ಮೈಲಿಗಲ್ಲು ಆಗಲಿದೆ ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ.
ಈ ಐತಿಹಾಸಿಕ ನಿರ್ಣಯಕ್ಕೆ ಕಾರಣರಾದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಸಚಿವ ಗೋವಿಂದ ಕಾರಜೋಳ ಅಭಿನಂದನೆ ಸಲ್ಲಿಸಿದ್ದಾರೆ.