ಬೆಳಗಾವಿ: ಯಶಸ್ವಿನಿ ಯೋಜನೆಯ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಬೇಕು ಎಂದು ಆಗ್ರ್ರಹಿಸಿ ಐಎಂಎ ಮತ್ತು ಕೆಪಿಎಂಇಎ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯಶಸ್ವಿನಿ ಯೋಜನೆಯ ಮಾಜಿ ಲೈಫ್ ಟ್ರಸ್ಟಿ ಡಾ|| ಎಲ್.ಎಚ್. ಬಿದರಿ, ಯಶಸ್ವಿನಿ ಯೋಜನೆಯ ಪ್ಯಾಕೇಜ್ ದರಗಳನ್ನು ವೈಜ್ಞಾನಿಕವಾಗಿ ಚಿಂತನೆ ಮಾಡಿ, ಚರ್ಚಿಸಿ ಪರಿಷ್ಕರಣೆಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಯಶಸ್ವಿನಿ ಯೋಜನೆಯ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದ್ದು ಆದಷ್ಟು ಶೀಘ್ರವಾಗಿ ಅವುಗಳಿಗೆ ಪರಿಹಾರ ಹುಡುಕುವುದಾಗಿ ಭರವಸೆ ನೀಡಿದರು. ನಂತರ ಹಣಕಾಸು ಸಚಿವರನ್ನು ಭೇಟಿ ಮಾಡಿದಾಗ ಮಾತನಾಡಿದ ಎಸ್. ಟಿ. ಸೋಮಶೇಖರ್, ಹಣಕಾಸು ಇಲಾಖೆ ಸಾಸ್ಥ ಪ್ಯಾಕೇಜ್ ದರಗಳನ್ನು ಅಳವಡಿಸಿದರೆ ಮಾತ್ರ ಯಶಸ್ವಿನಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು. ಆಗ ಡಾ. ಎಲ್. ಎಚ್. ಬಿದರಿ ಮಾತನಾಡಿ, ಯಶಸ್ವಿನಿಯಲ್ಲಿ 840 ಸರ್ಜರಿ ಪ್ಯಾಕೇಜುಗಳು ಮಾತ್ರ ಇವೆ. ಈಗ ಸಾಸ್ಥನಲ್ಲಿರುವಂತ 850 ಮೆಡಿಕಲ್ ಕಂಡೀಷನ್ ಗಳನ್ನು ಹಾಕಲಾಗಿದೆ. ಇದರ ಬಗ್ಗೆ ಸಹಕಾರ ಮತ್ತು ಹಣಕಾಸು ಇಲಾಖೆ ಅದರ ವೆಚ್ಚದ ಬಗ್ಗೆ ಯೋಜನೆ ಹಾಕಿಕೊಂಡಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ, ಜನೇವರಿ ತಿಂಗಳಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಹಣಕಾಸು ಕಾಯದರ್ಶಿಗಳೊಂದಿಗೆ ತಮ್ಮನ್ನು ಕರೆದು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಐಎಂಎ ಅಧ್ಯಕ್ಷ ಡಾ. ಲಕ್ಕೋಳ, ಕೆಪಿಎಂಇಎ ಅಧ್ಯಕ್ಷ ಡಾ. ಸೋರಗಾಂವಿ, ಡಾ. ಸುಧೀರ, ಡಾ. ಪವನ ಪಾಟೀಲ, ಡಾ. ದೇವೆಗೌಡ ಉಪಸ್ಥಿತರಿದ್ದರು.