ವಿಜಯಪುರ: ಉತ್ತರ ಕರ್ನಾಟಕದಲ್ಲಿ ಮುಂಗಾರು ಬೆಳೆಗಳನ್ನು ಕಟಾವು ಮಾಡಿ ಭೂಮಿತಾಯಿಗೆ ಅರ್ಪಿಸುವ ಪ್ರಮುಖ ಹಬ್ಬ ಎಳ್ಳ ಅಮವಾಸ್ಯೆ ಆಚರಣೆ ಜೋರಾಗಿ ನಡೆಯಿತು.
ಭೂಮಿ ತಾಯಿಗೆ ಸೀಮಂತ ಮಾಡುವ ಹಬ್ಬ ಎಂದೂ ಕರೆಯಲಾಗುವ ಚೆರಗಾ ಚೆಲ್ಲುವ ಕಾರ್ಯಕ್ರಮದ ಅಂಗವಾಗಿ ನಗರ ವಾಸಿಗಳೂ ಕೂಡ ಗ್ರಾಮೀಣ ಭಾಗಕ್ಕೆ ತೆರಳಿ ತಮ್ಮ ಮತ್ತು ತಮ್ಮ ಸಂಬಂಧಿಕರ ಹಾಗೂ ಸ್ನೇಹಿತರ ಹೊಲ ಮತ್ತು ತೋಟಗಳಿಗೆ ಹೋಗಿ ಮೃಷ್ಠಾನ್ನ ಭೋಜನ ಸವಿದು ಸಂಭ್ರಮಿಸಿದರು.
ಮುಂಗಾರು ಬೆಳೆಗಳ ಕಟಾವು ಮತ್ತು ಹಿಂಗಾರು ಬೆಳೆಗಳ ಬಿತ್ತನೆ ಸಮಯದಲ್ಲಿ ಬರುವ ಈ ಹಬ್ಬಕ್ಕೆ ಉತ್ತರ ಕರ್ನಾಟಕ ಅದರಲ್ಲಿಯೂ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಅದರದೇ ಆದ ಮಹತ್ವವಿದೆ. ಈ ಹಬ್ಬದಂದು ಮನೆಯಲ್ಲಿ ತರಹೇವಾರಿ ಖಾದ್ಯಗಳನ್ನು ತಯಾರಿಸುವ ಮಹಿಳೆಯರು ತಂತಮ್ಮ ಕುಟುಂಬ ಸದಸ್ಯರೊಂದಿಗೆ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿ ಬೆಳೆದು ನಿಂತಿರುವ ಬೆಳೆಗಳು ಮತ್ತು ಈ ಬೆಳೆಗಳು ಸಮೃದ್ಧವಾಗಿ ಬೆಳೆಯಲು ಕಾರಣವಾಗಿರುವ ಭೂಮಿ ತಾಯಿಗೆ ನೈವೇದ್ಯ ಅರ್ಪಿಸಿ ಕೃತಜ್ಞತೆ ಭಾವ ತೋರುತ್ತಾರೆ.
ಬೆಳ್ಳಂಬೆಳಿಗ್ಗೆ ಬೇಗ ಏಳುವ ಮಹಿಳೆಯರು ರುಚಿಕಟ್ಟಾದ ಜೋಳದ ರೊಟ್ಟಿ, ಸಜ್ಜೆಯ ರೊಟ್ಟಿ, ಕಾಳು ಪಲ್ಲೆ, ತಪ್ಪಲು ಪಲ್ಯ, ಅನ್ನ, ಮೊಸರನ್ನು, ಕಾರೆಳ್ಳು ಹಿಂಡಿ, ಶೇಂಗಾ ಚಟ್ನಿ, ಸವತೆಕಾಯಿ, ಬದನೆಕಾಯಿ, ಸೇರಿದಂತೆ ನಾನಾ ತರಹದ ಭಾಜಿಗಳನ್ನು ತಯಾರಿಸುತ್ತಾರೆ. ಇವುಗಳೆಲ್ಲಕ್ಕೂ ಹೆಚ್ಚು ಮೆರಗು ನೀಡುವ ಶೇಂಗಾ ಹೋಳಿಗೆ ಹಬ್ಬದ ಭೋಜನದ ಸೊಬಗನ್ನು ಹೆಚ್ಚಿಸುತ್ತದೆ. ಹೀಗೆ ತಯಾರಿಸಿದ ಖಾದ್ಯಗಳನ್ನು ಬುಟ್ಟಿಯೊಂದರಲ್ಲಿ ಸಂಗ್ರಹಿಸಿ ಆ ಬುಟ್ಟಿಯನ್ನು ಬಟ್ಟೆಯಿಂದ ಮುಚ್ಚಿ ಧೂಳು ತಾಗದಂತೆ ಮನೆಯಿಂದ ಹೊಲಕ್ಕೆ ತರುತ್ತಾರೆ.
ನಂತರ ಎಲ್ಲ ಪೂಜೆ ಮುಗಿದ ನಂತರ ಕುಟುಂಬ ಸದಸ್ಯರು ಮತ್ತು ಬಂಧುಗಳು ಹಾಗೂ ಸ್ನೇಹಿತರ ಜೊತೆಗೂಡಿ ಸಹಭೋಜನ ಮಾಡುತ್ತಾರೆ. ಅಲ್ಲದೇ, ಹೊಲದಲ್ಲಿ ಸುತ್ತಾಡಿ ಬೆಳೆಗಳನ್ನು ವೀಕ್ಷಿಸಿ ಸಂತಸ ಪಡುತ್ತಾರೆ. ಈ ಹಬ್ಬ ಯುವತಿಯರು ಮತ್ತು ಮಕ್ಕಳ ಪಾಲಿಗಂತೂ ಸಂಭ್ರಮವನ್ನು ಇಮ್ಮಡಿ ಗೊಳಿಸುತ್ತದೆ.
ಈ ಹಬ್ಬದ ಅಂಗವಾಗಿ, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಯುವತಿಯರು, ಯುವಕರು ಹಾಗೂ ಮಹಿಳೆಯರು ಸಂಭ್ರಮದಿಂದ ಚರಗ ಚೆಲ್ಲಿದರು. ಸಜ್ಜಿರೊಟ್ಟಿ, ಶೇಂಗಾ ಹೋಳಿಗೆ ಸೇರಿದಂತೆ ನಾನಾ ರೀತಿಯಲ್ಲಿ ತಯಾರಿಸಿದ ಉತ್ತರ ಕರ್ನಾಟಕದ ಖ್ಯಾದ್ಯವನ್ನು ಜಮೀನಿಗೆ ತೆರಳಿ ಭರ್ಜರಿಯಾಗಿ ಊಟ ಸವಿದರು. ಇದಕ್ಕೂ ಮೊದಲು ಮನೆಯಿಂದ ತಂದಿದ್ದ ಅಡುಗೆಯನ್ನು ಜಮೀನಿನಲ್ಲಿ ಬನ್ನಿ ಮರದ ಎದುರು ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಜ್ಜಿ ರೊಟ್ಟಿ, ಚವಳಿಕಾಯಿ ಪಲ್ಯವನ್ನು ಚಜ್ಜಿರೊಟ್ಟಿ, ಚವಳಿಕಾಯಿ ಚೋಂಗಿ ಬೊಲೋ ಎಂದು ಸಂತಸದಿಂದ ಹೇಳಿ ಎಂದು ಬೆಳೆಗೆಲ್ಲ ನೈವೇದ್ಯ ಅರ್ಪಿಸಿ ಸಂತೃಪ್ತರಾದರು.