ರೈತನ ಮಗ ವೈದ್ಯನಾಗುವ ಕನಸು ನನಸಾಗಲು ನೆರವಾದ ಎಂ. ಬಿ. ಪಾಟೀಲ- ಎಂಬಿಬಿಎಸ್ ಪ್ರವೇಶಕ್ಕೆ ಆರ್ಥಿಕ ನೆರವು

ವಿಜಯಪುರ: ಬ್ಯಾಂಕ್ ನಿಂದ ಸಾಲವೂ ಸಿಗದೇ, ವೈದ್ಯನಾಗುವ ಕನಸು ಕೈಚೆಲ್ಲಿ ಕುಳಿತಿದ್ದ ಬಡರೈತನ ಮಗನಿಗೆ ಆರ್ಥಿಕ ನೆರವು ನೀಡುವ ಮೂಲಕ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮತ್ತೊಮ್ಮೆ ಸಹಾಯ ಹಸ್ತ ಚಾಚಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್ ಗ್ರಾಮದ ರಾಹುಲ ಮುರೆಗೇಪ್ಪ ಕುರುಬರ ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಮೆಡಿಕಲ್ ಖಾಸಗಿ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟ್ ಪಡೆದಿದ್ದರು. ಆದರೆ, ಪ್ರವೇಶಕ್ಕೆ ಹಣ ಹೊಂದಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ಬ್ಯಾಂಕುಗಳು ಕೂಡ ಸಾಲ ನೀಡಿರಲಿಲ್ಲ. ಹೀಗಾಗಿ ಎಂ.ಬಿ.ಪಾಟೀಲ ಅವರ ಬಳಿ ಬಂದು ತಮ್ಮ ಆರ್ಥಿಕ ಪರಿಸ್ಥಿತಿ ವಿವರಿಸಿದಾಗ ಕೂಡಲೇ ಸ್ಪಂದಿಸಿದ ಅವರು ಸಹಾಯ ಹಸ್ತ ಚಾಚಿದ್ದಾರೆ.

ಸಹಾಧನ ಚೆಕ್ ವಿತರಿಸಿದ ಬಸನಗೌಡ ಪಾಟೀಲ

ಇಂದು ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಬಸನಗೌಡ ಪಾಟೀಲ (ರಾಹುಲ) ಅವರನ್ನು ರಾಹುಲ ಕುರುಬರ ಮತ್ತು ಗ್ರಾಮಸ್ಥರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಬಸನಗೌಡ ಪಾಟೀಲರು ಬಿ.ಎಲ್.ಡಿ.ಇ ಸಂಸ್ಥೆಯಿಂದ ವಿದ್ಯಾರ್ಥಿಯ ಎಂ.ಬಿ.ಬಿ.ಎಸ್ ಮೊದಲ ವರ್ಷದ ಪ್ರವೇಶ ಮತ್ತು ಹಾಸ್ಟೇಲ್ ಶುಲ್ಕಗಳಿಗೆ ಅಗತ್ಯವಿರುವ ರೂ.3,99,196 ಮೊತ್ತದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಸನಗೌಡ ಪಾಟೀಲ, ಚೆನ್ನಾಗಿ ಓದಿ ಉತ್ತಮ ವೈದ್ಯರಾಗಿ ಜನಸೇವೆ ಮಾಡಿ, ಕುಟುಂಬ ಮತ್ತು ಬಸವನಾಡಿನ ಕೀರ್ತಿಪತಾಕೆಯನ್ನು ಎತ್ತಿ ಹಿಡಿಯುವಂತೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ರೆಜಿಸ್ಟ್ರಾರ್ ಡಾ.ಆರ್.ವಿ.ಕುಲಕರ್ಣಿ, ಸಂಸ್ಥೆಯ ಹಣಕಾಸು ವಿಭಾಗದ ಎಸ್.ಎಸ್.ಪಾಟೀಲ, ಸದಾಶಿವ ಮುರುಗುಂಡಿ, ಅಶೋಕ ಬಿದರಿ, ನಂದೆಪ್ಪ ಗಲಗಲಿ ಮುಂತಾದವರು ಉಪಸ್ಥಿತರಿದ್ದರು.

ಚೆಕ್ ಸ್ವೀಕರಿಸಿ ಮಾತನಾಡಿದ ರಾಹುಲ ಕುರುಬರ, ಎಂ.ಬಿ.ಬಿ.ಎಸ್ ಪ್ರವೇಶ ಪಡೆಯಲಾಗದೆ ಸಂಕಷ್ಟದಲ್ಲಿದ್ದ ನನಗೆ ಎಂ.ಬಿ.ಪಾಟೀಲರು ಆಪದ್ಭಾಂದವ ರೂಪದಲ್ಲಿ ಕೈಹಿಡಿದ್ದಾರೆ. ಮೊದಲ ವರ್ಷದ ಶುಲ್ಕ ಭರಿಸಿದ್ದಷ್ಟೆ ಅಲ್ಲ, ಶಿಕ್ಷಣ ಮುಂದುವರಿಕೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಆಶಯದಂತೆ ನಾನೂ ಕೂಡ ವೈದ್ಯನಾಗಿ ಬಡಜನರ ಸೇವೆ ಮಾಡುತ್ತೇನೆ ಎಂದು ಭಾವುಕರಾಗಿ ಹೇಳಿದರು.

ರಾಹುಲ ತಂದೆ ಮುರೆಗೆಪ್ಪ ಕುರುಬರ ಮಾತನಾಡಿ, ನಮಗೆ ಮೂರು ಜನ ಮಕ್ಕಳು ಈತ ಹಿರಿಯ ಮಗ, ಇನ್ನಿಬ್ಬರು ಹೆಣ್ಣು ಮಕ್ಕಳಿದ್ದಾರೆ. ನಮ್ಮ ಭಾಗದಲ್ಲಿ ನೀರಾವರಿ ಮೂಲಕ ಸಮೃದ್ಧಿಯನ್ನು ಒದಗಿಸಿರುವ ಎಂ .ಬಿ.ಪಾಟೀಲರು ಬಡಜನರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ನಮ್ಮ ಮಗ ವೈದ್ಯನಾಗುವ ಕನಸು ನನಸು ಮಾಡಲು ಹಣ ನೀಡುವ ಮೂಲಕ ದೇವರ ರೂಪದಲ್ಲಿ ಬಂದು ಕಾಪಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಹಿಂದೆಯೂ ಕೂಡ ಎಂ.ಬಿ.ಪಾಟೀಲರು ಸಾಕಷ್ಟು ಜನ ಎಂ.ಬಿ.ಬಿ.ಎಸ್ ಮತ್ತು ಇನ್ನಿತರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

Leave a Reply

ಹೊಸ ಪೋಸ್ಟ್‌