ವಿಜಯಪುರ: ಶೈಕ್ಷಣಿಕ ಚಟುವಟಿಕೆಗಳು ಮತ್ತು ಕ್ರೀಡಾ ಚಟುವಟಿಕೆಗಳನ್ನು ಸಮ ಸಮವಾಗಿ ನಿಭಾಯಿಸುವ ಮೂಲಕ ವೃತ್ತಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ಅಥ್ಲೇಟಿಕ್ಸ್ ಸಂಸ್ಥೆಯ ಉಪಾಧ್ಯಕ್ಷೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಭಾರತಿ ಬಿ. ಎಲ್ ಸಲಹೆ ನೀಡಿದರು.
ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ 16ನೆಯ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ್ ಕ್ರೀಡಾಕೂಟ- 2022 ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಕೇವಲ ಕ್ರೀಡಾ ಸಾಧನೆಯಲ್ಲಿಯೇ ಮುಳುಗಿ ಶಿಕ್ಷಣ ನಿರ್ಲಕ್ಷಿಸುವುದು ಸರಿಯಲ್ಲ. ಎರಡರಲ್ಲಿಯೂ ನಾವು ಗುರಿ ಸಾಧಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಕಲಿತುಕೊಳ್ಳುತ್ತೇವೆ. ಇದು ಜೀವನದಲ್ಲಿ ಬಹು ದೊಡ್ಡ ಪಾಠ. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದೇ ಮುಖ್ಯವಾಗಬೇಕು ಅಂದಾಗ ನಾವು ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕ್ರೀಡಾ ಸಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವವರು ಎಷ್ಟೇ ಕಷ್ಟ ಆದರೂ ಛಲ ಬಿಡಬಾರದು. ಸಾಧನೆಯ ಹಾದಿಯಲ್ಲಿ ಬರುವ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಲು ಮುನ್ನುಗ್ಗಿದಾಗ ಗುರಿ ಮುಟ್ಟುವುದು ಖಂಡಿತವಾಗಿಯೂ ಸಾಧ್ಯವಿದೆ. ಇದು ನನ್ನ ಜೀವನದ ಅನುಭವವಾಗಿದೆ ಎಂದು ಭಾರತಿ ಬಿ. ಎಲ್. ಹೇಳಿದರು.
ಕೆನರಾ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕಿ ಕಿರಣ್ ಎನ್. ಎಸ್. ಮಾತನಾಡಿ, ಪ್ರತಿಯೊಬ್ಬ ಮಹಿಳೆ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಹಲವಾರು ಎಡರು-ತೊಡರುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ತಾನು ಮಾಡುವ ಕೆಲಸವನ್ನು ಶಿಸ್ತಿನಿಂದ ಮತ್ತು ಕಠಿಣ ಪರಿಶ್ರಮಗಳಿಂದ ಮಾಡಿದಾಗ ಯಶಸ್ಸು ತಮ್ಮದಾಗಿಸಿಕೊಳ್ಳಬಹುದು. ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ನೀವೆಲ್ಲಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ ಮಾತನಾಡಿ, ನಮ್ಮ ದೇಶದಲ್ಲಿ ಶೇ. 60 ರಷ್ಟು ಯುವಜನತೆ ತುಂಬಿದ್ದು, ಯುವಕರು ಕ್ರೀಡೆಯತ್ತ ತಮ್ಮ ಒಲವನ್ನು ತೋರಿಸಬೇಕು. ಕ್ರೀಡಾಪಟುಗಳು ದೈಹಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಹಣಮಂತರಾಯ ದೇವಗಾಂವಕರ್, ಪ್ರಾಧ್ಯಾಪಕ ಪ್ರೋ. ಎನ್. ಎಲ್. ಮಲ್ಲಿಕಾರ್ಜುನ, ಪ್ರೊ. ಆರ್. ವಿ. ಗಂಗಶೆಟ್ಟಿ, ಪ್ರೊ. ರಾಜಕುಮಾರ ಮಾಲಿಪಾಟೀಲ, ಡಾ. ಶ್ರೀನಿವಾಸ, ಸಹಾಯಕ ಕ್ರೀಡಾ ನಿರ್ದೇಶಕ ಡಾ. ವಿಶ್ವನಾಥ ನಡಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಕ್ರೀಡಾ ನಿರ್ದೇಶಕ ಪ್ರೊ. ಸಕ್ಪಾಲ್ ಹೂವಣ್ಣ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಹಣಮಂತಯ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಜ್ಯೋತಿ ಉಪಾಧ್ಯೆ ಅತಿಥಿಗಳನ್ನು ಪರಿಚಯಿಸಿದರು. ಡಾ. ಅಶ್ವಿನಿ ಕೆ. ಎನ್. ವಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಅತಿಥಿಗಳು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ನಂತರ ಕ್ರೀಡಾ ಪಟುಗಳಿಂದ ಧ್ವಜ ವಂದನೆ ಸ್ವೀಕರಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ 5000 ಮೀಟರ್ ಓಟದಲ್ಲಿ 29 ಕಾಲೇಜಿನ ವಿದ್ಯಾರ್ಥಿನಿಯರಿ ಭಾಗವಹಿಸಿದರು.