ವಿಜಯಪುರ: ತಲೆಹಿಡುಕರು ಯಾರು ಎಂಬುದು ಜಗತ್ತಿಗೆ ಗೊತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.
ವಿಜಯಪುರ ನಗರದಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಬಳಿಕ ಮಾತನಾಡಿದ ಅವರು, ತಲೆಹಿಡುಕರು ಯಾರು ಅನ್ನೋದು ಜಗತ್ತಿಗೆ ಗೊತ್ತಿದೆ ಎಂದು ಸಚಿವ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಯಾರ ಕಾಲು ಹಿಡಿಯಲು ಹೋಗಿಲ್ಲ
ಯತ್ನಾಳ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಕಾಲು ಹಿಡಿಯಲು ದೆಹಲಿಗೆ ಹೋಗಿದ್ದರು ಎಂದು ಆರೋಪಿಸಿರುವ ಸಚಿವ ಮುರುಗೇಶ ನಿರಾಣಿ ಅವರ ಹೇಳಿಕೆಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ನೀವೇ ಕೇಳಿ ನೋಡಿ. ನಾನು ಅಟಲ್ ಬಿಹಾರಿ ವಾಜಪೇಯಿ, ಅದ್ವಾನಿ ಕಾಲು ನಮಸ್ಕಾರ ಮಾಡಿದ್ದೇನೆ. ಬೇರೆ ಯಾರು ಕಾಲು ಹಿಡಿಯುವ ಮಗ ನಾನಲ್ಲ. ತಲೆಹಿಡುಕರು ರಾಜಕೀಯಕ್ಕೆ ಬಂದ ಮೇಲೆ ನಮಗೆ ಬಹಳ ತೊಂದರೆಯಾಗಿದೆ ಎಂದು ಹೇಳಿದರು.
ನಾನು ತುಮಕೂರು ಸಿದ್ಧಗಂಗಾ, ಸಿದ್ಧೇಶ್ವರ ಶ್ರೀಗಳ ಕಾಲು ನಮಸ್ಕಾರ ಮಾಡಿದ್ದೇನೆ. ಆದರೆ, ತಲೆ ಹಿಡುಕು ಸ್ವಾಮಿಗಳ ಕಾಲು ಮುಗಿಯಲ್ಲ. ತಲೆ ಹಿಡುಕರು ರಾಜಕೀಯ ಬಂದ್ಮೇಲೆ ನಮ್ಮಂಥವರಿಗೆ ತೊಂದರೆ ಆಗಿದೆ. ರಾಜಕಾರಣಿಗಳು ಸ್ವಾಮೀಜಿಗಳನ್ನು ಮನೆಗೆ ಕರೆದು ಸೀರೆ, ಬಂಗಾರ, ಲಕ್ಷಗಟ್ಟಲೆ ಹಣ ಕೊಡುವುದು ಮಾಡುತ್ತಾರೆ. ಈ ದಂಧೆ ಯತ್ನಾಳಗೆ ಗೊತ್ತು ಇಲ್ಲ ಎಂದು ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಿರಾಣಿ ಬಚ್ಚಾ ಅದಾನೋ ನನಗೆ ಗೊತ್ತಿಲ್ಲ. ಅದು ಜನರಿಗೆ ಗೊತ್ತಿದೆ. ಮೊನ್ನೆ ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ ನೋಡಿ ಹತಾಶರಾಗಿದ್ದಾರೆ ಶಾಕರು ವಾಗ್ದಾಳಿ ನಡೆಸಿದರು.
ಸಿಎಂ ಬಸವರಾಜ ಬೊಮ್ಮಾಯಿಗೆ ಎಚ್ಚರಿಕೆ
ಇದೇ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಚನ ಭ್ರಷ್ಟಾರಾದರೆ ಕುಮಾರಸ್ವಾಮಿ ಅವರಿಗಾದ ಗತಿ ನಿಮಗೂ ಆಗುತ್ತೆ. ಡಿ. 29 ರಂದು ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಮೀಸಲಾತಿ ಘೋಷಣೆ ಆಗುವ ಭರವಸೆ ಇದೆ. 2ಎ ಸಮಾನವಾದ ಮೀಸಲಾತಿ ಸಿಗುತ್ತದೆ. ತಾಯಿ ಆಣೆ ಮಾಡಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿ ನೀಡುವುದಾಗಿ ತಾಯಿ ಆಣೆ ಮಾಡಿದ್ದಾರೆ. ತಾಯಿ ಆಣೆ ಮಾಡಿದ್ಮೇಲೆ ಕೊಡಲಿಲ್ಲ ಎಂದರೆ ಏನಾಗುತ್ತದೆ ನೋಡಿ. ಆಣೆ ಮಾಡಿದ ಮೇಲೂ ಎಚ್. ಡಿ. ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ನೀಡಲಿಲ್ಲ. ಅದಕ್ಕಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ವಚನ ಭ್ರಷ್ಟತೆ ಮಾಡಬಾರದು ಎಂಬ ಕಾರಣಕ್ಕಾಗಿ ಸಿಎಂ ಭರವಸೆ ಈಡೇರಿಸುತ್ತಾರೆ ಎಂದು ಅವರು ತಿಳಿಸಿದರು.
ಬೇರೆ ಸಮಾಜದವರು ಮೀಸಲಾತಿ ಕೇಳುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಸರಕಾರ ಎಲ್ಲವನ್ನೂ ಪರಿಶೀಲಿಸಿ ನಮಗೆ ಮೀಸಲಾತಿ ನೀಡುವ ವಿಶ್ವಾಸವಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.