ವಿಜಯಪುರ: ಶಿಸ್ತಿನ ಪಕ್ಷದಲ್ಲಿ ಸ್ವಾರ್ಥ ಹೆಚ್ಚಾದಾಗ ಆಂತರಿಕ ಕಚ್ಚಾಟ ಹೆಚ್ಚಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಚಿವರು ಮತ್ತು ಶಾಸಕರ ಮಧ್ಯೆ ನಡೆಯುತ್ತಿರುವ ಕಿತ್ತಾಟದಿಂದ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.
ಎಲ್ಲ ಕಾಲದಲ್ಲಿ ಎಲ್ಲ ಪಕ್ಷಗಳಲ್ಲಿಯೂ ಆಂತರಿಕ ಕಿತ್ತಾಟ ಇದ್ದೆ ಇದೆ. ನಮ್ಮ ಪಕ್ಷದಲ್ಲಿ ಬೇರೆ ಪಕ್ಷಗಳಿಗಿಂತ ಕಡಿಮೆ ಕಿತ್ತಾಟವಿದೆ. ಹಿಂದೆ ವೀರಪ್ಪ ಮೋಯ್ಲಿ ಸಿಎಂ ಆಗಿದ್ದಾಗ, ಸಚಿವ ಸಂಪುಟ ಸಭೆಯಲ್ಲಿ ಉಪಹಾರದ ತಟ್ಟೆಗಳನ್ನು ಎಸೆದಾಡಿದ್ದರು. ಹಾವನೂರ ವರದಿ ಜಾರಿಗೆ ತರುವಾಗ ಕುಡಿಯುವ ನೀರಿನ ಗ್ಲಾಸನ್ನು ಮುಖ್ಯಮಂತ್ರಿಯ ಮೇಲೆ ಎಸೆದ ಇತಿಹಾಸವಿದೆ. ಆದರೆ, ಬಿಜೆಪಿಯಂಥ ಶಿಸ್ತಿನ ಪಕ್ಷದಲ್ಲಿ ಸ್ವಾರ್ಥ ಹೆಚ್ಚಾದಾಗ ಇಂಥ ಸನ್ನಿವೇಶಗಳು ಬರುತ್ತವೆ ಎಂದು ಅವರು ಹೇಳಿದರು.
ಒಳ ಮೀಸಲಾತಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೀಸಲಾತಿ ಉದ್ದೇಶ ಈಡೇರಿಸಲು ಅಗತ್ಯವಾಗಿರುವ ಎಲ್ಲ ಕ್ರಮಗಳನ್ನು ನಮ್ಮ ಸರಕಾರ ಕೈಗೊಂಡಿದೆ. 101 ಜಾತಿಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಯಾರಿಗೂ ಅನ್ಯಾಯ ಮಾಡಲು ಬಿಡುವುದಿಲ್ಲ. ರಾಜ್ಯದಲ್ಲಿ ತಕ್ಕಲಿಗರು ಸಮುದಾಯದ 1702 ಜನ ಮಾತ್ರ ಇದ್ದಾರೆ. ಆ ಸಮುದಾಯದಲ್ಲಿ ಒಬ್ಬರೂ ಸರಕಾರಿ ನೌಕರರಿಲ್ಲ. ಅಂಥ ಸಣ್ಣ ಸಮುದಾಯಕ್ಕೂ ಆದ್ಯತೆ ಸಿಗಬೇಕು. ಇಂದಿನ ಜಾತಿ ವ್ಯವಸ್ಥೆಯಲ್ಲಿ ಆ ಸಮುದಾಯದವರು ಮಾದರ ಮನೆಗೆ ಹೋಗಿ ಭಿಕ್ಷೆ ಕೇಳುತ್ತಾರೆ. ನೀರು ಹಾಕಿಸಿಕೊಂಡು ಕುಡಿಯುತ್ತಾರೆ. ಅವರಿಗೂ ಮೀಸಲಾತಿ ಸಿಗಬೇಕು. ಎಲ್ಲ ವರ್ಗಕ್ಕೂ ನ್ಯಾಯ ಸಿಗುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.
ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪಿಸುವ ವಿಚಾರ
ಜನಾರ್ಧನರೆಡ್ಡಿ ಅವರೊಂದಿಗೆ ಸಂಪರ್ಕ ಕಡಿಮೆಯಿದೆ. ಈ ಮುಂಚೆ ಒಂದೇ ಪಕ್ಷದಲ್ಲಿದ್ದೇವು. ಸಚಿವ ಸಂಪುಟದಲ್ಲಿಯೂ ಅವರು ಜೊತೆಗಿದ್ದರು. ಅವರು ಹೊಸ ಪಕ್ಷ ಸ್ಥಾಪಿಸುವುದಾಗಲಿ ಅಥವಾ ಪಕ್ಷ ಬಿಡುವುದರ ಬಗ್ಗೆಯಾಗಲಿ ನನ್ನ ಜೊತೆ ಆತ್ಮೀಯವಾಗಿ ಹೇಳಿಲ್ಲ. ಆ ಬಗ್ಗೆ ಯಾವತ್ತೂ ಮಾತನಾಡಿಲ್ಲ ಎಂದು ಸಚಿವರು ತಿಳಿಸಿದರು.
ಜನಾರ್ಧನರೆಡ್ಡಿ ಹೊಸ ಪಕ್ಷ ರಚನೆಯಿಂದ ಬಿಜೆಪಿ ಮೇಲಾಗುವ ಪರಿಣಾಮದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎಷ್ಟೋ ಹೊಸ ಪಕ್ಷಗಳು ಸ್ಥಾಪನೆಯಾಗಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಗಾಳಿಯಲ್ಲಿ ಎಲ್ಲವೂ ತೇಲಿ ಹೋಗಿವೆ. ಗುಜರಾತಿನಲ್ಲಿ ಆಮ್ ಆದ್ಮಿ ಪಾರ್ಟಿಗೆ ಭಾರಿ ಬೆಂಬಲ ಸಿಗಲಿದೆ ಎಂದು ನೀವು ಮಾಧ್ಯಮದವರೇ ಹೇಳಿದ್ದೀರಿ. ಆದರೆ, ಏನೂ ಆಗಲಿಲ್ಲ. ಈಗಲೂ ಏನೂ ಆಗುವುದಿಲ್ಲ ಎಂದು ಅವರು ಹೇಳಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಮ ಬಂಧನ, ಜಾಮೀನು ವಿಚಾರ
ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರ ಬಂಧನ ಮತ್ತು ಜಾಮೀನು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಚಿವರು ರೂ. 50 ಕೋ. ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ಅದನ್ನು ನ್ಯಾಯಾಲಯ ನಿರ್ಧರಿಸಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು.
ಕೆಂಪಯ್ಯನವರ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ಸಿನವರ ಮಾತು ಕೇಳಿ ಬಿಜೆಪಿ ಸರಕಾರದ ಮೇಲೆ ಆರೋಪ ಹೊರಿಸಿದ್ದಾರೆ. ನಾನು ಅದೇ ದಿನ ಕೆಂಪಯ್ಯನವರಿಗೆ ಯಾವ ಇಲಾಖೆಯಲ್ಲಿ ಯಾವ ಕೆಲಸ ಮಾಡಿದ್ದೀರಿ? ಎಷ್ಟು ಮೊತ್ತದ ಕೆಲಸ ಮಾಡಿದ್ದೀರಿ? ಯಾರಾರಿಗೆ ಲಂಚ ನೀಡಿದ್ದೀರಿ ಎಂದು ಪ್ರಶ್ನಿಸಿದ್ದೆ. ಆದರೆ, ಅವರು ಉತ್ತರಿಸಿಯೇ ಇಲ್ಲ. ಈಗ ಸುಳ್ಳು ಯಾವುದು? ಸತ್ಯ. ಯಾವುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಜಿಎಸ್‌ಟಿ, ಆದಾಯ ತೆರಿಗೆ, ರಾಯಲ್ಟಿ, ಸೆಸ್ ಸೇರಿ ಶೇ. 20ಕ್ಕೂ ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ. ಇದರ ಜೊತೆ ಶೇ. 40 ಲಂಚ ಸೇರಿದರೆ ಶೇ. 60 ರಷ್ಟು ಹಣವನ್ನು ಹೀಗೆ ನೀಡಿದರೆ, ಉಳಿದ ಶೇ. 40 ರಷ್ಟು ಹಣದಲ್ಲಿ ಕೆಲಸ ಮಾಡಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಗುತ್ತಿಗೆದಾರರಿಗೆ ಸಚಿವ ಕಾರಜೋಳ ಕಿವಿಮಾತು
ಗುತ್ತಿಗೆದಾರರಿಗೆ ನಿಷ್ಠುರವಾಗಿ ಹೇಳಲು ಬಯುಸುತ್ತೇನೆ. ನೀವು ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದೀರಿ. ನಿಮಗೆ ಉದ್ಯೋಗ ಸಿಕ್ಕಿದೆ. ಯಾವುದೇ ಸರಕಾರವಿರಲಿ. ಇದನ್ನು ಮರೆಯಬೇಡಿ. ಬ್ರಿಟೀಷರ ಕಾಲದಲ್ಲಿಯೂ ಆರೋಪಗಳು, ಪ್ರತ್ಯೋರೋಪಗಳು ಇದ್ದವು. ರಾಜ್ಯಕ್ಕೆ ವಿಧಾನಸೌಧ ಕಟ್ಟಿಕೊಟ್ಟ ಕೆಂಗಲ್ ಹನುಮಂತಯ್ಯ ವಿರುದ್ಧವೂ ಇಂಥದ್ದೆ ಆರೋಪ ಮಾಡಿದ್ದರು. ಹಾಗಾದರೆ ಆರೋಪಗಳಿಗೆ ಹೆದರಿ ಕೆಲಸ ಮಾಡದೇ ಮಲಗಿಕೊಂಡು ಹೋಗಬೇಕಾ? ಇಂಥ ಆರೋಪಗಳು ಸಾಮಾನ್ಯವಾಗಿದ್ದು, ನಾವು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಿ ಕೆಲಸ ಮಾಡುತ್ತ ಮುಂದುವರೆಯಬೇಕು ಎಂದು ಸಚಿವರು ಹೇಳಿದರು.
ಅಧಿಕಾರಿಗಳಿಂದ ಬೇನಾಮಿ ಹೆಸರಿನಲ್ಲಿ ಕಾಮಗಾರಿ ನಡೆಸುತ್ತಿರುವ ಆರೋಪ ವಿಚಾರ
ಹಿರಿಯ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ನಾನಾ ಕಾಮಗಾರಿಗಳನ್ನು ಗುತ್ತಿಗೆ ಪಡೆಯುತ್ತಿರುವ ಆರೋಪ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರ ಕಾಲದಲ್ಲಿಯೂ ಆರೋಪಗಳು ಇರುತ್ವೆ. ಕೆಂಗಲ ಹನುಮಂತಯ್ಯ ಕಾದಲಲ್ಲಿಯೂ ಆರೋಪಗಳಿದ್ದವು. ಈ ರೀತಿ ಆರೋಪಗಳು ಇದ್ದೇ ಇರುತ್ತವೆ. ಇಂಥ ಆರೋಪಗಳ ಕುರಿತು ಪರಿಶೀಲನೆ ನಡೆಸಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾರೋ ಹೇಳಿದ ತಕ್ಷಣ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಸತ್ಯ, ಅಸತ್ಯ ನೋಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳ ಬೇನಾಮಿ ಕೆಲಸಗಳಿಂದ ಸಚಿವರಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂಬ ವಿಷಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಗೋವಿಂದ ಕಾರಜೋಳ, ಅದನ್ನು ತನಿಖೆ ನಡೆಸಿ ಸಾಬೀತು ಮಾಡಿದಾಗ ಮಾತ್ರ ಏನಾದರೂ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾರೋ ಆರೋಪ ಮಾಡಿದಾಕ್ಷಣ ಎಲ್ಲರನ್ನು ಜೈಲಿಗೆ ಹಾಕಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.