ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಭಾಗಕ್ಕೆ ನೀರಾವರಿ ಕಲ್ಪಿಸಲು ರೂಪಿಸಲಾಗಿರುವ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಲು ಶತಪ್ರಯತ್ನ ಮಾಡುತ್ತಿರುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಜಯಪುರದಲ್ಲಿ ಆಲಮಟ್ಟಿ ಜಲಾಷಯದ ಹಿನ್ನೀರಿನಿಂದ ಮುಳುಗಡೆಯಾಗುವ ನಾನಾ ಗ್ರಾಮಗಳ ಸಂತ್ರಸ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆಲಮಟ್ಟಿ ಜಲಾಷಯ ಎತ್ತರ ಹೆಚ್ಚಳದಿಂದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಗ್ರಾಮಗಳ ಜಮೀನು ಮತ್ತು ಆಸ್ತಿಪಾಸ್ತಿ ಕಳೆದುಕೊಳ್ಳುವ ಜನರಿಗೆ ನೀಡಬೇಕಿರುವ ಪರಿಹಾರದ ಮೊತ್ತವನ್ನು ಸರಕಾರ ಕಳೆದ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚಳ ಮಾಡಿದೆ.
ಕೃಷ್ಣಾ ನದಿಯ ಎಡದಂಡೆಯಲ್ಲಿ ಮುಳುಗಡೆಯಾಗಲಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ 14 ಗ್ರಾಮಗಳು ಕೊಲ್ಹಾರ ತಾಲೂಕಿನ 6 ಗ್ರಾಮಗಳು, ನಿಡಗುಂದಿ ತಾಲ್ಲೂಕಿನ 9 ಗ್ರಾಮಗಳು ಮುಳುಗಡೆಯಾಗಲಿವೆ. ಈ ಗ್ರಾಮಗಳ ಜಮೀನುಗಳ ಭೂ ಪರಿಹಾರದಲ್ಲಿ ವ್ಯತ್ಯಾಸ ಉಂಟಾಗಿತ್ತು. 2016-17 ರಲ್ಲಿ ಈ ಗ್ರಾಮಗಳ ಮಾರ್ಗದರ್ಶಿ ಬೆಲೆ ಪರಿಷ್ಕೃತ ಗೊಂಡ ನಂತರ ಈವರೆಗೆ ಪರಿಷ್ಕೃತ ಆಗಿರಲಿಲ್ಲ. ರೈತರಿಗೆ ಆಗಿರುವ ಅನ್ಯಾಯವನ್ನು ಪರಿಗಣಿಸಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದರ ಪರಿಷ್ಕರಣೆ ಮಾಡುವಂತೆ ಸರಕಾರದ ಮೇಲೆ ಒತ್ತಡ ತಂದಿದ್ದರು. ಇದನ್ನು ಪರಿಗಣಿಸಿ ರಾಜ್ಯ ಸರಕಾರ ಏಕರೂಪದ ಬೆಲೆ ಮತ್ತು ಸಮ್ಮತಿ ಐ ತೀರ್ಪನ್ನು ರಚಿಸಲು ಅನುಮೋದನೆ ನೀಡಿದೆ.
ಈ ಗ್ರಾಮಗಳಲ್ಲಿ ಪ್ರತಿ ಎಕರೆ ಒಣ ಭೂಮಿಗೆ ರೂ. 5 ಲಕ್ಷ ಮತ್ತು ಪ್ರತಿ ಎಕರೆ ನೀರಾವರಿ ಅಥವಾ ಬಾಗಾಯತ್ ಭೂಮಿಗೆ ರೂ. 6 ಲಕ್ಷ ಹಾಗೂ ಕಟ್ಟಡಗಳಿಗೆ ಸವಕಳಿ ರಹಿತವಾಗಿ ಶೇ. 20 ರಷ್ಟು ಹೆಚ್ಚುವರಿ ಮೊತ್ತವನ್ನು ಸೇರಿಸಿ, ಪರಿಹಾರವನ್ನು ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಈ ಐತಿಹಾಸಿಕ ತೀರ್ಮಾನ ವಿಜಯಪುರ ಜಿಲ್ಲೆಯ ಬಬಲೇಶ್ವರ, ನಿಡಗುಂದಿ ಮತ್ತು ಕೊಲ್ಹಾರ ತಾಲೂಕುಗಳಲ್ಲಿ ಹೋರಾಟ ಮಾಡುತ್ತಿದ್ದ ರೈತರಿಗೆ ಗೌರವ ಸಿಕ್ಕಂತಾಗಿದೆ.
ಸರಕಾರದ ಈ ನಿರ್ಣಯದಿಂದ ಬಬಲೇಶ್ವರ ತಾಲೂಕಿನ ಹಂಗರಗಿ, ಬೆಳ್ಳುಬ್ಬಿ, ಜೈನಾಪೂರ, ಮಂಗಳೂರ, ತಾಜಪೂರ, ದೇವರಗೆಣ್ಣೂರ, ಲಿಂಗದಳ್ಳಿ, ಸುತಗುಂಡಿ, ಹೊಸೂರ, ಚಿಕ್ಕಗಲಗಲಿ, ಜಂಬಗಿ, ಬಬಲಾದ, ಶಿರಬೂರ, ಕಣಬೂರ, ನಿಡಗುಂದಿ ತಾಲೂಕಿನ ನಿಡಗುಂದಿ, ಚಿಮ್ಮಲಗಿ, ಬೇನಾಳ, ವಂದಾಲ, ಮುಜರೆಕೊಪ್ಪ, ದೇವಲಾಪೂರ, ಗೋನಾಳ, ಮಾರಡಗಿ, ಗಣಿ, ಕೊಲ್ಹಾರ ತಾಲೂಕಿನ ಅರಷಣಗಿ, ಬಳೂತಿ, ಹಳೆರೊಳ್ಳಿ, ಸಿದ್ಧನಾಥ, ಮಟ್ಟಿಹಾಳ, ಕೊಲ್ಹಾರ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ.
ಈ ಹಿನ್ನೆಲೆಯಲ್ಲಿ ಮುಳುಗಡೆ ಸಂತ್ರಸ್ತರು ವಿಜಯಪುರಕ್ಕೆ ಆಗಮಿಸಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಲ ಅವರಿಗೆ ಸನ್ಮಾನಿಸಿ ಸಂತಸ ಪಟ್ಟರು.
ಆದರೆ, ನನಗೆ ಸನ್ಮಾನ ಮಾಡಬೇಡಿ. ನಾನೂ ಕೂಡ ಈ ಭಾಗದವನಾಗಿ ನನ್ನ ಕೆಲಸ ಮಾಡಿದ್ದೇನೆ. ಪರಿಹಾರ ದರ ಪರಿಷ್ಕರಣೆ ದೃಢ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾವೆಲ್ಲರೂ ಸೇರಿಕೊಂಡು ಸನ್ಮಾನ ಕಾರ್ಯಕ್ರಮ ಆಯೋಜಿಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಸವನಾಡಿನ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಪ್ರಸ್ತಾಪಿಸಿದ ಗೋವಿಂದ ಕಾರಜೋಳ, ರೂ. 3000 ಕೋ. ಬೃಹತ್ ವೆಚ್ಚದ ಈ ಯೋಜನೆಯ ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರಲು ಶತಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಒಂದು ವೇಳೆ ಪ್ರಧಾನಿ ಅವರಿಗೆ ಬರಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ರಮೇಶ ಶೇಬಾನಿ, ಎಚ್. ಆರ್. ಬಿರಾದಾರ, ಪ್ರಭುಸ್ವಾಮಿ ಹಿರೇಮಠ, ಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ, ಜಿ. ಪಂ. ಮಾಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಜಿ. ಡಿ. ಅಂಗಡಿ, ಶೇಖಪ್ಪ ಚಿಕ್ಕಗಲಗಲಿ, ಆರ್. ಪಿ. ಕೊಡಬಾಗಿ ಮುಂತಾದವರು ಉಪಸ್ಥಿತರಿದ್ದರು.