ವಿಜಯಪುರ: ಸ್ವಲ್ಪ ಅಧಿಕಾರ ಸಿಕ್ಕರೆ ಸಾಕು ಮನೆಯವರನ್ನೇ ಕ್ಯಾರೆ ಎನ್ನದ ಜನ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದರೂ ಅದರ ಬಗ್ಗೆ ಯಾವುದೇ ಹಂಗು ಬಿಂಗಿಲ್ಲದೇ ಪಾಠ ಮಾಡಿದ ಗುರುಗಳ ಪಾದಪೂಜೆ ಮಾಡುವ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಸಹಪಾಠಿಗಳು ಗಮನ ಸೆಳೆದಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿಗಳು ಮೂಲತಃ ಗದಗ ಜಿಲ್ಲೆಯವರು. ಆದರೆ, ಅವರು ಓದಿದ್ದು ಮಾತ್ರ ರಾಜ್ಯದ ಮೊದಲ ಮತ್ತು ದೇಶಕ್ಕೆ ನಾನಾ ಕ್ಷೇತ್ರಗಳಿಗೆ ನೂರಾರು ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ನೀಡಿದ ಹೆಮ್ಮೆಯ ಸೈನಿಕ ಶಾಲೆಯಲ್ಲಿ. ಈಗ ಸುದೈವದಿಂದ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಾವು ಶಾಲೆ ಕಲಿತ ಸೈನಿಕ ಶಾಲೆಯಾಗಿರುವ ವಿಜಯಪುರದ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಸುಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಅವರೊಂದಿಗೆ 1996ರ ಬ್ಯಾಚಿನಲ್ಲಿ ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳೆಲ್ಲರೂ ಸೇರಿ ವಿಶಿಷ್ಠ, ವೈಶಿಷ್ಟ್ಯಪೂರ್ಣ ಮತ್ತು ಶಿಸ್ತುಬದ್ಧವಾಗಿ ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಗುರುಗೌರವ ಸಲ್ಲಿಸಿದರು.
ವಿಜಯಪುರ ನಗರದ ಸೈನಿಕ ಶಾಲೆಯ ಕಂಠಿ ಸಭಾಂಗಣದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ತಮಗೆ ವಿದ್ಯೆ ನೀಡಿದ ಗುರುಗಳಿಗೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪಾದ ಪೂಜೆ ಮಾಡಿ ನಮಸ್ಕರಿಸಿ ಧನ್ಯತಾಭಾವ ತೋರಿದರು. ಈ ಬ್ಯಾಚಿನಲ್ಲಿ ಕಲಿತಿರುವ ವಿದ್ಯಾರ್ಥಿಗಳು ಈಗ ದೇಶವಷ್ಟೇ ಅಲ್ಲ, ಯುರೋಪ್, ಯುಎಸ್, ಯುಕೆ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ನಾನಾ ದೇಶಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಲಾ ಮೂರು ಜನ ಭಾರತೀಯ ಸೇನೆ ಹಾಗೂ ವಾಯುಸೇನೆ ಹಾಗೂ ಓರ್ವ ಐಎಎಸ್, ಕೆಲವರು ಕೆಎಎಸ್ ಅಧಿಕಾರಿಗಳಾಗಿ, ವೈದ್ಯರಾಗಿ, ಶಿಕ್ಷಕರಾಗಿ, ರಾಜಕೀಯ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಬ್ಯಾಚಿನ ಎಲ್ಲ 85 ಜನ ವಿದ್ಯಾರ್ಥಿಗಳು ಸೇರಿಕೊಂಡು ಆಯೋಜಿಸಿದ್ದ ಈ ಗುರುವಂದನೆ ಕಾರ್ಯಕ್ರಮವನ್ನು ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಠ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ವಿದ್ಯಾರ್ಥಿಗಳ ಭವಿಷ್ಯ ಭದ್ರವಾಗಿರಲು ಶಿಕ್ಷಕರ ಪ್ರಮುಖ ಪಾತ್ರ ವಹಿಸುತ್ತಾರೆ. ಶೈಕ್ಷಣಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾದ ಒದಗಿಸಿ ಅವರ ಭವಿಷ್ಯವನ್ನು ಉತ್ತಮವಾಗಿರಲು ಶ್ರಮಿಸುತ್ತಾರೆ. ಅಂಥ ಶಿಕ್ಷಕರನ್ನು ಗೌರವಿಸುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಗುರು ತನ್ನ ಶಿಷ್ಯ ತನಗಿಂತ ಹೆಚ್ಚು ವಿದ್ಯಾರ್ಜನೆ ಮಾಡಿ ವಿದ್ವಾಂಸನಾಗಬೇಕು ಎಂದು ಬಯಸುತ್ತಾರೆ. ಇಂಥ ಗುರು-ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಗುರುವಂದನಾ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹವಾಗಿದೆ. ಅಷ್ಚೇ ಅಲ್ಲ, ಯುವ ಪೀಳಿಗೆಗೂ ಸ್ಪೂರ್ತಿದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
2021ರಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಕೊರೊಿನಾ ಹಿನ್ನೆಲೆಯಲ್ಲಿ ಈ ವರ್ಷ ಆಯೋಜಿಸಲಾಗಿತ್ತು. 1989ರಲ್ಲಿ 5ನೇ ತರಗತಿಗೆ ಸೈನಿಕ ಶಾಲೆಯಲ್ಲಿ ಪ್ರವೇಶ ಪಡೆದು, 1996ರ ಈ ಬ್ಯಾಚಿನಲ್ಲಿಯೇ ನಾನೂ ಒಬ್ಬ ವಿದ್ಯಾರ್ಥಿಯಾಗಿದ್ದೆ ಎಂಬುದು ನನಗೆ ಹೆಮ್ಮೆಯಾಗುತ್ತಿದೆ. ನಾನು ಶಿಕ್ಷಣ ಪಡೆದ ಜಿಲ್ಲೆಯಲ್ಲಿಯೇ ನಾನು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು, ಈ ಜಿಲ್ಲೆಯ ಋಣಾನುಭಂಧವಾಗಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.
1996ರ ಬ್ಯಾಚಿನ ನಾನಾ ವಿದ್ಯಾರ್ಥಿಗಳು ತಮ್ಮ ಜೀವನದ ಅನುಭವಗಳ ಕುರಿತು ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಅತ್ಯಮೂಲ್ಯ ಸಲಹೆ, ವಿಚಾರಗಳನ್ನು ಹಂಚಿಕೊಂಡು ತಮ್ಮ ವಿದ್ಯಾರ್ಥಿ ಜೀವನದ ಘಟ್ಟಗಳ ಕುರಿತು ಮೆಲಕು ಹಾಕಿ, ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡಿ, ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ಶಿಕ್ಷಣ ಪಡೆದ ಶಿಕ್ಷಕರ ಗೌರವ ಹೆಚ್ಚಿಸಬೇಕು. ಸೈನಿಕ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಅಳಿಲು ಸೇವೆ ಸಲ್ಲಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಶಿಷ್ಯಂದಿರಿಂದ ಗೌರವ ಸನ್ಮಾನ ಸ್ವೀಕರಿಸಿದರು ನಾನಾ ಶಿಕ್ಷಕರು ಮಾತನಾಡಿ, 1996ರ ಬ್ಯಾಚಿನ ಹಳೆಯ ವಿದ್ಯಾರ್ಥಿಗಳು 25 ವರ್ಷ ಕಳೆದರೂ, ಇಂಥ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಮೂಲಕ ತಮ್ಮ ಶಿಸ್ತು-ಬದ್ಧತೆಯನ್ನು ತೋರಿದ್ದಾರೆ. ಅವರು ತೋರಿದ ಆದರ, ಸತ್ಕಾರ, ಗೌರವ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ 1996 ಬ್ಯಾಚಿನ ಶಿಕ್ಷಕರಾದ ಟಿ.ಜಿ.ಸುಬ್ರಮಣಿಯಂ, ಸಿ.ಕೆ.ರಾವ್, ಮಾಧವನ್ ಪೊನ್ನಣ್, ಅಸ್ಲಮ್ ಖಾನ್, ಮಣಿಕವಸಗಮ್, ಸಿ.ವಾಯ್.ಬಡಿಗೇರ, ಮಸಿಲ್‍ಮಣಿ, ವಿ.ಎನ್.ಮನ್ನಾಪುರ, ಆರ್.ಕೆ.ಇನಾಂದಾರ, ಎಸ್.ಕೆ.ನಾಯಕ್, ಬಿ.ಎಸ್.ಹಂಚಿನಾಳ, ಸಿ.ಎನ್.ಜಾಧವ, ಡಿ.ವಿಜಯಕುಮಾರ, ಕೆ.ದಾಮೋದರ, ರಾಮಮೂರ್ತಿ, ಸಿ.ಎಂ.ಹಿರೇಮಠ, ಎಂ.ಎಚ್.ಸುರೇಶ, ರಾಮರಾವ್, ಎಸ್.ಬಿ.ಸತ್ತಿಕರ, ಎಂ.ಪಿ.ದೇಸಾಯಿ, ಎಂ.ಯು.ನಾಯಕ್, ಮೊಹಾಂತಿ, ಎಸ್. ವಿ. ಜೋಸೆಫ್, ಬಸವರಾಜ ಕಡ್ಲಿ ಹಾಗೂ ಎಸ್. ವಾಯ್. ಪಾಟೀಲ ಮುಂತಾದವರು ಭಾಗವಹಿಸಿದ್ದರು.
1996ರ ಬ್ಯಾಚಿನ್ ಶಾಲಾ ಕ್ಯಾಪ್ಟನ್ ಅಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ್ಯ ಕಮಾಂಡರ್ ಸುರುಚಿ ಕೌರ್, ಆಡಳಿತಾಧಿಕಾರಿ ಸ್ಕ್ವಾಡನ್‍ಲೀಡರ್ ಆಕಾಶ ವತ್ಸ, ಹಿರಿಯ ಶಿಕ್ಷಕ ಸಿ. ರಾಮರಾವ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಫೀ ಟೇಬಲ್ ಪುಸ್ತಕ ಬಿಡುಗಡೆ ಮಾಡಲಾಯಿತು. ಪೂಜಾ ಭೂಯ್ಯಾರ ಹಾಗೂ ತಂಡದವರು ಪ್ರಾರ್ಥಿಸಿದರು. ಮಹಾಂತೇಶ ಶೆಟ್ಟರ ಸ್ವಾಗತಿಸಿದರು. ಅಲ್ತಾಫ್ ಕೋಜ್ ಮತ್ತು ಪೊನ್ನಪ್ಪ ನಿರೂಪಿಸಿದರು. ಎಸ್. ಆರ್. ಪಾಟೀಲ ವಂದಿಸಿದರು.