ದೇಶದಲ್ಲಿ ಶಾಂತಿ, ಸೌಹಾರ್ಧತೆ ಸಂದೇಶ ಸಾರಲು ರಾಜಸ್ಥಾನದಿಂದ ಕನ್ಯಾಕುಮಾರಿಗೆ ಅಬ್ದುಲ್ ಗಫೂರ್ ಸೈಕಲ್ ಯಾತ್ರೆ- 7000 ಕಿ. ಮೀ. ಸಂಚಾರ ಕೈಗೊಂಡಿರುವ ದೇಶಭಕ್ತ

ವಿಜಯಪುರ: ದೇಶದಲ್ಲಿ ಕೋಮು ಸೌಹಾರ್ಧತೆ ಸೂಕ್ಷ್ಮವಾಗಿರುವ ಈ ದಿನಗಳಲ್ಲಿ ಶಾಂತಿ, ಸೌಹಾರ್ಧತೆಯ ಸಂದೇಶ ಸಾರಲು ರಾಜಸ್ತಾನದ ಪೇಂಟರೊಬ್ಬರು ಸೈಕಲ್ ಮೂಲಕ ಭಾರತ ಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾರೆ.

ರಾಜಸ್ತಾನದ ಜೋಧಪುರದ ಸೂರ್ಯನಗರಿಯಿಂದ ಸೈಕಲ್ ಯಾತ್ರೆ ಕೊಗೊಂಡಿರುವ 47 ವರ್ಷದ ಅಬ್ದುಲ್ ಗಫೂರ ಬಸವ ನಾಡು ವಿಜಯಪುರಕ್ಕೆ ಆಗಮಿಸಿದ್ದಾರೆ.  ತಮ್ಮ ಸಂಚಾರದುದ್ದಕೂ ಸಿಗುವ ದರ್ಗಾ, ದೇವಸ್ಥಾನ, ಚರ್ಚಗಳಿಗೆ ಭೇಟಿ ನೀಡುವ ರೂಢಿ ಇಟ್ಟುಕೊಂಡಿರುವ ಅಬ್ದುಲ್ ಗಫೂರ ಗುಮ್ಮಟ ನಗರಿ ವಿಜಯಪುರದ ಹಳೆಯ ಐಬಿಯಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ ಪ್ರಯಾಣ ಮುಂದುರೆಸಿದರು.

ಈ ಮಧ್ಯೆ ವಿಜಯ ಬಸವನಾಡು ವೆಬ್ ಜೊತೆ ಮಾತನಾಡಿದ ಅವರು, ಇದು ನನ್ನ 5ನೇ ಭಾರತ ಯಾತ್ರೆಯಾಗಿದೆ.  ಈ ಬಾರಿ ರಾಜಸ್ತಾನದ ಜೋಧಪುರದಿಂದ ಗುಜರಾತ, ಮಹಾರಾಷ್ಟ್ರ ಮಾರ್ಗವಾಗಿ ಈಗ ಕರ್ನಾಟಕಕ್ಕೆ ಆಗಮಿಸಿದ್ದೇನೆ.  ಇಲ್ಲಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶ ಮಾರ್ಗವಾಗಿ ತಮಿಳುನಾಡಿಗೆ ಸಂಚಾರ ಮಾಡುತ್ತೇನೆ.  ಒಟ್ಟು 7000 ಕಿ. ಮೀ. ಸೈಕಲ್ ಯಾತ್ರೆ ಇದಾಗಿದ್ದು, ಪ್ರತಿದಿನ 100 ಕಿ.ಮೀ. ಸೈಕಲ್ ತುಳಿಯುತ್ತೇನೆ.  ಮಾರ್ಗ ಮಧ್ಯೆ ದರ್ಗಾ ಇಲ್ಲವೇ ಮಂದರಿ ಅಥವಾ ಇನ್ನುಳಿದ ಧಾರ್ಮಿಕ ಸ್ಥಾನಗಳಲ್ಲಿ ರಾತ್ರಿ ವಿಶ್ರಾಂತಿ ಪಡೆದು ಮತ್ತೆ ಸೈಕಲ್ ಯಾತ್ರೆ ಮುಂದುವರೆಸುತ್ತೇನ.ೆ  ನನ್ನ ಈ ಯಾತ್ರೆಯಲ್ಲಿ ಎಲ್ಲ ವರ್ಗಗಳ ಜನರು ಅತ್ಯಂತ ಪ್ರೀತಿ ತೋರುತ್ತಿದ್ದಾರೆ.  ಇದು ನನಗೆ ಮತ್ತಷ್ಟು ಶಕ್ತಿ ನೀಡುತ್ತಿದೆ ಎಂದು ತಿಳಿಸಿದರು.

ಅಬ್ದುಲ್ ಗಫೂರ

ಅಬ್ದುಲ್ ಗಫೂರ್ ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಎಲ್ಲರಿಗೂ ಮುದುವೆಯಾಗಿದೆ.  ನಾನು ಈಗ ಇಂಥ ಯಾತ್ರೆಗಳನ್ನು ಕೈಗೊಂಡು ದೇಶದಲ್ಲಿ ಹದಗೆಡುತ್ತಿರುವ ಶಾಂತಿ, ಸೌಹಾರ್ಧತೆ, ಭ್ರಾತೃತ್ವ ಸಾರುತ್ತಿದ್ದೇನೆ.  ನವೆಂಬರ್ 10 ರಂದು ಈ ಸೈಕಲ್ ಯಾತ್ರೆ ಆರಂಭಿಸಿದ್ದು, ಜನೇವರಿ 5ರ ವರೆಗೆ ತ್ರಿಚಿ ಮತ್ತು ಕನ್ಯಾಕುಮಾರಿ ತಲುಪಿ ಯಾತ್ರೆಯನ್ನು ಪೂರ್ಣಗೊಳಿಸುತ್ತೇನೆ ಎಂದು ಅವರು ತಿಳಿಸಿದರು.

ಅಬ್ದುಲ್ ಗಫೂರ್ ಅವರ ಸೈಕಲ್ ಕೂಡ ವಿಶೇಷವಾಗಿದ್ದು, ಅದರ ಮೇಲೆ ತಮ್ಮ ಯಾತ್ರೆಯ ಉದ್ದೇಶವನ್ನೂ ಕೂಡ ನಮೂದಿಸಿದ್ದಾರೆ.  ರಾಷ್ಟ್ರಪ್ರೇಮ ಉಕ್ಕಿಸುವ ಮತ್ತು ಹಿರಿಯ ನಟ ದಿಲೀಪ್ ಕುಮಾರ, ಅನಿಲಕಪೂರ ಮುಂತಾದವರು ನಟಿಸಿರುವ ಕರ್ಮಾ ಚಿತ್ರದ ಜನಪ್ರೀಯ ಹಾಡಿನ ಸಾಲುಗಳನ್ನು ಬರೆದಿದ್ದಾರೆ.

ಹರ್ ಕರಮ್ ಅಪನಾ ಕರೆಂಗೆ ಏ ವತನ್ ತೇರೆ ಲಿಯೆ, ದಿಲ್ ದಿಯಾ ಹೈ ಜಾನ್ ಭಿ ದೇಗೆ ಏ ವತನ್ ತೇರೆ ಲಿಯೆ

ಸಬಸೆ ಬಡಾ ರಿಸ್ತಾ ಇನ್ಸಾನಿಯತ್ ಕಾ ರಿಸ್ತಾ, ಜೈ ಹಿಂದ, ಮೇರಾ ಪ್ಯಾರಾ ರಾಜಸ್ತಾನ ಎಂದು ತಮ್ಮ ಸೈಕಲ್ ಗೆ ಬೋರ್ಡು ಹಾಕಿದ್ದಾರೆ.

ಅಷ್ಟೇ ಅಲ್ಲ, ಯೆ ದಿಲ್ ಹೈ ಹಿಂದೂಸ್ತಾನಿ, ಸಾರೆ ಜಂಹಾಸೆ ಅಚ್ಛಾ, ಯೆ ಹಿಂದೂಸ್ತಾನ ಹಮಾರಾ, ಹಮ್ ಬುಲ್ ಬುಲೆ ಹೈ ಇಸ್ಕೆ, ಯೆ ಗುಲ್ಸಿತಾ ಹಮಾರಾ ಎಂದು ಬರೆಯಿಸಲಾದ ಬೋರ್ಡು ಗಮನ ಸೆಳೆಯುತ್ತಿದೆ.

 

ಮಜಹಬ್ ನಹಿ ಸಿಕಾತಾ ಆಪಸ್ ಮೆ ಬೇರ ರಖ್ನಾ, ಹಿಂದ ಹಮ್ ವತನ ಹೈ ಯೆ ಹಿಂದೂಸ್ತಾನ ಹಮಾರಾ

ಭಾರತೀಯ ಹೋನೆಪರ್ ಮುಝೆ ಗರ್ವ್ ಹೈ, ಜೈ ಹಿಂದ್ ಜೈ ಭಾರತ್ ಎಂದು ಬರೆಸಲಾದ ಮತ್ತೋಂದು ಬೋರ್ಡ್ ಸೈಕಲ್‌ ಗೆ ಹಾಕಿದ್ದಾರೆ.  ಇದೆಲ್ಲಕ್ಕಿಂತ ಮಿಗಿಲಾಗಿ ಸೈಕಲ್ ನ ಮುಂಭಾಗ ಮತ್ತು ಹಿಂಭಾಗಗಳಲ್ಲಿ ರಾಷ್ಟ್ರಧ್ವಜಗಳನ್ನು ಕಟ್ಟಿ ದೇಶಭಕ್ತಿ ಮೈನವಿರೇಳಿಸುವಂತೆ ಮಾಡಿದ್ದಾರೆ.

ಇವರ ಯಾತ್ರೆ ಯಶಸ್ವಿಯಾಗಿ, ಇವರು ಸಾರುತ್ತಿರುವ ಸಂದೇಶ ಜನವ್ಯಾಪಿಯಾಗಲಿ ಎಂದು ಹಾರೈಸೋಣ.

Leave a Reply

ಹೊಸ ಪೋಸ್ಟ್‌