Doni Flood: ಡೋಣಿ ನದಿ ಪ್ರವಾಹ ಹಾನಿ- 15 ದಿನಗಳೊಳಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ

ವಿಜಯಪುರ: ಅವೈಜ್ಞಾನಿಕವಾಗಿ ಡೋಣಿ ನದಿಗೆ ಬ್ರಿಡ್ಜ್ ನಿರ್ಮಿಸಿರುವುದರಿಂದ ಪ್ರತಿವರ್ಷ ಪ್ರವಾಹದಿಂದ ಡೋಣಿ ನದಿ ತೀರದಲ್ಲಿರುವ ಗ್ರಾಮಗಳಿಗೆ ನೀರು ಹರಿದು ಬೆಳೆ ನಾಶವಾಗಿರುವುದರಿಂದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ 15 ದಿನಗಳೊಳಗೆ ಸರ್ವೇ ಕಾರ್ಯ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಡೋಣಿ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಪ್ರವಾಹದಿಂದ ಹಾನಿಯಾದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಪ್ರವಾಹದಿಂದ ಡೋಣಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಬಬಲೇಶ್ವರ ತಾಲೂಕಿನ ಸಾರವಾಡ, ಧನ್ಯಾಳ, ದಾಶ್ಯಾಳ ಹಾಗೂ ತಿಕೋಟಾ ತಾಲೂಕಿನ ಕೋಟ್ಯಾಳ, ಹರನಾಳ, ವಿಜಯಪುರ ತಾಲೂಕಿನ ಉಕುಮನಾಳ, ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ, ಯಾಳವಾರ, ತಾಳಿಕೋಟೆ, ದೇವರ ಹಿಪ್ಪರಗಿಯಲ್ಲಿ ಕೃಷಿ ಬೆಳೆ ಮತ್ತು ಬಬಲೇಶ್ವರ ಮತ್ತು ತಿಕೋಟಾ ಭಾಗದಲ್ಲಿ ತೋಟಗಾರಿಕೆ ಬೆಳೆ ಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟವಾಗಿದೆ.  ಈ ಕುರಿತು ಸಂಬಂಧಪಟ್ಟ ತಹಸೀಲ್ದಾರ, ತಾಲೂಕಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಹಾನಿಯಾದ ಪ್ರದೇಶದ ಸರ್ವೇ ಕಾರ್ಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಡೋಣಿ ನದಿ ಪ್ರವಾಹದ ಕುರಿತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

ಪ್ರವಾಹದಿಂದುಂಟಾದ ಹಾನಿಯ ಕುರಿತ ವರದಿಯನ್ನಾಧರಿಸಿ, ಕೇಂದ್ರಕ್ಕೆ ಪತ್ರ ಬರೆದು, ಸ್ಥಳೀಯವಾಗಿ ಲಭ್ಯವಿರುವ ಸಾಧನ ಸಲಕರಣೆಗಳೊಂದಿಗೆ ಕಾರ್ಯಕ್ರಮ ರೂಪರೇಷೆಗಳನ್ನು ತಯಾರಿಸಿ, ಕಾರ್ಯರೂಪಕ್ಕೆ ಯೋಜನೆ ರೂಪಿಸಲಾಗುವುದು.  ಈಗಾಗಲೇ ಭಾರತೀಯ ಜೈನ್ ಸಂಘಟನೆ ಪ್ರವಾಹ, ಭೂಕಂಪ, ನೆರೆಹಾವಳಿ, ಜಲವೃದ್ದಿಕರಣ ಜೊತೆಗೆ ಹಲವಾರು ವಿಕೋಪದ ಸಂದರ್ಭಗಳಲ್ಲಿ ಚಟುವಟಿಕೆಗಳನ್ನು ಮಾಡುತ್ತ ಬಂದಿದೆ.  ಡೋಣಿ ನದಿಗಳ ಹೂಳೆತ್ತುವ ಕಾಮಗಾರಿ, ಡೋಣಿ ನದಿಗೆ ಕಾಯಕಲ್ಪ ನೀಡುವಲ್ಲಿ ಈ ಸಂಘಟನೆ ಮಹತ್ವವಾದ ಕಾರ್ಯಕ್ಕೆ ಸಹಾಯಹಸ್ತ ನೀಡುವುದರೊಂದಿಗೆ ಈ ಕಾರ್ಯ ಕೈ ಜೋಡಿಸಲಿದೆ ಎಂದು ಅವರು ತಿಳಿಸಿದರು.

ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿಗಳಾದ ಕ್ಯಾ. ಮಹೇಶ ಮಾಲಗಿತ್ತಿ, ರಾಮಚಂದ್ರ ಗಡದೆ, ಲೋಕೋಪಯೋಗಿ ಇಲಾಖೆ ಎಇಇ ಎ. ಬಿ. ಚಿಕ್ಕಲಕಿ, ವಿಜಯಪುರ ತಹಸೀಲ್ದಾರ ಸಿದರಾಯ ಭೋಸಗಿ, ಭಾರತೀಯ ಜೈನ್ ಸಂಘಟನೆಯ ಮಹಾವೀರ ಪಾರೇಖ, ವಿಜಯ ರುಣವಾಲ, ಅಮೀತ ಕಟಾರಿಯಾ, ಅರುಣ ರುಣವಾಲ, ನರೇಂದ್ರ ಸುರಾಣಾ, ರಾಜೇಶ ಜೈನ್, ಸಂಗು ಪಾಟೀಲ, ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌