ವಿಜಯಪುರ: ನಗರದ ಸಿಕ್ಯಾಬ್ ಸಂಸ್ಥೆಯ ಎ. ಆರ್. ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಎಚ್. ಕೆ. ಯಡಹಳ್ಳಿ ಅವರಿಗೆ ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ ಮನೋವಿಜ್ಞಾನ ವಿಷಯದಲ್ಲಿ ಸಲ್ಲಿಸಿದ ಪ್ರೌಢಪ್ರಬಂಧವನ್ನು ಪರಿಗಣಿಸಿ ಪಿ ಎಚ್ ಡಿ ಪದವಿ ಪ್ರಧಾನ ಮಾಡಿದೆ.
ವೃತ್ತಿಪರ ಹಾಗೂ ವೃತ್ತಿಪರ ರಹಿತ ಕಾಲೇಜು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಸ್ವಯಂ ಪರಿಕಲ್ಪನೆ, ವ್ಯಕ್ತಿತ್ವ ಪಕ್ವತೆ ಹಾಗೂ ಸಂವೇಗಾತ್ಮಕ ಬುದ್ಧಿಶಕ್ತಿಗಳ ಪ್ರಭಾವ ಎಂಬ ವಿಷಯ ಕುರಿತು ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಗುಲ್ಬರ್ಗ ವಿಶ್ವವಿದ್ಯಾಲಯ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಶಿವಕುಮಾರ ಚೆಂಗಟಿ ಅವರು ಎಚ್. ಕೆ. ಯಡಹಳ್ಳಿ ಅವರಿಗೆ ಮಾರ್ಗದರ್ಶಕರಾಗಿದ್ದರು.
ಡಾ. ಎಚ್. ಕೆ. ಯಡಹಳ್ಳಿ ಅವರ ಈ ಸಾಧನೆಗೆ ಸಿಕ್ಯಾಬ್ ಸಂಸ್ಥೆ ಅಧ್ಯಕ್ಷ ಎಸ್. ಎ. ಪುಣೇಕರ, ಕಾರ್ಯದರ್ಶಿ ಎ. ಎಸ್. ಪಾಟೀಲ, ಕಾಲೇಜು ಆಡಳಿತ ಮಂಡಳಿ ಚೇರ್ಮನ್ ರಿಯಾಜ್ ಫಾರೂಖಿ, ನಿರ್ದೇಶಕ ಸಲಾಹುದ್ದೀನ್ ಪುಣೇಕರ, ಪ್ರಾಚಾರ್ಯ ಪ್ರೊ. ಮನೋಜ ಕೊಟ್ನಿಸ್ ಹಾಗೂ ಪ್ರಾಧ್ಯಾಪಕ, ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.