ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯಪುರ ಜ್ಞಾನಯೋಗಾಶ್ರಮದ ಕಿರಿಯ ಸ್ವಾಮೀಜಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ವಿಜಯಪುರಕ್ಕೆ ಆಗಮಿಸಿದ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಇತರ ಮುಖಂಡರ ಜೊತೆಗೂಡಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ತೆರಳಿದರು.
ಶ್ರೀಗಳಿಗೆ ಅನಾರೋಗ್ಯ ವದಂತಿ ಹಿನ್ನೆಲೆಯಲ್ಲಿ ಭೇಟಿಗೆ ಆಗಮಿಸಿದ ಸಚಿವರು, ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಭೇಟಿಗಾಗಿ ಕೆಲಹೊತ್ತು ಕಾದು ಕುಳಿತರು. ಸಚಿವರು ಆಗಮಿಸುತ್ತಿದ್ದಂತೆ ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ ಆಶ್ರಮದ ಕಿರಿಯ ಶ್ರೀಗಳು, ಈ ಸಂದರ್ಭದಲ್ಲಿ ಎಲ್ಲರನ್ನೂ ದೂರ ಕಳಿಸಿ ಸಚಿವರ ಜೊತೆ ಮಾತುಕತೆ ನಡೆಸಿದರು.
ಸ್ವಲ್ಪ ಹೊತ್ತಿನ ಬಳಿಕ ಕೆಲವೇ ಆಪ್ತರ ಜೊತೆ ಸ್ವಾಮೀಜಿಗಳಿದ್ದ ಕೋಣೆಗೆ ಹೋಗಿ
ಶ್ರೀ ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿ ಹೊರಗೆ ಬಂದರು. ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಆಶ್ರಮದ ಕಿರಿಯ ಶ್ರೀಗಳು ಮಾತನಾಡಿದರು. ಸಿದ್ದೇಶ್ವರ ಸ್ವಾಮಿಜೀಗಳ ಆರೋಗ್ಯದ ಬಗ್ಗೆ ಸಿಎಂ ಮಾಹಿತಿ ಪಡೆದರು.
ಸಿದ್ದೇಶ್ವರ ಶ್ರೀಗಳ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು, ಪೂಜ್ಯರ ಆರೋಗ್ಯ ವಿಚಾರಿಸಲು ಆಗಮಿಸಿ, ಶ್ರೀಗಳ ದರ್ಶನ ಪಡೆದಿದ್ದೇನೆ ಎಂದು ತಿಳಿಸಿದರು.
ಶ್ರೀಗಳಿಗೆ ಚಿಕಿತ್ಸೆ ನೀಡುವ ವೈದ್ಯರ ಜೊತೆಗೆ ಮಾತನಾಡಿದ್ದೇನೆ. ವೈದ್ಯರ ಪ್ರಕಾರ ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ. ಸ್ವಾಮೀಜಿಗಳ ಆರೋಗ್ಯದ ಕುರಿತು ಸಿಎಂ ಅವರನ್ನು ಕಿರಿಯ ಶ್ರೀಗಳ ಜೊತೆಗೆ ಮಾತನಾಡಿಸಿದ್ದೇನೆ. ಶುಕ್ರವಾರ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮೀತ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ಸಾರೆ. ಆ ಬಳಿಕ ಸ್ವಾಮೀಜಿ ಅವರ ದರ್ಶನಕ್ಕೆ ಬರುವುದಾಗಿ ಸಿಎಂ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.
ನಾನು ಕಳೆದ 20 ವರ್ಷಗಳಿಂದ ಮಠದ ಶಿಷ್ಯನಾಗಿ ಭಕ್ತನಾಗಿ ಶ್ರೀಗಳ ಸಂಪರ್ಕದಲ್ಲಿದ್ದೇನೆ. ಸ್ವಾಮೀಜಿ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆಯಾಗುತ್ತಿದೆ. ಸ್ವಾಮೀಜಿ ಆಶ್ರಮದಲ್ಲಿಯೇ ಇರುವುದಾಗಿ ಹೇಳಿದ್ಧಾರೆ, ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ವಾಮೀಜಿ ಸ್ಪಂದಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಪಂಚಮಸಾಲಿ, ಇತರೆ ಲಿಂಗಾಯತ ಸಮಾಜಕ್ಕೆ 2ಡಿ ಮೀಸಲಾತಿ ಘೋಷಣೆ ವಿಚಾರ
ಈ ಮಧ್ಯೆ, ಪಂಚಮಸಾಲಿ ಹಾಗೂ ಇತರೆ ಲಿಂಗಾಯಿತ ಸಮುದಾಯಗಳಿಗೆ 2ಡಿ ನಡಿ ಮೀಸಲಾತಿ ಘೋಷಣೆ ಮಾಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಸಚಿವ ಬಿ. ಶ್ರೀರಾಮುಲು
ಈ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ. ಸ್ವಾಮೀಜಿ ಅವರ ದರ್ಶನಕ್ಕೆ ಬರುವ ಕಾರಣ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.