ಬೆಳಗಾವಿ: ರೈತರಿಗೆ ಪರಿಹಾರ ನೀಡುವುದೇ ನಮ್ಮ ಪ್ರಥಮ ಆದ್ಯತೆ ಹೊರತು ಗುತ್ತಿಗೆದಾರರಿಗೆ ಹಣ ಕೊಡುವುದು ಅಲ್ಲ. ನಾನು ನೀರಾವರಿ ಸಚಿವನಾದ ಮೇಲೆ ನಾಲ್ಕು ನಿಗಮದಲ್ಲಿ ರಿವಾಲ್ವಿಂಗ್ ಪದ್ಧತಿಯಲ್ಲಿ ಹಣ ಇಟ್ಟಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಅವರು ಹಾಸನ ಜಿಲ್ಲೆಯ ಹೇಮಾವತಿ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸೂರಜ ರೇವಣ್ಣ ಅವರು ತಾತನ ರೀತಿಯಲ್ಲಿ ಸರಿಯಾಗೇ ತಯಾರಾಗಿ ಬಂದಿದ್ದಾರೆ. ಈ ಭೂಸ್ವಾಧೀನ ಸಮಸ್ಯೆಗಳು ಹಾಸನ ಜಿಲ್ಲೆಯಲ್ಲಿದ್ದಷ್ಟು ಯಾವುದೇ ಜಿಲ್ಲೆಯಲ್ಲಿಲ್ಲ. ಸ್ಕೀಂಗಳು ಆಗಬೇಕು, ರೈತರಿಗೆ ಸೌಲಭ್ಯಗಳು ಸಿಗಬೇಕು, ನೀರಾವರಿ ಯೋಜನೆಗಳು ಆಗಬೇಕು ಎಂದು ಹೇಳುತ್ತಾರೆ. ಆದರೆ, ಒಂದಿಂಚೂ ನೆಲವನ್ನು ಬಿಟ್ಟುಕೊಡಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ರೈತರಿಗೆ ಪರಿಹಾರ ಕೊಡಲು ನಿಮ್ಮಲ್ಲಿ ಹಣ ಇಲ್ಲ ಎಂದು ಆರೋಪಿಸಿದ್ದಾರೆ. ಆದರೆ, ನಾನು ನೀರಾವರಿ ಸಚಿವನಾದ ಮೇಲೆ ನಾಲ್ಕು ನಿಗಮದಲ್ಲಿ ರಿವಾಲ್ವಿಂಗ್ ಪದ್ಧತಿಯಲ್ಲಿ ಹಣ ಇಟ್ಟಿದ್ದೇವೆ. ನಮ್ಮ ಪ್ರಥಮ ಆದ್ಯತೆ ರೈತರಿಗೆ ಪರಿಹಾರ ನೀಡುವುದೇ ಹೊರತು ಗುತ್ತಿಗೆದಾರರಿಗೆ ಹಣ ಕೊಡುವುದು ಅಲ್ಲ. ಇದೇ ರೀತಿ ನಾವು ಕಾರ್ಯ ನಿರ್ವಹಿಸಿದ್ದೇವೆ. ಯಾವುದಾದರೂ ಎಸ್‌ಎಲ್‌ಒ ಖಾತೆಯಲ್ಲಿ ಹಣ ಇಲ್ಲ ಎಂದು ಹೇಳಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಏನಾದರೂ ಲೋಪ ಆಗಿದ್ದರೆ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇವೆ. ಏನೇ ಸಮಸ್ಯೆಗಳಿದ್ದರೂ ತಕ್ಷಣ ಸರಿಪಡಿಸುತ್ತೇವೆ ಎಂದು ಅವರು ಹೇಳಿದರು.
ವಿದ್ಯುತ್ ಬಿಲ್‌ಗಳ ಬಾಕಿ ಬಗ್ಗೆ ಮಾತನಾಡಿ, ನಮ್ಮಲ್ಲಿ ನಿರ್ವಹಣೆ ವೆಚ್ಚ ಬಹಳ ಕಡಿಮೆ ಇರುತ್ತದೆ. ಬಹಳ ಹಳೇ ದರ ನಿಗದಿಯಾಗಿವೆ. ಅದರ ಬಗ್ಗೆನೂ ಯೋಚನೆ ಮಾಡುತ್ತೇವೆ. ಮೊದಲು ಕಾಲುವೆ ಮೂಲಕ ನೀರಾವರಿ ಮಾಡುತ್ತಿದ್ದೇವು. ಖರ್ಚು ವೆಚ್ಚ ಕಡಿಮೆ ಆಗುತ್ತಿತ್ತು. ಆದರೆ, ಇಂದು ಏತ ನೀರಾವರಿ ಯೋಜನೆಗೆ 10 ಪಟ್ಟು ಹೆಚ್ಚು ಖರ್ಚಾಗುತ್ತದೆ. ಈಗ ವಿದ್ಯುತ್ ಬಿಲ್ ಬಾಕಿಯಿದೆ. ಹಂತ ಹಂತವಾಗಿ ಬಿಲ್ ಪಾವತಿ ಮಾಡುತ್ತಿದ್ದೇವೆ. ಆದರೆ, ವಿದ್ಯುತ್ ನಿಗಮದವರು ಕೂಡ ನಮ್ಮ ಇಲಾಖೆಗೆ ಬಾಕಿ ಕೊಡಬೇಕಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು.
ಕೃಷ್ಣಾ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪ
ಕೃಷ್ಣಾ ನದಿ ಭಾಗದ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್
ರಾಠೋಡ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೊಲ್ಹಾರ ವ್ಯಾಪ್ತಿಯಲ್ಲಿ ಈ ರೀತಿ ಪ್ರಕರಣಗಳು ಹೆಚ್ಚಿವೆ. ಅದು ಬಹಳ ದೊಡ್ಡ ಹಳ್ಳಿ. ಅಲ್ಲಿ ಸಿಎ ಸೈಟ್ ಹಾಗೂ ಗಾರ್ಡನ್‌ಗೆ ಬಿಟ್ಟ ಜಾಗವನ್ನು ಕೆಲವರು ಅಕ್ರಮವಾಗಿ ಬೋಗಸ್ ಹಕ್ಕು ಪತ್ರ ತಯಾರು ಮಾಡಿ, 1117ರಷ್ಟು ಬೇರೆಯವರಿಗೆ ವಿತರಣೆ ಮಾಡಿದ್ದಾರೆ. ಹಣ ತಗೊಂಡು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ ಎಂದು ಗೋವಿಂದ ಕಾರಜೋಳ ಹೇಳಿದರು.