ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯಪುರ ನಗರಕ್ಕೆ ಆಗಮಿಸಿದ್ದು, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಸಚಿವ ಗೋವಿಂದ ಕಾರಜೋಳ ಅವರ ಜೊತೆ ಜ್ಞಾನಯೋಗಾಶ್ರಮಕ್ಕೆ ಆಗಮಿಸಿ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸುನಾರು ಅರ್ಧ ಗಂಟೆಗಳ ಕಾಲ ಶ್ರೀಗಳ ಕೊಠಡಿಯಲ್ಲಿ ಸಿಎಂ ಮತ್ತು ಸಚಿವರು ಉಳಿದುಕೊಂಡ ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆದರು.
ಸಿದ್ಧೇಶ್ವರ ಶ್ರೀಗಳ ದರ್ಶನ ಪಡೆದು ಬಂದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಕಳವಳಕಾರಿ ಆಗಿದ್ದರಿಂದ ನಾನು ಬಂದಿದ್ದೇನೆ. ಕಳೆದ ಒಂದು ವಾರದಿಂದ ಪ್ರತಿದಿನ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೇನೆ. ಮೊನ್ನೆ ನಾನು ಕರೆ ಮಾಡಿದ್ದಾಗ ಒಂದೆರಡು ಮಾತಾಡಿದ್ದರು. ಒಂದೆರಡು ಸಮಾಚಾರ ಅವರ ಬಳಿ ಮಾತಾಡಬೇಕು ಎಂದು ಮಧ್ಯಾಹ್ನ ಫೋನ್ ಮಾಡಿದಾಗ ಸರಿಯಾಗಿ ಮಾತನಾಡಿರಲಿಲ್ಲ. ಈಗ ಶ್ರೀಗಳ ಆರೋಗ್ಯ ಆಶ್ಚರ್ಯಕರ ರೀತಿಯಲ್ಲಿ ಸುಧಾರಿಸಿದೆ. ಈಗ ಪ್ರಧಾನಿಗಳು ಜೋಶಿ ಅವರೊಂದಿಗೆ ಮತನಾಡಿದ್ದಾರೆ. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಧಾನ ಮಂತ್ರಿಗಳು ಹಾರೈಸಿದ್ದಾರೆ. ಶ್ರೀಗಳ ಬದುಕೇ ಮಾದರಿಯಾಗಿದೆ. ಅವರ ಮಾತು, ನಡೆ, ನುಡಿ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ವಿಜಯಪುರ ಪುಣ್ಯ ಭೂಮಿಯಲ್ಲಿ ಅವರ ಕರ್ಮ ಭೂಮಿ ಮಾಡಿಕೊಂಡಿದ್ದು ನಮ್ಮ ಪುಣ್ಯ. ನಿಜವಾಗಿಯೂ ಶ್ರೀಗಳು ನಡೆದಾಡುವ ದೇವರು. ಅವರ ಆಚರಣೆ, ವಿಚಾರ ಎಲ್ಲವೂ ಪರಿಶುದ್ಧವಾಗಿದೆ ಎಂದು ಹೇಳಿದರು.
ಶ್ರೀಗಳು ಅಪರೂಪದ ತತ್ವಜ್ಞಾನಿಯಾಗಿದ್ದಾರೆ. ಇವರು ಬದುಕಿನ ಸೂಕ್ಷ್ಮತೆಯನ್ನು ನಿಖರವಾಗಿ, ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಸಾಮಾನ್ಯ ಮನುಷ್ಯನ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕೊಟ್ಟವರು. ಅವರ ಮಾತುಗಳನ್ನು ಕೇಳಿ ನಾವೆಲ್ಲ ಬದಲಾಗಿದ್ದೇವೆ. ಹಲವಾರು ಬಾರಿ ಶ್ರೀಗಳು ರೈತರ ಬಗ್ಗೆ, ನೀರಾವರಿ ಬಗ್ಗೆ, ತತ್ವಗಳ ಬಗ್ಗೆ ಗಂಟೆಗಟ್ಟಲೇ ಚರ್ಚೆ ಮಾಡಿದ್ದೇವೆ. ನನ್ನನ್ನು ಅತ್ಯಂತ ಸಮಾಧಾನವಾಗಿ ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ. ಅವರ ಆರೋಗ್ಯ ಕ್ಷೀಣಿಸಿದ್ದು, ಬೇಗ ಗುಣವಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸಿಎಂ ಹೇಳಿದರು. ಅವರ ಎಲ್ಲಾ ಮೆಡಿಕಲ್ ಪ್ಯಾರಾಮಿಟರ್ಸ್ ರಿಪೋರ್ಟ್ ಗಳು ಸಾಮಾನ್ಯವಾಗಿವೆ. ನಾನು ಸಿಎಂ ಆಗಿ ಫೋನ್ ಮಾಡಿದಾಗ ಬಹಳ ಸಂತೋಷವಾಗಿದೆ. ನಿನ್ನಿಂದ ನಾಡಿಗೆ ಒಳ್ಳೇದಾಗುತ್ತೆ ಎಂದು ಆಶೀರ್ವದಿಸಿದ್ದರು. ಅವರು ಇನ್ನಷ್ಟು ದಿನ ಬದುಕಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವಂತಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಸಮಾಜದಲ್ಲಿ ಮೌಲ್ಯಗಳನ್ನು ಜೀವಂತವಾಗಿಡಲು ಶ್ರೀಗಳ ಅವಶ್ಯಕತೆ ಇದೆ. ಶ್ರೀಗಳು ಧರ್ಮದ ಚೌಕಟ್ಟನ್ನು ಮೀರಿ ತತ್ವಗಳ ಮೇಲೆ ನಿಂತವರು ಎಂದು ಹೇಳಿದರು.
ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ಒದಗಿಸುವ ಬಗ್ಗೆ ಪ್ರಧಾನ ಮಂತ್ರಿಗಳು ಜೋಶಿ ಅವರ ಮೂಲಕ ಹೇಳಿದಾಗ ಶ್ರೀಗಳು ಕೈ ಮುಗಿದರು. ಇದನ್ನು ನೋಡಿದರೆ, ಅವರು ಯಾವುದೇ ಚಿಕಿತ್ಸೆ ಪಡೆಯದಿರಲು ನಿರ್ಧರಿಸಿದಂತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಸಚಿವ ಪ್ರಹ್ಕಾದ ಜೋಶಿ ಹೇಳಿಕೆ
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶ್ರೀಗಳಿಗೆ ಆಕ್ಸಿಜನ್ ಕಡಿಮೆ ಆಗಿದೆ ಎಂದಾಗ ನಾನು ಸಿಎಂ ಧಾವಿಸಿ ಬಂದಿದ್ದೇವೆ. ಶ್ರೀಗಳು ಚೆನ್ನಾಗಿಯೇ ಇದ್ದರು. ಅವರಿಗೆ ಏನಾಗಿದೆ ಎಂದು ಪ್ರಧಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಶ್ರೀಗಳು ಮಾತನಾಡದ ಸ್ಥಿತಿಯಲ್ಲಿರದೆ ಸನ್ನೆ ಮಡಿದಾಗ ಪ್ರಧಾನಿಗಳು ದರ್ಶನ ಪಡೆದುಕೊಂಡರು. ಶ್ರೀಗಳಿಗೆ ಅವಶ್ಯವಿರುವ ಚಿಕಿತ್ಸೆಯನ್ನು ಕೊಡುವಂತೆ ಪ್ರಧಾನಿಗಳು ಹೇಳಿದ್ದಾರೆ. ಶ್ರೀಗಳಂಥ ಆದರ್ಶ ಸ್ವಾಮೀಜಿ ಸಿಗುವುದು ಬಹಳ ಕಷ್ಟ. ಹತ್ತಿಪ್ಪತ್ತು ಕೋಟಿಯಲ್ಲಿ ಒಬ್ಬರು ಇಂಥವರಿರುತ್ತಾರೆ. ಶ್ರೀಗಳು ಬೇಗ ಗುಣವಾಗಲಿ ಎಂದು ಪಾರ್ಥಿಸುತ್ತೇವೆ ಎಂದು ಹೇಳಿದರು. ಪ್ರಧಾನಿಗಳು, ಅಮೀತ ಶಾ ಕಳವಳ ವ್ಯಕ್ತಪಡಿಸಿ, ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಸಮಾಜ, ಕೇಂದ್ರ ಹಾಗೂ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರವನ್ನು ಕೊಡಲಿವೆ. ಚಿಕಿತ್ಸೆಯ ಬಗ್ಗೆ ವಿನಂತಿ ಮಾಡಿದ್ದೇವೆ. ಅವರು ಕೈ ಮುಗಿಯುತ್ತಿದ್ದಾರೆ. ಶ್ರೀಗಳ ಸನ್ನೆಯನ್ನು ನೋಡಿದ್ರೆ ಅವರು ಟ್ರೀಟಮೆಂಟ್ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿದ್ದಾರೆ ಎಂದು ನನಗೆ ಎನಿಸುತ್ತಿದೆ ಎಂದು ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.