ವಿಜಯಪುರ: ಈ ಮಧ್ಯೆ, ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬೇಗ ಗುಣಮುಖರಾಗಲಿ ಎಂದು ಭಕ್ತರು ನಾನಾ ರೀತಿಯಲ್ಲಿ ಹರಕೆ ಹೊತ್ತಿದ್ದಾರೆ. ಶ್ರೀಗಳ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸಿ ಮಹಿಳಾ ಭಕ್ತರೊಬ್ಬರು 80 ಕಿ. ಮೀ. ದೀರ್ಘದಂಡ ನಮಸ್ಕಾರ ಹಾಕುತ್ತಿದ್ದಾರೆ. ಕೊಲ್ಹಾರ ಪಟ್ಟಣದ ಭಕ್ತೆ ಕಸ್ತೂರಿ ಬಸಪ್ಪ ಬಾಲಗೊಂಡ ಎಂಬ ಮಹಿಳೆ ಈ ದೀರ್ಘದಂಡ ನಮಸ್ಕಾರ ಕೈಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರದಿಂದ ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಬಾದಾಮಿ ಬನಶಂಕರಿ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕುತ್ತಿರುವ ಕಸ್ತೂರಿ ಬಾಲಗೊಂಡ, ನಡೆದಾಡುವ ದೇವರು ಸಿದ್ದೇಶ್ವರ ಪೂಜ್ಯರು ಶೀಘ್ರ ಗುಣಮುಖರಾಗಲೆಂದು ಸಂಕಲ್ಪಿಸಿ ಭಕ್ತೆಯಿಂದ ದೀರ್ಘದಂಡ ನಮಸ್ಕಾರ ಸೇವೆ ಆರಂಭಿಸಿದ್ದಾರೆ.
ಸೋಮವಾರ ನಸುಕಿನ ವೇಳೆ ಸೇವೆ ಆರಂಭಿಸಿರುವ ಮಹಿಳೆ ಸಧ್ಯಕ್ಕೆ ಬೀಳಗಿ ಕ್ರಾಸ್ ದಾಟಿ ಗದ್ದನಕೇರಿ ಕ್ರಾಸ್ ವರೆಗೆ ಸಾಗಿದ್ದಾರೆ. ಹೀಗೆ ದೀರ್ಘದಂಡ ಸೇವೆ ಹಾಕುತ್ತಿರುವ ಕಸ್ತೂರಿ ಬಸಪ್ಪ ಬಾಲಗೊಂಡ ಗುರುವಾರ ಬನಶಂಕರಿದೇವಿ ದೇವಸ್ಥಾನ ತಲುಪಲಿದ್ದಾರೆ.
ಮುಳವಾಡದಲ್ಲಿ ಮಕ್ಕಳಿಂದ ವಿಶೇಷ ಪ್ರಾರ್ಥನೆ
ನಡೆದಾಡುವ ದೇವರು ಸಿದ್ದೇಶ್ವರ ಪೂಜ್ಯರು ಶೀಘ್ರ ಗುಣಮುಖರಾಗಲಿ. ಶತಾಯುಷಿಗಳಾಗಿ ಬದುಕಲಿ ಎಂದು ಹಾರೈಸಿ ಶಾಲಾ ವಿದ್ಯಾರ್ಥಿಗಳು ವಿಶೇಷ ಪ್ರಾರ್ಥನೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆಯ ಮಕ್ಕಳು ಹಾಗೂ ಶಾಲಾ ಮಂಡಳಿಯಿಂದ ಸಾಮೂಹಿಕ ಜಪಯಜ್ಞ ಹಾಗೂ ಪ್ರಾರ್ಥನೆ ನಡೆಸಲಾಗಿದೆ.