ವಿಜಯಪುರ: ನಡೆದಾಡುವ ದೇವರು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆರೋಗ್ಯ ಏರುಪೇರಾಗಿರುವ ಹಿನ್ನೆಲೆಯಲ್ಲಿ ಜ. 9 ಮತ್ತು 10 ರಂದು ನಗರದಲ್ಲಿ ನಡೆಯಬೇಕಿದ್ದ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯ ಸಮ್ಮೇಳನವನ್ನು ಮುಂದೂಡಲಾಗಿದೆ.
ಈ ಕುರಿತು ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ ಎಂದು ಕಾನಿಪ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪೂಜ್ಯನೀಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಏರುಪೇರಾಗಿರುವ ಕಾರಣ ವಿಜಯಪುರದಲ್ಲಿ ಜನವರಿ 9 ಮತ್ತು 10 ರಂದು ನಡೆಯಲಿರುವ ಸಮ್ಮೇಳನ ಮುಂದೂಡುವ ಅನಿವಾರ್ಯತೆ ಎದುರಾಗಿದೆ. ಕೋಟ್ಯಾಂತರ ಭಕ್ತಾದಿಗಳ ಪ್ರಾರ್ಥನೆಯಿಂದ ನಡೆದಾಡುವ ದೇವರು ಪೂಜ್ಯನೀಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸುಧಾರಿಸುತ್ತದೆ ಎನ್ನುವ ನಮ್ಮೆಲ್ಲರ ನಿರೀಕ್ಷೆ ಫಲಿಸುತ್ತಿಲ್ಲ. ಶ್ರೀಗಳ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದು ಆತಂಕ ಮತ್ತು ಕಳವಳಕಾರಿಯಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಮ್ಮೇಳನವನ್ನು ನಡೆಸುವುದು ಕಷ್ಟವಾಗುವುದರಿಂದ ಸಮ್ಮೇಳನ ಮುಂದೂಡುವಂತೆ ಆತಿಥ್ಯ ವಹಿಸಿರುವ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ವಿನಂತಿಸಿಕೊಂಡಿದೆ. ವಿಜಯಪುರ ಜಿಲ್ಲಾಡಳಿತ ಮತ್ತು ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯವೂ ಇದೇ ಆಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಮುಂದೂಡುವುದು ಅನಿವಾರ್ಯವಾಗಿದೆ.
ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಸಮ್ಮೇಳನದ ಮುಂದಿನ ದಿನಾಂಕವನ್ನು ಶೀಘ್ರವಾಗಿ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಾಸನದಲ್ಲಿ ಜ. 9ಕ್ಕೆ ಕಾನಿಪ ಸಭೆ
ಈ ಮಧ್ಯೆ, ವಿಜಯಪುರದಲ್ಲಿ ನಡೆಯಬೇಕಿದ್ದ ಸಮ್ಮೇಳನ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಅಂದು ವಿಜಯಪುರದಲ್ಲಿ ನಡೆಯಬೇಕಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರ ಸಭೆಗಳನ್ನು ಹಾಸನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ನಿಗಧಿಯಾಗಿರುವಂತೆ ದಿನಾಂಕ 09.01.2023 ರಂದು ಸೋಮವಾರ(ವಿಜಯಪುರದಲ್ಲಿ ನಡೆಯಬೇಕಿದ್ದ ಸಭೆಗಳನ್ನು) ಹಾಸನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಿವಾನಂದ ತಗಡೂರ ಮಾಹಿತಿ ನೀಡಿದ್ದಾರೆ ಎಂದು ಸಂಗಮೇಶ ಟಿ. ಚೂರಿ ಪ್ರಟಕಣೆಯಲ್ಲಿ ಮಾಹಿತಿ ನೀಡಿದ್ದಾರೆ.