ವಿಜಯಪುರ: ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಬಸವನಾಡು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಲು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಿಜಯಪುರಕ್ಕೆ ಭೇಟಿ ನೀಡಿದ್ದಾರೆ.
ಬೆಂಗಳೂರಿನಿಂದ ವಿಜಯಪುರಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ವಿಧಾನ ಪರಿಷತ ಪ್ರತಿಪಕ್ಷದ ಸಚೇತಕ ಪ್ರಕಾಶ ರಾಠೋಡ ಅವರ ಜೊತೆ ಆಗಮಿಸಿದ ಎಸ್. ಸಿದ್ಧರಾಮಯ್ಯ ಅವರನ್ನು ನಗರದ ಸೈನಿಕ ಶಾಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು. ಹೆಲಿಪ್ಯಾಡ್ ನಿಂದ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ಅವರು, ಹೆಲಿಕಾಪ್ಟರ್ ಮೂಲಕ ಆಗಮಿಸಿದ ಎಸ್. ಸಿದ್ಧರಾಮಯ್ಯ ನೇರವಾಗಿ ಜ್ಞಾನಯೋಗಾಶ್ರಮಕ್ಕೆ ತೆರಳಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಕೊಠಡಿಗೆ ತೆರಳಿದರು.
ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಮಾಜಿ ಸಚಿವ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ವಿಧಾನ ಪರಿಷತ ಕಾಂಗ್ರೆಸ್ ಸದಸ್ಯರಾದ ಪ್ರಕಾಶ ರಾಠೋಡ, ಪ್ರಕಾಶ ಹುಕ್ಕೇರಿ, ವೈದ್ಯರಾದ ಡಾ. ಅರವಿಂದ ಪಾಟೀಲ, ಮುಖಂಡರಾದ ಬಾಬು ನಾಗೂರ ಮುಂತಾದವರು ಉಪಸ್ಥಿತರಿದ್ದರು. ಸ್ವಲ್ಪ ಹೊತ್ತು ಶ್ರೀಗಳಿರುವ ಕೋಣೆಯಲ್ಲಿ ಕಾಲ ಕಳೆದ ಎಸ್. ಸಿದ್ಧರಾಮಯ್ಯ, ವೈದ್ಯರಿಂದ ಶ್ರೀಗಳ ಆರೋಗ್ಯದ ಕುರಿತು ಮಾಹಿತಿ ಪಡೆದರು.
ಬಳಿಕ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತನಾಡಿದ ಅವರು, ಇವತ್ತು ನಾನು ಮತ್ತು ವಿಧಾನ ಪರಿಷತ ಪ್ರತಿಪಕ್ಷದ ಸಚೇತಕ ಪ್ರಕಾಶ ರಾಠೋಡ ಅವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಲು ಬಂದಿದ್ದೇವೆ. ನಾನು ಹೋದಾಗ ಅವರು ಕಣ್ಣು ಮುಚ್ಚಿಕೊಂಡಿದ್ದರು. ಮಾತನಾಡುತ್ತಿರಲಿಲ್ಲ. ಏಕೆಂದರೆ ಅವರಿಗೆ ಮಾಸ್ಕ್ ಹಾಕಿ ಆಕ್ಸಿಜನ್ ನೀಡಲಾಗುತ್ತಿದೆ. ಹೀಗಾಗಿ ನಾನು ಅವರನ್ನು ಮಾತನಾಡಿಸಲಿಲ್ಲ. ವೈದ್ಯರ ಜೊತೆ ನಾನು ಮಾತನಾಡಿದೆ. ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದರು.
ಶ್ರೀಗಳ ಆರೋಗ್ಯ ಈಗಾಗಲೇ ಸ್ಥಿರವಾಗಿದೆ. ನಾನು ವೈದ್ಯರ ಜೊತೆ ಜೊತೆ ಮಾತನಾಡಿದ್ದೇನೆ. ಅವರು ಬೇಗ ಗುಣವಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಮಹಾನ್ ಸಂತರಾಗಿದ್ದಾರೆ. ಅವರು ಜನರನ್ನು ಧಾರ್ಮಿಕವಾಗಿ ಜಾಗೃತಿಗೊಳಿಸುವ ಕೆಲಸವನ್ನು ಅನೇಕ ವರ್ಷಗಳಿಂದ ಮಾಡುತ್ತಿದ್ದಾರೆ. ಅವರ ಪ್ರವಚನಗಳ ಮೂಲಕ ಜನರಲ್ಲಿ ಧಾರ್ಮಿಕ ಭಾವನೆಗಳು ಮೂಡಿವೆ. ಧರ್ಮದ ಬಗ್ಗೆ ಜನರಲ್ಲಿರುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿದ್ದಾರೆ. ಧರ್ಮ ಎಂಬುದು ವೇ ಆಫ್ ಲೈಫ್. ಮನುಷ್ಯರಿಗೋಸ್ಕರ ಧರ್ಮ ಮಾಡಿಕೊಂಡಿದ್ದೇವೆ. ಮನುಷ್ಯನ ಒಳಿತಿಗೊಸ್ಕರ, ಸಮಾಜದ ಒಳಿತಿಗೊಸ್ಕರ ಧರ್ಮವಿದೆ. ಈ ಅಂಶಗಳನ್ನು ಅವರು ತಮ್ಮ ಮಾತುಗಳಲ್ಲಿ ಬಹಳ ಸ್ಪಷ್ಟವಾಗಿ ತಿಳಿಸುತ್ತಿದ್ದರು. ಆಧ್ಯಾತ್ಮಿಕವಾಗಿ ಬಹಳ ಆಳವಾದ ಜ್ಞಾನವನ್ನು ಪಡೆದುಕೊಂಡಿದ್ದರು. ಹಿ ಈಸ್ ಮೋಸ್ಟ್ ಲರ್ನೆಡ್ ಸೇಂಟ್. ನಮ್ಮ ಮಧ್ಯೆ ಇರುವ ಅನೇಕ ಸಂತರಲ್ಲಿ ಇವರು ಅಪರೂಪದ ಸಂತ. ಅವರ ಆರೋಗ್ಯ ಬೇಗ ಗುಣವಾಗಲಿ ಎಂದು ಪ್ರಾರ್ಥಿಸುತ್ತೇನೆ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮುಖಂಡರಾದ ಸೋಮನಾಥ ಕಳ್ಳಿಮನಿ, ಟಪಾಲ ಎಂಜಿನಿಯರ್, ಮಲ್ಲಿಕಾರ್ಜುನ ಎಸ್. ಲೋಣಿ, ಡಾ. ಮಹಾಂತೇಶ ಬಿರಾದಾರ, ತಾಂಬೋಳಿ ಮುಂತಾದವರು ಉಪಸ್ಥಿತರಿದ್ದರು.