ಶುದ್ಧ ಮನಸ್ಸು, ಶ್ವೇತ ಬಟ್ಟೆ, ಜ್ಞಾನ ದಾಸೋಹದ ಮೂಲಕ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ ವಿಶ್ವಶ್ರೇಷ್ಠ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಮಹೇಶ ವಿ. ಶಟಗಾರ

ವಿಜಯಪುರ: ಶುದ್ಧ ಮನಸ್ಸು, ಶ್ವೇತ ಬಟ್ಟೆ, ಸುಂದರ ಸಂದೇಶಗಳನ್ನು ಜ್ಞಾನದಾಸೋಹದ ಮೂಲಕ ಭಕ್ತರಿಗೆ ಉಣಬಡಿಸಿ ಜಾಗೃತಿ ಮೂಡಿಸಿದವರು ನಡೆದಾಡುವ ದೇವರೆಂದೆ ಹೆಸರಾಗಿದ್ದ ಬಸವನಾಡಿನ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು.

ಪಾಲಿಸಿಕೊಂಡು ಬಂದ ತತ್ವಗಳು, ನುಡಿದಿದ್ದಕ್ಕಿಂತಲೂ ಹೆಚ್ಚಾಗಿ ಮಾದರಿ ಜೀವನ ಸಾಗಿಸಿ ಇತರರಿಗೂ ಸ್ಪೂರ್ತಿಯಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಭಕ್ತರು ಭಾರತವಷ್ಟೇ ಅಲ್ಲ, ಸಾಗರದಾಚೆಯ ವಿದೇಶಗಳಲ್ಲಿಯೂ ಇದ್ದಾರೆ.  ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಪರ್ಶಿಯನ್ ಸೇರಿದಂತೆ ಬಹುಭಾಷೆಗಳನ್ನು ಬಲ್ಲವರಾಗಿದ್ದ ಇವರು ಈ ಎಲ್ಲ ಭಾಷೆಗಳಲ್ಲಿ ಪ್ರವಚನಗಳ ಮೂಲಕ ಭಕ್ತರ ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.

ಶುದ್ಧ ಮನಸ್ಸಿನ ಶ್ರೀಗಳು

ಸ್ವಚ್ಛ ಮನಸ್ಸಿನ ಶ್ರೀಗಳು ಜನರಿಗೆ ಸಂದೇಶ ತಲುಪಿಸಲು ಆಯ್ಕೆ ಮಾಡಿಕೊಂಡಿದ್ದು ಪ್ರವಚನ.  ಈ ಪ್ರವಚನಗಳಲ್ಲಿ ಕಥೆಗಳ ಮೂಲಕ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಜಗತ್ತಿನ ಸಂತರ ಸಾರವನ್ನು ಸಾರುತ್ತಿದ್ದರು.  ಈ ಮೂಲಕ ತಮಗರಿವಿಲ್ಲದಂತೆಯೇ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದರು.

ಶ್ರೀಗಳು ಪ್ರವಚನಕ್ಕೆ ಬರುತ್ತಾರೆಂದರೆ ಸಾಕು ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು.  ಇವರು ಮಾತು ಆರಂಭಿಸಿದರೆ ಎಲ್ಲೆಡೆ ಪಿನ್ ಡ್ರಾಪ್ ಸೈಲೆನ್ಸ್ ಅಂದರೆ ಒಂದು ಸೂಜಿ ಬಿದ್ದರೂ ಸಪ್ಪಳವಾಗುವಷ್ಟು ಶಾಂತ ವಾತಾವರಣವಿರುತ್ತಿತ್ತು.  ಅರ್ಥಾತ್ ಪ್ರವಚನಕಕ್ಕೆ ಬಂದವರೆಲ್ಲರೂ ಮೈಯೆಲ್ಲಾ ಕಿವಿಯಾಗಿ ಸಂತನ ಸಂದೇಶಗಳನ್ನು ಆಲಿಸುತ್ತಿದ್ದರು.  ಅವರು ನೀಡಿದ ಕರೆಗಳಿಗೆ ಓಗೊಟ್ಟು ಹಲವಾರು ಜನ ದುಷ್ಚಟಗಳಿಂದ ದೂರವಾಗಿದ್ದರು.  ಸನ್ಮಾರ್ಗದಲ್ಲಿ ನಡೆಯತೊಡಗಿದ್ದರು.

ಶ್ವೇತ ಬಟ್ಟೆ

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಮನಸ್ಸು ಎಷ್ಟು ಸ್ವಚ್ಛವಾಗಿತ್ತೋ ಅವರು ತೊಡುವ ಬಟ್ಟೆಗಳೂ ಅಷ್ಟೇ ಸರಳವಾಗಿರುತ್ತಿದ್ದವು.  ಸದಾ ಬಿಳಿ ಬಟ್ಟೆಯನ್ನೇ ತೊಡುತ್ತಿದ್ದರು  ಅವರು ಹಾಕುತ್ತಿದ್ದ ಅಂಗಿಗೆ ಕಿಸೆ ಇರುತ್ತಿರಲಿಲ್ಲ.  ಈ ಹಿಂದೆ ದರ್ಜಿ(ಟೇಲರೊಬ್ಬರು) ಶ್ರೀಗಳಿಗೆ ಅಕ್ಕರೆಯಿಂದ ಸಿದ್ಧಪಡಿಸಿದ ಬಿಳಿ ಅಂಗಿಯನ್ನು ಹೊಲಿದು ಕೊಟ್ಟಿದ್ದ.  ಆಗ ಶ್ರೀಗಳು, ಆತನ ಭಕ್ತಿಗೆ ಮೆಚ್ಚಿದರು.  ಆದರೆ, ನನ ಅಂಗಿಗೆ ಕಿಸೆ ಯಾಕೆ? ನನಗೆ ಅದರ ಅಗತ್ಯವಿಲ್ಲ ಎಂದು ಹೇಳಿದರು.  ತಕ್ಷಣ ಆ ಟೇಲರ್ ಬೇರೊಂದು ಅಂಗಿಯನ್ನು ಹೊಲಿದು ತಂದು ನೀಡಿ ಸ್ವಾಮೀಜಿಗಳಿಗೆ ನೀಡಿದ್ದ.

ಜ್ಞಾನ ದಾಸೋಹಿಗಳಾಗಿದ್ದ ಶ್ರೀಗಳು

ವಿಜಯಪುರ ಅಷ್ಟೇ ಅಲ್ಲ, ರಾಜ್ಯ ಹಾಗೂ ದೇಶದ ನಾನಾ ಕಡೆಗಳಲ್ಲಿ ಸಾವಿರಾರು ಮಠಗಳಿವೆ.  ಆದರೆ, ಬಹುತೇಕ ಮಠಗಳು ಭೌತಿಕ ಆಸ್ತಿಪಾಸ್ತಿ ಮಾಡಲು ಶ್ರಮ ವಹಿಸುತ್ತವೆ.  ಅದರ ಜೊತೆಗೆ, ಅನ್ನದಾಸೋಹ, ಶಿಕ್ಷಣ ದಾಸೋಹಗಳನ್ನೂ ಮಾಡುತ್ತವೆ.  ಆದರೆ, ಬಸವನಾಡು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆ ಎಲ್ಲ ಶ್ರೀಗಳಿಗಿಂತ ಭಿನ್ವಾಗಿದ್ದರು.  ಜ್ಞಾನ ದಾಸೋಹದ ಮೂಲಕ ಜನಮನ ಗೆದ್ದು ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದರು.  ಬೇರೆ ಬೇರೆ ಸ್ವಾಮೀಜಿಗಳು ಮಠಗಳ ನಾನಾ ಸಂಸ್ಥೆಗಳನ್ನು ನಡೆಸಲು ಅಗತ್ಯವಾಗಿರುವ ಆರ್ಥಿಕ ಸಂಪನ್ಮೂಲ ಕ್ರೂಢಿಕರಣಕ್ಕೆ ನಾನಾ ಊರುಗಳು ಮತ್ತು ಭಕ್ತರ ಮನೆಗೆ ತೆರಳುತ್ತಿದ್ದರು.  ಆದರೆ, ನಡೆದಾಡಿದ ದೇವರು ಜ್ಞಾನ ದಾಸೋಹಕ್ಕಾಗಿ ತಮ್ಮ ಜೀವನದುದ್ದಕ್ಕೂ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ರಾಜ್ಯಗಳು ಹಾಗೂ ವಿದೇಶಗಳಿಗೆ ತೆರಳಿ ಜೀವನದ ಸಾರವನ್ನು ಬೋಧಿಸಿದರು.  ಈ ಮೂಲಕ ಜಾತಿ, ಪಂಥ ಮೀರಿ ಭಕ್ತರನ್ನು ಗಳಿಸಿದರು.

ಈ ಹಿನ್ನೆಲೆಯಲ್ಲಿಯೇ ಈಗ ಸೈನಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಿರುವ ಶ್ರೀಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಭಕ್ತಿ ತೋರುತ್ತಿದ್ದಾರೆ.

ಶತಮಾನದ ಸಂತರಿಗೆ ಬಸವನಾಡು ವೆಬ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ.

Leave a Reply

ಹೊಸ ಪೋಸ್ಟ್‌