ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ಧೇಶ್ವರು ಸ್ವಾಮೀಜಿ ಲಿಂಗೈಕ್ಯರಾಗಿರುವ ಸುದ್ದಿ ಭಕ್ತರಿಗೆ ಬರಸಿಡಿಲಿನಂತೆ ಬಂದೆರಗಿದೆ. ಇದರಿಂದ ಅಘಾತಗೊಂಡಿರುವ ಲಕ್ಷಾಂತರ ಭಕ್ತರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬಸವನಾಡು ವಿಜಯಪುರ ನಗರಕ್ಕೆ ಸಮರೋಪಾದಿಯಲ್ಲಿ ದೌಡಾಯಿಸಿದ್ದಾರೆ. ಈ ಭಕ್ತಾದಿಗಳಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ವಿಜಯಪುರ ನಗರವನ್ನು ಪ್ರವೇಶಿಸುವ ನಾಲ್ಕೂ ದಿಕ್ಕುಗಳಲ್ಲಿ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ನಾಲ್ಕೂ ದಿಕ್ಕುಗಳಲ್ಲಿ ಭಕ್ತಾದಿಗಳಿಗೆ ಉಪ್ಪಿಟ್ಟು, ಪಲಾವ, ಚಹಾ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಈವರೆಗೆ ಸುಮಾರು ಒಂದು ಲಕ್ಣಕ್ಕೂ ಹೆಚ್ಚು ಭಕ್ತಾದಿಗಳು ಪ್ರಸಾದ ಸೇವಿಸಿದ್ಸಾರೆ. ಎಂ. ಬಿ. ಪಾಟೀಲರ ಸೂಚನೆಯಂತೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾಹಿತಿ ನೀಡಿದ್ದಾರೆ.
ಸೋಲಾಪುರ ರಸ್ತೆ, ಅಥಣಿ ರಸ್ತೆ, ಇಂಡಿ ರಸ್ತೆ ಮತ್ತು ಬಬಲೇಶ್ವರ ರಸ್ತೆಯಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಸುಮಾರು ಹತ್ತಿಪ್ಪತ್ತು ಸಾವಿರ ಭಕ್ತರಿಗೆ ವಿತರಿಸಲು ಪ್ರಸಾದ ಸಿದ್ಧವಾಗಿ ಇಡಲಾಗಿದೆ ಎಂದು ಡಾ. ಆರ್. ಬಿ. ಕೊಟ್ನಾಳ ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ ಶ್ರೀಗಳ ಲಿಂಗೈಕ್ಯ ಸುದ್ಸಿ ಪ್ರಕಟವಾಗುತ್ತಿದ್ದಂತೆ ಬಿ ಎಲ್ ಡಿ ಇ ಸಂಸ್ಥೆ ಅಧಿಕಾರಿಗಳು ಸಭೆ ಸೇರಿ ಎಂ. ಬಿ. ಪಾಟೀಲ ಅವರ ಸೂಚನೆಯಂತೆ ತಕ್ಷಣದಿಂದ ಕಾರ್ಯಪ್ರವೃತ್ತರಾಗಿ ಆಹಾರ ತಯಾರಿಗೆ ಅಗತ್ಯವಾಸ ನಾನಾ ಸಾಮಗ್ರಿಗಳನ್ನು ಕ್ರೂಢಿಕರಿಸಿದ್ದಾರೆ. ಅಲ್ಲದೇ, ಮಧ್ಯರಾತ್ರಿ 3 ಗಂಟೆಯಿಂದ ಸೋಲಾಪುರ ರಸ್ತೆಯಲ್ಲಿರುವ ಬಿ ಎಲ್ ಡಿ ಇ ನ್ಯೂ ಕ್ಯಾಂಪಸ್ ಬಳಿ ಬೃಹತ್ ಪೆಂಡಾಲ್ ಹಾಕಿ ಅಡುಗೆ ತಯಾರಿಸಿದ್ದಾರೆ. ಸಂಸ್ಥೆಯ ಸುಮಾರು 2000 ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಅಡುಗೆ ತಯಾರಿ, ವಿತರಣೆ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡು ಭಕ್ತಿ ಮೆರೆದಿದ್ದಾರೆ.
ಅಷ್ಟೇ ಅಲ್ಲ, ರಾತ್ರಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ತಿಯೆ ಮುಗಿಸಿ ವಾಪಸ್ಸಾಗುತ್ತಿದ್ದ ಜನರಿಗೂ ಕೂಡ ಅನ್ನಸಂತರ್ಪಣೆ ಮಾಡಲಾಯಿತು. ಬೆಳಿಗ್ಗೆಯಿಂದ ನಾನಾ ಊರುಗಳಿಂದ ಬಸವನಾಡಿಗೆ ಬಂದಿದ್ದ ಭಕ್ತರು ಕಿಲೋ ಮೀಟರ್ ಗಟ್ಟಲೇ ನಡೆದುಕೊಂಡು ಬರುತ್ತಿದ್ದರು. ಇವರೆಲ್ಲರಿಗೂ ಬೆಳಿಗ್ಗೆ ಉಪಹಾರ ಚಹಾ ಮತ್ತು ಮಧ್ಯಾಹ್ನ ಹಾಗೂ ಸಂಜೆ ಮಸಾಲೆ ರೈಸ್ ಮತ್ತು ಟೀ ವ್ಯವಸ್ಥೆ ಮಾಡುವ ಮೂಲಕ ಪ್ರೀತಿ ತೋರಿಸಿದ್ದಾರೆ.
ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿವಿ ರಜಿಸ್ಟ್ರಾರ ಡಾ. ಆರ್. ವಿ. ಕುಲಕರ್ಣಿ, ಅಧೀಕ್ಷರ ಎಸ್. ಎ. ಬಿರಾದಾರ ಮುಂತಾದವರು ಪ್ರಸಾದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು.