ಭಕ್ತರ ಮನದಲ್ಲಿ ನೆಲೆಸಿ ನಿಸರ್ಗದಲ್ಲಿ ಲೀನರಾದ ಸಿದ್ದೇಶ್ವರ ಶ್ರೀಗಳು ಚಿಕಿತ್ಸೆ ನಿರಾಕರಿಸಿದ್ದೇಕೆ? ಅಂತ್ಯಕ್ರಿಯೆಗೆ ಅಗ್ನಿಯರ್ಪಿತವನ್ನೇ ಯಾಕೆ ಆಯ್ದುಕೊಂಡರು?

ಮಹೇಶ ವಿ. ಶಟಗಾರ

ವಿಜಯಪುರ: ಬಸವನಾಡಿನ ನಡೆದಾಡುವ ದೇವರು ಲಿಂಗೈಕ್ಯರಾಗಿರುವುದು ಕೋಟ್ಯಾಂತರ ಜನರಲ್ಲಿ ದುಃಖವನ್ನುಂಟು ಮಾಡಿದೆ. ಅವರ ಪ್ರವಚನಗಳ ಶಕ್ತಿ ಎಷ್ಟಿತ್ತೆಂದರೆ ಅಂತ್ಯಕ್ರಿಯೆಗೆ ಸಾಗರೋಪಾದಿಯಲ್ಲಿ ಹಗಲಿರುಳು ಹರಿದು ಬಂದ ಜನಸಾಮಾನ್ಯರೇ ಸಾಕ್ಷಿ. ಜನರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿರುವ ಶ್ರೀಗಳು ಅನಾರೋಗ್ಯ ಪೀಡಿತರಾಗಿದ್ದಾಗ ವೈದ್ಯರಿಂದ ಚಿಕಿತ್ಸೆಯನ್ನು ನಿರಾಕರಿಸಿದರು.
ಇಂದಿನ ಆಧುನಿಕ ಯುಗದಲ್ಲಿ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿದ್ದರೂ ಅವುಗಳ ಸಹವಾಸವೇ ಬೇಡ ಎಂದು ವಿನಂತಿಪೂರಕವಾಗಿಯೇ ನಿರಾಕರಿಸಿದರು. ಇದನ್ನು ವೈದ್ಯರ ಬಳಿಯೂ ಹೇಳಿಕೊಂಡಿದ್ದರು.
ನಿಸರ್ಗಪ್ರೀಯ ಸ್ವಾಮೀಜಿ ನೈಸರ್ಗಿಕವಾಗಿಯೇ ಎಲ್ಲವೂ ಆಗಲಿ ಎಂದು ಬಯಸಿದ್ದರು.

ಶ್ರೀ ಸಿದ್ದೇಶ್ವರ ಸ್ವಾಮೀಜಿ ತಮ್ಮ ಆಧ್ಯಾತ್ಮಿಕ ಪ್ರವಚನಗಳಲ್ಲಿ ಬಹುತೇಕವಾಗಿ ನಿಸರ್ಗ ಮತ್ತು ಅದು ಮಾನವ ಹಾಗೂ ಜೀವ ಸಂಕುಲಕ್ಕೆ ನೀಡಿರುವ, ನೀಡುತ್ತಿರುವ ಕೊಡುಗೆಗಳ ಬಗ್ಗೆ ಜನರ ಮನಮುಟ್ಟುವಂತೆ ಆಶೀರ್ವಚನ ನೀಡುತ್ತಿದ್ದರು. ನಿಸರ್ಗದ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಅವರು ವಾಸಿಸುತ್ತಿದ್ದ ಜ್ಞಾನಯೋಗಾಶ್ರಮದ ಪರಿಸರದಲ್ಲಿ ಗಿಡಮರಗಳೇ ತುಂಬಿವೆ. ಪ್ರಾಣಿ ಪಕ್ಷಿಗಳ ಕಲರವವಿದೆ. ಅವುಗಳಿಗೆ ತೊಂದರೆಯಾಗಬಾರದು ಎಂದು ಸದಾ ಕಾಳಜಿ ವಹಿಸುತ್ತಿದ್ದರು.
ಆರು ತಿಂಗಳ ಹಿಂದೆ ಶ್ರೀಗಳು ಅನಾರೋಗ್ಯಕ್ಕೀಡಾದಾಗ ವೈದ್ಯರು ಚಿಕಿತ್ಸೆ ನೀಡಿದ್ದರು. ತೀರ ಇತ್ತೀಚೆಗೆ ಒಂದು ತಿಂಗಳ ಹಿಂದೆ ಅನಾರೋಗ್ಯ ಹೆಚ್ಚಾದಾಗ ಕನೇರಿ ಮಠಾಧೀಶರು, ಸುತ್ತೂರು ಶ್ರೀಗಳು, ವಿಜಯಪುರ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಮತ್ತು ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡಲು ಮನವೊಲಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಶ್ರೀಗಳು ಅದಕ್ಕೆ ಒಪ್ಪಲಿಲ್ಲ. ಪ್ರಕೃತಿಯ ವಿರುದ್ಧ ಹೋಗಬಾರದು ಎಂಬುದು ಅವರ ಅಚಲ ನಿರ್ಧಾರವಾಗಿತ್ತು. ತಮಗೆ ಅನಾರೋಗ್ಯ ಎದುರಾಗಿರುವುದು ದೈವೇಚ್ಛೆ ಎಂಬುದನ್ನು ಅರಿತುಕೊಂಡಿದ್ದರು. ಹೀಗಾಗಿಯೇ, ಅವರು ದೇವರು ಇಷ್ಟೋಂದು ಆಯುಷ್ಯ ನೀಡಿದ್ದಾನೆ. ಸಾಕಷ್ಟು ಬದುಕಿದ್ದೇನೆ. ಇರುವಷ್ಟು ದಿನ ಹೀಗೆಯೇ ಇರುತ್ತೇನೆ ಎಂದು ಆತ್ಮೀಯವಾಗಿ ಆಧ್ಯಾತ್ಮದ ಮಾತುಗಳ ಮೂಲಕವೇ ಹೆಚ್ಚಿನ ಚಿಕಿತ್ಸೆಗೆ ನಿರಾಕರಿಸಿದ್ದರು ಎಂದು ಆಶ್ರಮದ ಭಕ್ತರೊಬ್ಬರು ನೀಡಿದ ಮಾಹಿತಿ ಸಂತರ ದೃಢ ನಿಲುವಿಗೆ ಸಾಕ್ಷಿಯಾಗಿದೆ.

ಹೋಗುತ್ತಿದ್ದೇನೆ ಬಿಡಿ ಎಂದು ವೈದ್ಯರಿಗೆ ಹೇಳಿದ್ದ ಸ್ವಾಮೀಜಿ
ಕಳೆದ ಒಂದು ವಾರದಲ್ಲಿ ಶ್ರೀಗಳ ಆರೋಗ್ಯ ಮತ್ತಷ್ಟು ಚಿಂತಾಜನಕವಾಗುತ್ತಿದ್ದಾಗ ವೈದ್ಯರು ಶ್ರೀಗಳಿಗೆ ಚಿಕಿತ್ಸೆ ನೀಡಲು ಮುಂದಾದರು. ಆಗ ಶ್ರೀಗಳು, ಕೈಸನ್ನೆ ಮೂಲಕ ನಾನು ಹೋಗುತ್ತಿದ್ದೇನೆ. ಈ ಚಿಕಿತ್ಸೆ ಎಲ್ಲಾ ಯಾಕೆ? ಎಂದು ಕೇಳಿದ್ದರಂತೆ. ಅಷ್ಟೇ ಅಲ್ಲ, ವೈದ್ಯರಿಗೂ ನೀವು ಇಲ್ಲಿಯೇ ಯಾಕೆ ಇರುತ್ತೀರಿ? ನನ್ನನ್ನು ಭೇಟಿ ಮಾಡಿದ್ದೀರಲ್ಲ, ನೀವು ಇಲ್ಲಿಂದ ಹೊರಡಿ. ಬೇರೆ ರೋಗಿಗಳಿಗೆ ನಿಮ್ಮ ಸೇವೆ ಸಿಗಲಿ. ನಿಮ್ಮ ದಿನನಿತ್ಯದ ಕಾಯಕ ಮುಂದುವರೆಸಿ ಎಂದೂ ವೈದ್ಯರಿಗೆ ಹೇಳಿದ ಕಿವಿಮಾತುಗಳು ವೈದ್ಯರನ್ನೂ ದಂಗಾಗುವಂತೆ ಮಾಡಿದ್ದವು ಎಂಬುದೂ ನಡೆದಾಡುವ ದೇವರ ಭಕ್ತಪರ ಕಾಳಜಿಗೆ ಸಾಕ್ಷಿಯಾಗಿವೆ.

ಹಗಲಿರುಳು ಶ್ರಮಿಸಿದ ಬಸವನಾಡಿನ ವೈದ್ಯರು
ಬಿ ಎಲ್ ಡಿ ಇ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಅರವಿಂದ ಪಾಟೀಲ, ಡಾ. ಮಲ್ಲಣ್ಣ ಮೂಲಿಮನಿ, ಡಾ. ಎಸ್. ಬಿ. ಪಾಟೀಲ, ಡಾ. ಸಚೀನ ನಾಗೂರ, ಡಾ. ಸಂತೋಷ ಮುಂತಾದವರು ಶ್ರೀಗಳ ಆರೋಗ್ಯ ಸುಧಾರಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಶ್ರೀಗಳು ದೇಹತ್ಯಾಗದ ನಿರ್ಣಯ ಮಾಡಿದಂತೆ ತಮ್ಮ ಅಂತಿಮ ಇಚ್ಛೆಯಂತೆ ಭೌತಿಕವಾಗಿ ಭಕ್ತರನ್ನು ಅಗಲಿದರು. ಹಗಲಿರುಳು ಶ್ರೀಗಳು ಹೆಚ್ಚಿನ ಚಿಕಿತ್ಸೆ ಪಡೆಯಲು ಈ ವೈದ್ಯರ ತಂಡ ಶ್ರೀಗಳಿಗೆ ಹೆಚ್ಚಿಗೆ ಒಡನಾಟ ಹೊಂದಿದವರ ಮೂಲಕ ಮನವೊಲಿಸಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ.

ನಿಸರ್ಗ ಪ್ರೀಯ ಶ್ರೀಗಳು ನಿಸರ್ಗದಲ್ಲಿಯೇ ಲೀನವಾಗಲು ಬಯಸಿದರು

ಅದರ ಜೊತೆಗೆ ಶ್ರೀಗಳು ಎಂಟು ವರ್ಷಗಳ ಹಿಂದೆ ಬರೆಯಿಸಿದ ಅಂತಿಮ ಅಭಿವಂದನ ಪತ್ರದಲ್ಲಿ ತಮ್ಮ ಅಂತ್ಯಕ್ರಿಯೆ ಯಾವ ರೀತಿಯಲ್ಲಿ ನಡೆಯಬೇಕು ಎಂಬ ವಿಚಾರ ಶ್ರೀಗಳು ಹೀಗೆ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂದು ಚರ್ಚೆಯಾಗುತ್ತಿದೆ.
ಲಿಂಗಾಯಿತ ಸಮುದಾಯಲ್ಲಿ ಜನಿಸಿದರೂ ಜ್ಞಾನದಾಸೋಹದ ಮೂಲಕ ಸರ್ವ ಜಾತಿ, ಧರ್ಮದವರ ಮನಗೆದ್ದು ಅವರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ. ಜ್ಞಾನಯೋಗಾಶ್ರಮದಲ್ಲಿಯೇ ವಾಸಿಸುತ್ತಿದ್ದ ಶ್ರೀಗಳು ಲಿಂಗೈಕ್ಯರಾದ ನಂತರ ಲಿಂಗಾಯತ ಸಂಪ್ರದಾಯದಂತೆ ಅವರ ಅಂತ್ಯ ಸಂಸ್ಕಾರ ನಡೆಯಬಹುದು ಎಂದು ಬಹುತೇಕ ಭಕ್ತರು ಯೋಚಿಸಿದ್ದರು. ಆದರೆ, ಶ್ರೀಗಳ ಅಂತಿಮ ಅಭಿವಂದನಾ ಪತ್ರವನ್ನು ಮಾಧ್ಯಮಗಳ ಎದುರು ಸುತ್ತೂರು ಮತ್ತು ಕನೇರಿ ಮಠಾಧೀಶರು ಬಹಿರಂಗ ಪಡಿಸಿದಾಗ ಭಕ್ತರು ದಂಗಾದರು. ಶ್ರೀಗಳು ಹೀಗೇಕೆ ನಿರ್ಧಾರ ಮಾಡಿದ್ದಾರೆ ಎಂದು ತಂತಮ್ಮಲ್ಲಿಯೇ ಯೋಚಿಸತೊಡಗಿದರು.

ಶ್ರೀಗಳು ಜ್ಞಾನಯೋಗಾಶ್ರಮಕ್ಕೆ ಬರಲು ಕಾರಣ ಅವರ ಗುರುಗಳಾಗಿದ್ದ ಮಲ್ಲಿಕಾರ್ಜುನ ಸ್ವಾಮೀಜಿ. ಅವರ ಗರಡಿಯಲ್ಲಿಯೇ ಪಳಗಿ ಅವರ ಆಶಯದಂತೆಯೇ ಆಧ್ಯಾತ್ಮದ ಮೂಲಕ ಬಸವನಾಡಿನ ಸಂತರ, ಶರಣರ ಆಶಯಗಳನ್ನು ಜಗತ್ತಿಗೆ ಪಸರಿಸಿದವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ. ಇದರ ಪ್ರತೀಕವಾಗಿಯೇ ಅವರು, ತಮ್ಮ ಕೊನೆಯ ದಿನಗಳಲ್ಲಿ ಆಶ್ರಮದಲ್ಲಿಯೇ ಇರುವ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಗದ್ದುಗೆಗೆ ತೆರಳಿ ಧ್ಯಾನ ಮಾಡಿದ್ದರು. ಹೀಗೆ ತಮ್ಮ ಗುರುಗಳ ಬಗ್ಗೆ ಆಪಾರ ಶ್ರದ್ಧೆಯಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಲಿಂಗಾಯಿತ ಸಂಪ್ರದಾಯದಂತೆ ತಮ್ಮ ದೇಹವನ್ನು ಮಣ್ಣಿನಲ್ಲಿಡುವ ಬದಲು ಅಗ್ನಿಯರ್ಪಿತ ಮಾಡಬೇಕು ಉಯಿಲು ಬರೆದಿದ್ದರು. ಅಲ್ಲದೇ, ತಾವು ತಮಗಿಂತಲೂ ತಮ್ಮ ಗುರುಗಳಿಗೆ ಹೆಚ್ಚಿನ ಗೌರವ ಸಿಗಲಿ ಎಂದ ಸದಾಶಯದಿಂದ ತಮ್ಮ ಯಾವುದೇ ಸ್ಮಾರಕ ನಿರ್ಮಿಸಬಾರದು. ತಮ್ಮನ್ನು ಮರೆಯಬೇಕು ಎಂದು ಅಂತಿಮ ಬಯಕೆಯನ್ನು ಉಯಿಲಿನಲ್ಲಿ ಉಲ್ಲೇಖಿಸಿದ್ದರು.
ಇದರರ್ಥ, ತಮ್ಮ ಸ್ಮಾರಕ ನಿರ್ಮಾಣವಾದರೆ, ತಮ್ಮ ಗುರುಗಳ ಗೌರವಕ್ಕೆ ಧಕ್ಕೆ ಬರಬಹುದು ಎಂಬ ಸೂಕ್ಷ್ಮದೃಷ್ಠಿಯಿಂದ ಈ ನಿರ್ಧಾರ ಕೈಗೊಂಡಿರಬಹುದು ಎಂದು ಭಕ್ತರು ವಿಶ್ಲೇಷಿಸುತ್ತಿದ್ದಾರೆ.

ಅಷ್ಟೇ ಅಲ್ಲ, ಶ್ರೀಗಳು ಬದುಕಿನುದ್ದಕ್ಕೂ ಯಾವುದೇ ಆಸೆಗಳನ್ನು ಹೊಂದಿರದೇ ಆಧ್ಯಾತ್ಮದ ದಾಸೋಹವನ್ನು ಪ್ರವಚನಗಳ ಮೂಲಕ ಜನರಿಗೆ ಉಣಬಡಿಸಿದವರು. ತಮ್ಮ ಹೆಸರಿನಿನಲ್ಲಿ ಸ್ಮಾರಕವಾದರೆ, ಅಲ್ಲಿ ಮತ್ತೆ ಭಕ್ತರು ಬರುತ್ತಾರೆ. ಪೂಜೆ ಮಾಡುತ್ತಾರೆ. ಕಾಯಿ, ಕರ್ಪೂರ ಹಚ್ಚುತ್ತಾರೆ. ಇದು ಮತ್ತೆ ಚರ್ಚೆಗಳಿಗೆ ಆಸ್ಪದವಾಗಬಾರದು. ತಾವೊಬ್ಬ ಸನ್ಯಾಸಿಯಾಗಿದ್ದು, ಅದಕ್ಕೆ ತಕ್ಕಂತೆ ಬದುಕಿದರಷ್ಟೇ ಸಾಕು ಎಂಬ ಸದುದ್ದೇಶದಿಂದ ಈ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಸುಂದರ ಸ್ವಚ್ಛ ಪರಿಸರದಲ್ಲಿ ಬೆಳೆದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಭಕ್ತರ ಮನದಲ್ಲಿ ಶಾಶ್ವತವಾಗಿ ನೆಲೆಸಿ ನಿಸರ್ಗದಲ್ಲಿಯೇ ಲೀನರಾಗುವ ಮೂಲಕ ಪರಿಸರದಲ್ಲಿಯೇ ಉಳಿದಿಕೊಂಡಿದ್ದಾರೆ.

Leave a Reply

ಹೊಸ ಪೋಸ್ಟ್‌