ವಿಜಯಪುರ: ಬಸವನಾಡಿನ ನಡೆದಾಡುವ ದೇವರಾಗಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ಮಂಗಳವಾರವೇ ಮುಕ್ತಾಯವಾಗಿದ್ದರೂ, ಭಕ್ತರು ಮಾತ್ರ ಈಗಲೂ ಆಶ್ರಮಕ್ಕೆ ಆಗಮಿಸುತ್ತಿದ್ದಾರೆ.
ಜ್ಞಾನ ದಾಸೋಹದ ಮೂಲಕ ಕೋಟ್ಯಂತರ ಜನಮನಗಳಲ್ಲಿ ನೆಲೆಸಿರುವ ಶ್ರೀಗಳ ಅಂತಿಮ ದರ್ಶನ ಸಾಧ್ಯವಾಗದವರು ಹಾಗೂ ಅಂತಿಮ ದರ್ಶನ ಪಡೆದರೂ ಶ್ರೀಗಳ ಮೇಲಿನ ಅಪಾರ ಭಕ್ತಿಯಿಂದಾಗಿ ಸಹಸ್ರಾರು ಭಕ್ತರು ಈಗಲೂ ತುಂಬಿದ ಕಣ್ಣಾಲಿಯೊಂದಿಗೆ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ.
ಜ್ಞಾನಯೋಗಿಯ ಅಗಲಿಕೆಯಿಂದಾಗಿ ಆಶ್ರಮದಲ್ಲಿ ನೀರವ ಮೌನ ಆವರಿಸಿದೆ. ಆದರೆ, ಭಕ್ತರು ಮಾತ್ರ ಸ್ವಾಮೀಜಿಗಳ ಚಿತಾಭಸ್ಮದ ದರ್ಶನಕ್ಕೆ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಮಹಿಳೆಯರು, ಮಕ್ಕಳೆನ್ನದೇ ಹಿರಿಯರೂ ಕೂಡ ಆಶ್ರಮಕ್ಕೆ ಈಗಲೂ ದೌಡಾಯಿಸುತ್ತಿದ್ದಾರೆ. ವಿಜಯಪುರ ನಗರವಷ್ಟೇ ಅಲ್ಲ, ಕರ್ನಾಟಕ, ನೆರೆಯ ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯಗಳಿಂದಲೂ ಜನರು ನಾನಾ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ.
ಮುಂದುವರೆದ ದಾಸೋಹ
ಈ ಮಧ್ಯೆ, ಆಶ್ರಮಕ್ಕೆ ಬರುತ್ತಿರುವ ಲಿಂ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮದ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತಾದಿಗಳಿಗಾಗಿ ಎಂದಿನಂತೆ ದಾಸೋಹ ಮುಂದುವರೆದಿದೆ. ಸ್ವಾಮೀಜಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಭಕ್ತರು ಕಣ್ಣೀರು ಹಾಕುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಲಬುರಗಿಯ ಭಕ್ತ ಶಿವಯೋಗಿ ಹತ್ತಿ, ನಡೆದಾಡುವ ದೇವರು ಈ ಜಗತ್ತಿನಲ್ಲಿ ಸಿಗುವುದಿಲ್ಲ. ಇಂಥ ಸ್ವಾಮೀಜಿ ಸಿಗಬೇಕಾದರೆ ಅದು ನಮ್ಮ ಪುಣ್ಯ. ಶ್ರೀಗಳ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದ್ದೇವು. ಶ್ರೀಗಳು ಲಿಂಗೈಕ್ಯರಾಗಿ ಮೂರು ದಿನಗಳಾದರೂ ಭಕ್ತರು ಈಗಲೂ ಜನ ಬರುತ್ತಿದ್ದಾರೆ. ಶ್ರೀಗಳು ಪ್ರವಚನಕ್ಕಾಗಿ ಈಗಾಗಲೇ ಸುಮಾರು 10 ವರ್ಷಗಳ ಅಡ್ವಾನ್ಸ್ ಬುಕ್ಕಿಂಗ್ ಆಗಿವೆ. ಮನೆಯಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡಿರುವುದಕ್ಕಿಂತಲೂ ದುಃಖವಾಗಿದೆ. ಶ್ರೀಗಳನ್ನು ನಂಬಿದರೆ ಸಕಲ ಕಷ್ಟಗಳೂ ನಿವಾರಣೆಯಾಗುತ್ತವೆ. ಇನ್ನೆರಡು ದಿನ ಭಕ್ತರಿಗೆ ಅವಕಾಶ ಮಾಡಿಕೊಡಬೇಕಿತ್ತು. ಜಗತ್ತಿನಲ್ಲಿ ಇಂಥವರು ಸಿಗುವುದು ಪುಣ್ಯದ ಕೆಲಸ. ಶ್ರೀಗಳು ಮತ್ತೆ ಹುಟ್ಟಿ ಬರಬೇಕು ಎಂದು ಅಶ್ರುತರ್ಪಣ ಸಲ್ಲಿಸಿದರು.
ನಡೆದಾಡುವ ದೇವರು ಮತ್ತೆ ಹುಟ್ಟಿ ಬರಬೇಕು. ವಿಜಯಪುರಕ್ಕೆ ಅವರು ಕಳಸವಿದ್ದಂತೆ. ಈ ಕಳಸ ಕಳಚಿದಂತಾಗಿದೆ. ನಮ್ಮ ಆಯುಷ್ಯವನ್ನು ಅವರಿಗೆ ನೀಡಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇವು. ಇನ್ನಷ್ಟು ದಿನ ಅವರು ಬದುಕಬೇಕಿತ್ತು. ಆದರೆ, ನಮ್ಮನ್ನು ಅವರು ಅಗಲಿದ್ದಾರೆ. ಆಶ್ರಮದ ವಾತಾವರಣ ಈಗ ಭಣಭಣವಾಗಿದ್ದು, ಅನಾಥವಾಗಿದೆ. ಬಡವರು ಬಂದು ಅವರ ಆಶೀರ್ವಾದ ಪಡೆಯುತ್ತಿದ್ದರು. ಈಗ ಈ ಆಶ್ರಮದಲ್ಲಿ ಉತ್ಸಾಹವೇ ಇಲ್ಲ ಎಂದು ಅಂಜಲಿ ಎಂಬ ಭಕ್ತೆ ಕಣ್ಣೀರು ಮಿಡಿದಿದ್ದಾರೆ.
ಶ್ರೀಗಳ ಅಗಲಿಕೆಯಾಗಿದ್ದರೂ, ಅವರ ಭಕ್ತರಲ್ಲಿ ಭಕ್ತಿ ಮಾತ್ರ ಇನ್ನೂ ಹೆಚ್ಚಾಗುತ್ತಲೇ ಇದೆ. ಅವರು ಬದುಕಿದ್ದಾಗ ದರ್ಶನ ಪಡೆಯಲು ಸಾಧ್ಯವಿಲ್ಲದ ಕಾರಣ ಈಗ ಕಡೆ ಪಕ್ಷ ಅವರ ಚಿತಾಭಸ್ಮಮದ ದರ್ಶನವನ್ನಾದರೂ ಪಡೆಯಬೇಕು ಎಂದು ಭಕ್ತರು ಈಗಲೂ ಅಪಾರ ಸಂಖ್ಯೆಯಲ್ಲಿ ವಿಜಯಪುರ ಜ್ಞಾನಯೋಗಾಶ್ರಮದತ್ತ ಆಗಮಿಸುತ್ತಿರುವುದು ಶ್ರೀಗಳ ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಜನಪರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.