ವಿಜಯಪುರ: ಲಿಂ. ಸಿದ್ಧೇಶ್ವರ ಸ್ವಾಮೀಜಿ ಸಪ್ತಭಾಷಾ ಪ್ರವೀಣರಾಗಿದ್ದು, ಜಗತ್ತಿನ ದಾರ್ಶನಿಕರ ತತ್ವಾದರ್ಶಗಳನ್ನು ಭಕ್ತರಿಗೆ ಸರಳ ಭಾಷೆಯಲ್ಲಿ ತಿಳಿಯುವಂತೆ ಪ್ರವಚನಗಳ ಮೂಲಕ ಆಶೀರ್ವಚನ ನೀಡುತ್ತಿದ್ದರು ಎಂದು ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು.
ವಿಜಯಪುರ ನಗರದಲ್ಲಿರುವ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದಲ್ಲಿ ನಡೆದ ನಮ್ಮ ದೇವರು ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಸ್ಮರಣೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಸಂಸ್ಕೃತ ಭಾಷೆಗಳಲ್ಲಿ ಮಾತನಾಡುತ್ತಿದ್ದರು. ಅಷ್ಟೇ ಅಲ್ಲ, ಲ್ಯಾಟೀನ್ ಮತ್ತು ಅರೇಬಿಕ್ ಭಾಷೆಗಳನ್ನೂ ಅಧ್ಯಯನ ಮಾಡುತ್ತಿದ್ದರು. ಈ ಮೂಲಕ ಸಪ್ತ ಭಾಷೆ ಪ್ರವೀಣರಾಗಿದ್ದ ಶ್ರೀಗಳು ಜಗತ್ತಿನ ದಾರ್ಶನಿಕರ ದರ್ಶನವನ್ನು ಭಕ್ತರಿಗೆ ನೀಡಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ವರ್ಣನೆಗೂ ನಾವು ಒಂದು ರೀತಿ ಅನರ್ಹರು. ಖಾವಿ ಹಾಕಲಿಲ್ಲ, ಮಠ ಕಟ್ಟಲಿಲ್ಲ, ಕಿರೀಟ ತೊಡಲಿಲ್ಲ, ತತ್ವ ಬಿಡಲಿಲ್ಲ..ನೀವು ನಮ್ಮೊಡನೆ ಇಲ್ಲ ಎಂಬುದು ನಮ್ಮ ಮನಸ್ಸು ಒಪ್ಪುತ್ತಿಲ್ಲ ಎಂದು ಜಂಬುನಾಥ ಕಂಚ್ಯಾಣಿ ನುಡಿನಮನ ಸಲ್ಲಿಸಿದರು.
ಶ್ರೀಗಳ ಜೊತೆಗಿನ ತಮ್ಮ ಒಡನಾಟ ಸ್ಮರಿಸಿದ ಖ್ಯಾತ ಸಂಶೋಧಕ ಡಾ. ಎಸ್. ಕೆ. ಕೊಪ್ಪ ಮಾತನಾಡಿ, ಕಠಿಣವಾಗಿರುವ ವೇದ ಮತ್ತು ಉಪನಿಷತ್ತುಗಳನ್ನು ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತೆ ಲಿಂ. ಸಿದ್ದೇಶ್ವರ ಸ್ವಾಮೀಜಿ ಪ್ರವಚನಗಳ ಮೂಲಕ ಬದುಕಿನ ಸಾರವನ್ನು ಹೇಳುತ್ತಿದ್ದರು. ಶ್ರೀಗಳು, ನಮ್ಮ ಜೊತೆ ಇಲ್ಲ ಎಂದು ಅನಿಸುವುದಿಲ್ಲ. ನಮ್ಮೆಲ್ಲರ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಶ್ರೀಗಳ ಅಂಗಿಗೆ ಕಿಸೆಯಿರಲಿಲ್ಲ. ಬ್ಯಾಂಕ್ ಖಾತೆ ಇಲ್ರಿಲ್ಲ. ಸಿಂಹಾಸನ, ಕಿರೀಟಗಳಂತೂ ಇರಲೇ ಇಲ್ಲ. ಬಿರುದು, ಸನ್ಮಾನಗಳಿಂದ ಅವರು ದೂರವಿದ್ದರು. ಯಾವುದೇ ರೀತಿಯ ಲಾಸಸೆಗಳು ಶ್ರೀಗಳ ಸನಿಹಕ್ಕೂ ಸುಳಿಯಲಿಲ್ಲ ಎಂದು ಹೇಳಿದರು.
ಶ್ರೀಗಳನ್ನು ಈ ಹಿಂದೆ ಭೇಟಿಯಾದ ಸಂದರ್ಭದಲ್ಲಿ ಅಂಜನಾದ್ರಿ ಬೆಟ್ಟವನ್ನು ಹತ್ತುವಂತೆ ನನಗೆ ಹೇಳಿ ತಮಗೆ ಒಂದಿಷ್ಟು ಕೆಲಸವಿದೆ ಮುಗಿಸಿಕೊಂಡು ಬರುತ್ತೇನೆ ಎಂದು ಹೊರಟರು. ನಾವು ಕಷ್ಟಪಟ್ಟು ಕುಂಟುತ್ತ ತೆವಳುತ್ತ ಬೆಟ್ಟ ಹತ್ತಿ ಹೋದೆವು. ಆದರೆ, ಶ್ರೀಗಳು ಅಲ್ಲಿ ನಮಗಿಂತ ಮುಂಚೆಯೇ ಅಲ್ಲಿದ್ದರು. ಅವರ ಪ್ರಭಾವದಿಂದ ಪ್ರೇಮಕವಿಯೊಬ್ಬರು ಆಧ್ಯಾತ್ಮಿಕ ಕವಿಯಾಗಿ ಬದಲಾದರು. ಸಂತನೆಂದರೆ ಯಾರು ಧನ್ಯತೆಯನ್ನು ಅರಿತವರು ಎಂಬ ಗೀತೆಯನ್ನು ಬರೆದರು ಎಂದು ಡಾ. ಎಸ್. ಕೆ. ಕೊಪ್ಪ ತಿಳಿಸಿದರು.
ಸಾಹಿತಿ ಡಾ. ಆರ್. ಕೆ. ಕುಲಕರ್ಣಿ ಮಾತನಾಡಿ, ಸಾಧನೆ ಸಿದ್ಧಿಯಾದಾಗ ದೇಹವನ್ನು ಹೀಯಾಳಿಸುವುದುಂಟು, ಆದರೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ದೇಹವನ್ನು ಹೀಯಾಳಸಲಿಲ್ಲ, ಅದನ್ನು ಯಕಶ್ಚಿತ ಎನ್ನಲಿಲ್ಲ, ಭಗವಂತನ ಪ್ರಸಾದ ಎಂದು ತಿಳಿದರು, ಜ್ಞಾನಕ್ಕೆ ಕ್ರಿಯಾತ್ಮಕ ರೂಪಕೊಟ್ಟು ಜ್ಞಾನಪ್ರಭೆಯನ್ನು ಸಣ್ಣ ಕಥೆಗಳ ಮೂಲಕ ಅಂತ:ಕರಣದಿಂದ ವಿವರಿಸಿದವರು. ಅವರ ಪ್ರವಚನಗಳ ರಾಶಿ ರಾಶಿ ಒಂದು ಅಮರವಾಣಿಯಂತಿದೆ, ನಿರಕ್ಷರಸ್ಥರಿಗೂ ಹೃದಯ ಮುಟ್ಟುವಂತೆ ಜ್ಞಾನವನ್ನು ಹಂಚಿದ ಶ್ರೇಯಸ್ಸು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಜ್ಞಾನ ಎಂಬ ಪ್ರಭೆಯನ್ನು ಭಕ್ತವರ್ಗಕ್ಕೆ ಅಂತ:ಕರಣದಿಂಧ ಉಣಬಡಿಸಿದ ದೈವಾಂಶ ಸಂಭೂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕಾಲಘಟ್ಟದಲ್ಲಿ ನಾವೆಲ್ಲರೂ ಜೀವಿಸಿರುವುದೇ ದೊಡ್ಡ ಸೌಭಾಗ್ಯ ಎಂದು ಹೇಳಿದರು.
ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರ ವಾಸುದೇವ ಹೆರಕಲ್ಲ ಮಾತನಾಡಿ, ತಾಯಿ ಹಕ್ಕಿ ತನ್ನ ಮರಿಗಳಿಗೆ ಗುಟ್ಟಿ ಹಾಕಿದಂತೆ ಶ್ರೀಗಳು ಜೀವನದ ಸಾರವನ್ನು ಜನತಗೆ ಮನಮುಟ್ಟುವಂತೆ ಬೋಧಿಸುತ್ತಿದ್ದರು. ಪ್ಯಾಥೋಲಾಜಿಯಲ್ಲಿ ಡಾಕ್ಟರೇಟ್ ಮಾಡಿದ ಸಂಶೋಧಕರು ಶ್ರೀಗಳನ್ನು ಭೇಟಿ ಮಾಡಿದರು, ಆಗ ಅವರಿಗೆ ಮಮ್ಮಿಫಿಕೇಷನ್ ಬಗ್ಗೆ ಮಾಹಿತಿ ಕೇಳಿದಾಗ ಆ ಸಂಶೋಧಕರಿಗೆ ಅದರ ಬಗ್ಗೆ ಮಾಹಿತಿ ಇರಲಿಲ್ಲ. ಭಾರತದಲ್ಲಿ ಅದನ್ನು ಕಲಿಸುವುದಿಲ್ಲ ಎಂದು ಹೇಳಿದರು. ಆಗ, ಸ್ವಾಮೀಜಿಗಳು ಮಮ್ಮಿಫಿಕೇಷನ್ ಬಗ್ಗೆ ಸುದೀರ್ಘವಾದ ಒಂದು ತಾಸುಗಳ ಕಾಲ ವೈದ್ಯಕೀಯ ಪರಿಭಾಷೆಯಲ್ಲಿ ಆ ವೈದ್ಯರಿಗೆ ಪಾಠ ಮಾಡಿ ಗಮನ ಸೆಳೆದಿದ್ದರು ಎಂದು ತಾವು ಶ್ರೀಗಳ ಜೊತೆಗಿದ್ದಾಗ ನಡೆದ ಘಟನೆಯನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಮಾತನಾಡಿ, ಶ್ರೀಗಳು ತಮ್ಮ ಕೊನೆಯ ಕ್ಷಣಗಳಲ್ಲಿಯೂ ಅಧ್ಯಯನ ಬಿಡಲಿಲ್ಲ. ಡಾ. ಹಳಕಟ್ಟಿ ಅವರ ಸಮಗ್ರ ಸಾಹಿತ್ಯ ಸಂಪುಟಗಳಲ್ಲಿಯ ಕೆಲವೊಂದು ಲೇಖನಗಳನ್ನು ತರಿಸಿಕೊಂಡು ಓದಿದರು. ಮೃತ್ಯುಪತ್ರದ ಬದಲಿಗೆ ಅಂತಿಮ ಅಭಿವಂದನಾ ಪತ್ರ ಬರೆದ ಏಕೈಕ ಸಂತ ಇವರಾಗಿದ್ದಾರೆ. ಅವರ ಅಂತಿಮ ಅಭಿವಂದನ ಪತ್ರವೇ ಸಾಕಷ್ಟು ಜ್ಞಾನಕ್ಕೆ ದಾರಿಯಾಗಿದೆ. ಈ ಕುರಿತು ವಿಶ್ಲೇಷಣಾತ್ಮಕ ಪುಸ್ತಕ ಬರೆದರೆ ಆ ಪುಸ್ತಕವನ್ನು ಸಂಶೋಧನಾ ಕೇಂದ್ರದಿಂದ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಬಿಎಲ್‌ಡಿಇ ಡೀಮ್ಡ್ ವಿವಿ ರಜಿಸ್ಟ್ರಾರ್, ಡಾ. ಡಾ. ಆರ್. ವಿ. ಕುಲಕರ್ಣಿ, ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೋಟ್ನಾಳ, ಡಾ. ಎಸ್. ಎಚ್. ಲಗಳಿ, ಪ್ರೊ. ಐ. ಎಸ್. ಕಾಳಪ್ಪನವರ, ಗಂಗಾಧರ ಸಾಲಕ್ಕಿ, ಬಿ. ಎಂ. ಪಾಟೀಲ, ಸಂಗಮೇಶ ಬಾದಾಮಿ, ಪ್ರೊ. ಮಲ್ಲಿಕಾರ್ಜುನ ಕನ್ನೂರ ಮೊದಲಾದವರು ಉಪಸ್ಥಿತರಿದ್ದರು.
ಖ್ಯಾತ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಸ್ವಾಗತಿಸಿದರು. ಚೈತನಾ ಸಂಕೊಂಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.