ವಿಜಯಪುರ: ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಪುನರ್ಮಿಸಲ ಕಾರ್ಯಕ್ರಮ ನಡೆಯಲಿದೆ.
1980 ರಲ್ಲಿ ಪ್ರಾರಂಭವಾದ ಈ ಕಾಲೇಜಿನಲ್ಲಿ ಈವರೆಗೆ ಸುಮಾರು 15000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಎಂಜಿನಿಯರಿಂಗ್ ಓದಿರುವ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವರು ತಮ್ಮದೇ ಆದ ಸಂಸ್ಥೆಗಳನ್ನು ಕಟ್ಟಿ ಉದ್ಯಮಿಯಾಗಿದ್ದಾರೆ.
ಈ ಕಾಲೇಜಿನ ಅಲ್ಯೂಮಿನಿ ಅಸೊಸಿಯನ್ ಸಕ್ರಿಯವಾಗಿದ್ದು, 1984 ರಿಂದ 1997 ವರ್ಷದವರೆಗಿನ ವಿದ್ಯಾರ್ಥಿಗಳ ಸಭೆಯನ್ನು ಕರೆಯಲಾಗಿದೆ. ಈ ಅವಧಿಯಲ್ಲಿ ಓದಿದವರು ಪದವಿ ಪಡೆದು 25 ವರ್ಷಗಳನ್ನು ಪೂರೈಸಿದ್ದು, ಇವರಲ್ಲಿ ಬಹಳಷ್ಟು ಜನರು ಬಹುರಾಷ್ಟ್ರೀಯ ಕಂಪನಿಗಳ ಸಿಇಓ, ಜನರಲ್ ಮ್ಯಾನೆಜರ, ಡೈರೆಕ್ಟರ್ಸ್, ಸಾಪ್ಟವೆರ್ ಕಂಪನಿಗಳ ಉನ್ನತ ಸ್ಥಾನದಲ್ಲಿದ್ದಾರೆ. ಶಾಸಕರು, ಸಚಿವರಾಗಿಯೂ ಜನಸೇವೆಯಲ್ಲಿ ತೊಡಗಿದ್ದು, ಇನ್ನೂ ಅನೇಕ ಹುದ್ದೆಗಳನ್ನು ಅಲಂಕರಿಸಿ ಸಮಾಜಮುಖಿಯಾಗಿ ಕಾಲೇಜಿನ ಕೀರ್ತಿ ಪತಾಕೆಯನ್ನು ಬೆಳಗಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ
ಜ. 7 ರಂದು ಶನಿವಾರ ಬೆ. 11ಕ್ಕೆ ಈ ಕಾರ್ಯಕ್ರಮ ನಿಗದಿಯಾಗಿದ್ದು, ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕರಾಗಿರುವ ಎಂ. ಬಿ. ಪಾಟೀಲ ಉದ್ಘಾಟಿಸಲಿದ್ದಾರೆ. ಸುಮಾರು 600 ಹಳೆಯ ವಿದ್ಯಾರ್ಥಿಗಳು ಪಾಲ್ಗೋಳ್ಳುವ ನಿರೀಕ್ಷೆಯಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ. ಮಹೇಶ ನಾಗರಾಳ ತಿಳಿಸಿದ್ದಾರೆ.
ಹಳೆಯ ವಿದ್ಯಾರ್ಥಿಗಳ ಸಲಹೆ ಮತ್ತು ಸಹಕಾರದಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸುವುದು ಹಾಗೂ ಅತ್ಯುತ್ತಮ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅದರ ಪ್ರಯೋಜನ ದೊರಕಿಸುವುದು, ಹೊಸ ತಂತ್ರಜ್ಞಾನ ಅಳವಡಿಕೆ ಮತ್ತು ಔದ್ಯೋಗಿಕ ಕಂಪನಿಗಳೊಂದಿಗೆ ಬಾಂಧವ್ಯ ಮತ್ತು ಪರಸ್ಪರ ತಿಳುವಳಿಕೆ ಏರ್ಪಡಿಸುವುದು ಈ ಅಲುಮಿನಿ ಅಸೋಸಿಯೇಷನ್ ಉದ್ದೇಶವಾಗಿದೆ ಎಂದು ಡಾ. ಮಹೇಶ ನಾಗರಾಳ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.