ವಿಜಯಪುರ: ಜಲಸಂಪನ್ಮೂಲ ಸಚಿವನಾಗಿ ನಾನು ಮಾಡಿರುವ ಕಾರ್ಯಗಳನ್ನು ಮೆಚ್ಚಿ ಸಿದ್ಧೇಶ್ವರ ಸ್ವಾಮೀಜಿ ಯಶಸ್ವಿ ಸಚಿವ ಎಂದು ಆಶೀರ್ವಾದ ಮಾಡಿದ್ದಾರೆ. ಇದು ನನಗೆ ನೋಬೆಲ್ ಪ್ರಶಸ್ತಿಗಿಂತಲೂ ಹೆಚ್ಚು ಸಂತೋಷ ತಂದಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಡ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನೂ ಕೂಡ ಇದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದ್ದು, ಜಲಸಂಪನ್ಮೂಲ ಸಚಿವನಾಗಿ ಕೆಲಸ ಮಾಡಲು ಸಾಕಷ್ಟು ಅನುಕೂಲವಾಯಿತು. ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ನೀರಾವರಿ ಕೆಲಸ ಮಾಡಿದ್ದೇನೆ. ಜಲಸಂಪನ್ಮೂಲ ಸಚಿವನಾಗಿ ಅಧಿಕಾರ ವಹಿಸಿಕೊಂಡ ಹಲವರು ಜನ ಹಿರಿಯ ನಾಯಕರು ಇಷ್ಟು ದೊಡ್ಡ ಖಾತೆಯ ನಿರ್ವಹಣೆ ಚಾಲೆಂಜಿಂಗ್ ಇದೆ ಎಂದಿದ್ದರು. ಆದರೇ, ಶ್ರೀಗಳ ಆಶೀರ್ವಾದದಿಂದ ಯಶಸ್ವಿಯಾಗಿ ನಿರ್ವಹಿಸಿ ಒಣಭೂಮಿಗೆ ನೀರುಣಿಸಿದ್ದೇನೆ. ಅಂತರ್ಜಲ ಹೆಚ್ಚಳದಿಂದಾಗಿ ಅಂದು ಬತ್ತಿದ ಕೊಳವೆ ಭಾವಿಗಳು ಈಗ ಪುನಶ್ಚೇತನಗೊಂಡಿವೆ. ರಾಜ್ಯದಲ್ಲಿ ಈಗ ವಿಜಯಪುರ ಜಿಲ್ಲೆ ಅತ್ಯಂತ ಶ್ರೀಮಂತ ಜಿಲ್ಲೆಗಳ ಸಾಲಿನಲ್ಲಿ ನಿಂತಿದೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿಗಳಿಗೆ ಮನವಿ
ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಣಕಾಸಿನ ನೆರವು ನೀಡುವುದ ಬೇಡ. ಬದಲಾಗಿ ನಮ್ಮ ವೈದ್ಯಕೀಯ ಕಾಲೇಜು ಈಗ ದೇಶದಲ್ಲಿಯೇ ಉನ್ನತ ಸ್ಥಾನದಲ್ಲಿರುವ 10 ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಈ ಎಂಜಿನಿಯರಿಂಗ್ ಕಾಲೇಜನ್ನು ಉತ್ತುಂಗಕ್ಕೇರಿಸಲು ಇಲ್ಲಿನ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸ ನೀಡಬೇಕು. ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಔದ್ಯಮಿಕ ಸಂವಾದ ನಡೆಸಬೇಕು. ಕ್ಯಾಂಪಸ್ ಸೆಲೆಕ್ಷನ್ ಎದುರಿಸುವ ಬಗೆಯ ಕುರಿತು, ನಾನಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು, ಸ್ಟಾರ್ಟ್ ಅಪ್ ಆರಂಭಿಸುವ ಬಗ್ಗೆ ಮಾರ್ಗದರ್ಶನ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿಗೆ ಅನುಕೂಲವಾಗಲಿದೆ. ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜನ್ನು ಈ ಮೂಲಕ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನೆರವಾಗಲಿದೆ ಎಂದು ಅವರು ಹೇಳಿದರು.
ವಿದೇಶ ವಿವಿಗಳೊಂದಿಗೆ ಪೈಪೋಟಿ
ಈಗ ಕೇಂದ್ರ ಸರಕಾರ ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಅನುಮತಿ ನೀಡಿವೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ಎದುರಿಸಬೇಕಾಗುತ್ತದೆ. ಈಗಿನಿಂದಲೇ ಈ ನಿಟ್ಟಿನಲ್ಲಿ ಗುಣಾತ್ಮಕವಾಗಿ ಸ್ಪರ್ಧಿಸಲು ತಯಾರಾಗಬೇಕಿದೆ. ಇದಕ್ಕೆ ಹಳೆಯ ವಿದ್ಯಾರ್ಥಿಗಳು ಸಹಕರಿಸಿ ಪ್ರೋತ್ಸಾಹಿಸಬೇಕಿದೆ ಎಂದು ಅವರು ತಿಳಿಸಿದರು.
ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರಿಂದ ಸ್ಥಾಪಿತವಾಗಿ ಬಂಥನಾಳ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಬೆಳೆದ ಬಿ ಎಲ್ ಡಿ ಇ ಸಂಸ್ಥೆ ವತಿಯಿಂದ 1980ರಲ್ಲಿ ಈ ಕಾಲೇಜು ಆರಂಭವಾಯಿತು. ಪ್ರಾರಂಭದಲ್ಲಿ ತೀವ್ರ ಹಣಕಾಸಿನ ಸಮಸ್ಯೆ ಉಂಟಾಗಿತ್ತು. ಆಗ ನಮ್ಮ ತಂದೆಯವರಾದ ಬಿ. ಎಂ. ಪಾಟೀಲರು ಸಾಂಗಲಿ ಬ್ಯಾಂಕಿನಲ್ಲಿ ಸಾಲ ಮಾಡಿ ಇದನ್ನು ಕಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೆ ಸೇವೆ ಸಲ್ಲಿಸಿದ ಶಿಕ್ಷಕರು, ಪ್ರಾಚಾರ್ಯರು ಮತ್ತು ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದಾಗಿ ಈ ಕಾಲೇಜು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಜಿನಿಯರುಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಎಂ. ಬಿ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಮಾತನಾಡಿದ ಮತ್ತೋರ್ವ ಹಳೆಯ ವಿದ್ಯಾರ್ಥಿ ಮತ್ತು ಈಗ ದೇವರ ಹಿಪ್ಪರಗಿ ಶಾಸಕರಾಗಿರುವ ಸೋಮನಗೌಡ ಪಾಟೀಲ, ದಿ. ಬಿ. ಎಂ. ಪಾಟೀಲರು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಕಟ್ಟಿ ಗುಡಿಯನ್ನಾಗಿ ಮಾಡಿದರೆ, ಅವುಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಮೂಲಕ ಎಂ. ಬಿ. ಪಾಟೀಲರು ಗುಡಿಯ ಮೇಲೆ ಕಳಸ ಇಡುವ ಕೆಲಸ ಮಾಡಿದ್ದಾರೆ ಎಂದು ಮನದುಂಬಿ ಶ್ಲಾಘಿಸಿದರು.
ಈ ಕಾಲೇಜಿನಲ್ಲಿಯೇ ಕಲಿತ ಎಂ. ಬಿ. ಪಾಟೀಲರು ಇದೇ ಕಾಲೇಜಿನಿಂದ ತಯಾರಿಸಲಾದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಲಸಂಪನ್ಮೂಲ ಸಚಿವರಾಗಿ ಜಾರಿ ಮಾಡಿದ್ದರು. ಆಗಿನಿಂದ ಈ ಜಿಲ್ಲೆಯಲ್ಲಿ ನೀರಾವರಿಯಾಗಿ ಹಸಿರುಮಯವಾಗಿದೆ. ಅಷ್ಟೇ ಅಲ್ಲ, ಈ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇತರೆ ರಾಜ್ಯಗಳಿಗೂ ಮಾದರಿಯಾಗಿರುವುದು ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನ ಗುಣಮಟ್ಟದ ಯೋಜನೆಗಳಿಗೆ ಸಾಕ್ಷಿಯಾಗಿದೆ ಎಂದು ಸೋಮನಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಕಾಲೇಜಿನ ಅಭಿವೃದ್ಧಿಯ ವರದಿ ವಾಚಿಸಿದರು. ಅಲ್ಲದೇ, ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮ ಸಂಯೋಜಕ ಎ. ವಿ. ನಾಗರಾಳ ಉಪಸ್ಥಿತರಿದ್ದರು.
ಶ್ರೀಹರ್ಷಾ ದೇಶಮುಖ ಪ್ರಾರ್ಥಿಸಿದರು. ಉಪಪ್ರಾಚಾರ್ಯ ಡಾ. ಪಿ. ವಿ. ಮಾಳಜಿ ಸ್ವಾಗತಿಸಿದರು. ಆಶಾ ಪಾಟೀಲ ಮತ್ತು ಕಿರಣ ಪಾಟೀಲ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ. ಜಿ. ವಿ. ಪಾಟೀಲ ವಂದಿಸಿದರು.
1980ರಿಂದ 1997ರ ವರೆಗೆ ಕಾಲೇಜಿಲಿನಲ್ಲಿ ಓದಿ ಈಗ ನಾನಾ ಕಡೆಗಳಲ್ಲಿ ಉನ್ನತ ಸ್ಥಾನದಲ್ಲಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡು ಕಾಲೇಜಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಅಲ್ಲದೇ, ಈ ವಿದ್ಯಾರ್ಥಿಗಳಿಗೆ ಕಲಿಸಿದ ಶಿಕ್ಷಕರು ಮತ್ತು ಆ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಪುನರ್ಮಿಲನ ಕಾರ್ಯಕ್ರಮದಲ್ಲಿ ಸುಮಾರು 500 ಜನ ಹಳೆಯ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.