ವಿಜಯಪುರ: ವ್ಯಾಪಾರವೆಂದರೆ ಸಾಕು ವಾರದ ಸಂತೆ, ಪ್ರತಿನಿತ್ಯ ವಹಿವಾಟು ನಡೆಸುವ ಮಾರುಕಟ್ಟೆಗಳು, ನಾನಾ ಬಡಾವಣೆಗಳಲ್ಲಿರುವ ಅಂಗಡಿಗಳಲ್ಲಿ ಜನತೆ ತಮಗಿಷ್ಟವಾದ ಸಾಮಾನುಗಳನ್ನು ಖರೀದಿಸುತ್ತಾರೆ. ಆದರೆ, ಇದೆಲ್ಲಕ್ಕಿಂತ ಭಿನ್ನವಾದ ವ್ಯಾಪಾರ ವಹಿವಾಟು ಬಸವನಾಡು ವಿಜಯಪುರ ನಗರದಲ್ಲಿ ನಡೆಯಿತು. ಅಲ್ಲಿ, ವ್ಯಾಪಾರ ಮಾಡಿದವರೆಲ್ಲರೂ ಮಕ್ಕಳು. ಖರೀದಿ ಮಾಡಿದವರು ಹಿರಿಯರು. ಅಷ್ಟೇ ಅಲ್ಲ, ಮಾರಾಟವಾದ ವಸ್ತುಗಳನ್ನು ತಯಾರಿಸಿದವೂರ ಮಕ್ಕಳೆ.
ಅಲ್ಲಿ ಎಲ್ಲಿ ನೋಡಿದರೂ ತರಹೇವಾರಿ ತಿಂಡಿ, ತಿನಿಸುಗಳೇ ಕಾಣಿಸುತ್ತಿದ್ದವು. ವ್ಯಾಪಾರವೂ ಭರ್ಜರಿಯಾಗಿಯೇ ನಡೆಯಿತು. ಮಕ್ಕಳು ಕೂಡ ತಮ್ಮ ಕಿಸೆ ತುಂಬಿಸಿಕೊಂಡು ಜಣಜಣ ಕಾಂಚಾಣ ಎಣಿಸಿದರು. ಮಕ್ಕಳು ತಾವೇ ತಯಾರಿಸಿದ ಖಾದ್ಯಗಳ ಮಾರಾಟಕ್ಕೆ ವೇದಿಕೆ ಒದಗಿಸಿದ್ದು ಫುಡ್ ಫೆಸ್ಟ್.
ಗುಮ್ಮಟ ನಗರಿ ವಿಜಯಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿಯ ಶ್ರೀ ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ಫುಡ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಶಿವಾಜಿರಾವ ಗಾಯಕವಾಡ ಅವರು ಚಾಲನೆ ನೀಡಿದರು. ಈ ಫುಡ್ ಫೆಸ್ಟ್ ನಲ್ಲಿ ವಿದ್ಯಾರ್ಥಿಗಳೇ ಬಾಣಸಿಗರು ಅಂದರೆ ಶೆಫ್ ಆಗಿದ್ದರು. ಅವರೆಲ್ಲರೂ ತಾವೇ ತಯಾರಿಸಿದ ನಾನಾ ಖಾದ್ಯಗಳನ್ನು ಮಾರಾಟ ಮಾಡಿ ಖುಷಿಪಟ್ಟರು. ಸಮೋಸಾ, ಬಜ್ಜಿ, ವೆಜ್ ಬಿರಿಯಾನಿ, ಮಸಾಲಾ ರೈಸ್, ಚುರುಮುರಿ, ಅವಲಕ್ಕಿ ಒಗ್ಗರಣೆ, ಕ್ಯಾರೆಟ್ ಹಲ್ವಾ, ಚಕ್ಕುಲಿ, ರವೆ ಉಂಡೆ ಸೇರಿದಂತೆ ಭೋಜನ ಪ್ರೀಯರಿಗೆ ಬಾಯಲ್ಲಿ ನೀರೂರಿಸುವ ತರಹೇವಾರಿ ಆಹಾರ ಪದಾರ್ಥಗಳು ಅಲ್ಲಿದ್ದವು. ಬಗೆ ಬಗೆಯ ತಿನಿಸುಗಳನ್ನು ಪಕ್ಕಾ ವೃತ್ತಿಪರ ವರ್ತಕರಂತೆ ಮಾರಾಟ ಮಾಡಿ ಅದರಿಂದ ಬಂದ ಲಾಭ ಕಂಡು ಹಿರಿಹಿರಿ ಹಿಗ್ಗಿದರು.
ಮಕ್ಕಳಲ್ಲಿ ವ್ಯಾಪಾರ, ವಹಿವಾಟು, ಅದರಿಂದ ಸಿಗುವ ಲಾಭಗಳ ಕುರಿತು ಅರಿವು ಮೂಡಿಸಲು ಶಾಲಾ ಆಡಳಿತ ಮಂಡಳಿಯು ಇಂಥ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿತ್ತು. ಮಕ್ಕಳು ತಮ್ಮ ಪೋಷಕರ ನೆರವಿನಿಂದ ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಶಾಲಾ ಆವರಣದಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಮಳಿಗೆಗಳಲ್ಲಿ ಈ ತಿನಿಸುಗಳನ್ನು ಮಾರಾಟ ಮಾಡಿದರು. ಅಲ್ಲದೇ, ಈ ಸಂರ್ಭದಲ್ಲಿ ಅಗತ್ಯವಾದ ಖರ್ಚು, ವೆಚ್ಚ ಹಾಗೂ ತಾವು ಗಳಿಸಿದ ಲಾಭಾಂಶ ಕುರಿತು ಶಿಕ್ಷಕರಿಗೆ ವರದಿ ನೀಡಿದರು.
ಮಕ್ಕಳ ವ್ಯಾಪಾರ ಮತ್ತು ವಹಿವಾಟಿಗಾಗಿ ಶಾಲೆಯ ಆವರಣದಲ್ಲಿ 80 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಪ್ರತಿಯೊಂದು ಮಳಿಗೆಗಳಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು ವ್ಯಾಪಾರ ನಡೆಸಿದರು. ಪಕ್ಕ ವ್ಯವಹಾರ ಮಾಡುವವರಂತೆ ಹೊಟೆಲ್ ಸ್ಟೈಲ್ ನಲ್ಲಿ ಹಾಗೂ ಬೀದಿ ಬದಿಯ ಚಾಟ್ಸ್ ಅಂಗಡಿಗಳಲ್ಲಿ ಯಾವ ರೀತಿ ಮಾರಾಟ ಮತ್ತು ಖರೀದಿ ನಡೆಯುತ್ತದೆಯೋ ಆ ರೀತಿ ವ್ಯವಹರ ನಡೆಯಿತು. ಪೋಷಕರೂ ಕೂಡ ಅದೇ ರೀತಿ ವ್ಯವಹಾರ ನಡೆಸಿದರು. ಸಂಜೆ 4 ಕ್ಕೆ ಆರಂಭಗೊಂಡ ಆಹಾರ ಮೇಳ ರಾತ್ರಿ 7ರ ವರೆಗೂ ನಡೆಯಿತು.
ಪೋಷಕರು, ಅವರ ಸಂಬಂಧಿಕರು, ಶಿಕ್ಷ ಕರು ಮಾತ್ರವಲ್ಲ ಶಾಲೆಯ ಸುತ್ತಮುತ್ತಲಿನ ನಾನಾ ಬಡಾವಣೆಗಳ ಸಾರ್ವಜನಿಕರೂ ಕೂಡ ತಮಗಿಷ್ಠವಾದ ತಿಂಡಿ ತಿನಿಸುಗಳನ್ನು ಖರೀದಿಸಿ ಬಾಯಿ ಚಪ್ಪರಿಸಿ ತಿಂದರು. ಮಕ್ಕಳು ತಯಾರಿಸಿದ ರುಚಿ ರುಚಿಯಾದ ಬಗೆ ಬಗೆಯ ತಿನಿಸುಗಳು ಜನಮನ ಸೂರೆಗೊಂಡವು. ಅಷ್ಟೇ ಅಲ್ಲ, ಮಕ್ಕಳಿಗೆ ಯಾವ ರೀತಿ ವ್ಯವಹಾರ ಮಾಡಬೇಕು ಎಂಬುದರ ಕುರಿತು ವ್ಯವಹಾರದ ಜ್ಞಾನವನ್ನೂ ಒದಗಿಸಿತು.
ಉತ್ತಮ ವ್ಯವಹಾರ ಹಾಗೂ ರುಚಿಕರ ಖಾದಗಯ ತಯಾರಿಸಿದ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ಬಹುಮಾನಗಳನ್ನು ಘೋಷಿಸಲಾಯಿತು. ಪಠ್ಯೇತರ ಚಟುವಟಿಕೆಯಾದ ಈ ಫುಡ್ ಫೆಸ್ಟಿವಲ್ ವಿದ್ಯಾರ್ಥಿಗಳಿಗೆ ವ್ಯವಹಾರದ ಜ್ಞಾನಾರ್ಜನಗೆ ಪೂರಕವಾಗಿತ್ತು.