ಬಸವನಾಡಿನ ನಡೆದಾಡಿದ ದೇವರು ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮ ಕೂಡಲ ಸಂಗಮ, ಗೋಕರ್ಣಕ್ಕೆ ರವಾನೆ

ವಿಜಯಪುರ: ನಡೆದಾಡಿವ ದೇವರು ಲಿಂ. ಸ್ವಾಮಿ ಸಿದ್ದೇಶ್ವರ ಅವರ ಅಂತ್ಯಕ್ರಿಯೆ ನಡೆದು ಏಳನೇ ದಿನದ ಹಿನ್ನೆಲೆಯಲ್ಲಿ ಶ್ರೀಗಳ ಆಶಯದಂತೆ ಅವರ ಚುತಾಭಸ್ಮವನ್ನು ನದಿ ಮತ್ತು ಸಾಗರದಲ್ಲಿ ವಿಸರ್ಜನೆ ಮಾಡುವ ಕಾರ್ಯ ಆರಂಭವಾಗಿದೆ.

ವಿಜಯಪುರ ನಗರ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ ಸ್ಥಳದಿಂದ ಸಂಗ್ರಹಿಸಲಾದ ಚಿತಾಭಸ್ಮವನ್ನು ಬೆಳಗ್ಗೆ 5 ಗಂಟೆಗೆ ಜ್ಞಾನ ಯೋಗಾಶ್ರಮದಿಂದ ವಿಶೇಷ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು.‌

12ನೇ ಶತಮಾನದ ಸಾಮಾಜಿಕ ಹೋರಾಟಗಾರ ಅಣ್ಣ ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮ ಹಾಗೂ ಸಂಜೆ ಉತ್ತರ ಕನ್ನಡ ಚಿಲ್ಲೆಯ ಗೋಕರ್ಣದಲ್ಲಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾನಾ ಮಠಾಧೀಶರು, ಆಶ್ರಮದ ಸಿಬ್ಬಂದಿ, ನೂರಾರು ಭಕ್ತರು ನಾನಾ ವಾಹನಗಳ ಮೂಲಕ ಚಿತಾ ಭಸ್ಮ ಇರಿಸಿರುವ ವಿಶೇಷ ವಾಹನ ಹಿಂದೆ ತೆರಳಿದವು.

ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮವನ್ನು ತೆಗೆದುಕೊಂಡು ವಾಹನದಲ್ಲಿ ತೆರಳಿದ ವಿಜಯಪುರ ಜ್ಞಾನಯೋಗಾಶ್ರಮದ ಸ್ವಾಮೀಜಿ

ಶ್ರೀಗಳು ವಾಸವಿದ್ದ ಆಶ್ರಮದ ಕಟ್ಟಡದ ಕೋಣೆಯಿಂದ ಶ್ರೀಗಳ ಚಿತಾಭಸ್ಮ ತಂದು ವಿಶೇಷ ವಾಹನದಲ್ಲಿ ಇರಿಸಲಾಯಿತು. ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನ್ನಮ್ಮನವರ ಚಿತಾಭಸ್ಮದ ಅಂತಿಮ ದರ್ಶನ ಪಡೆದರು. ಬೆಳಗ್ಗೆ 4 ಗಂಟೆಗೆ ವಿಶೇಷ ವಾಹನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ‌ ಅದರ ಜೊತೆ ಅವರು ವಾಸಿಸುತ್ತಿದ್ದ ಕೋಣೆಯ ಮುಖ್ಯದ್ವಾರದಿಂದ ವಿಶೇಷ ವಾಹನದವರೆಗೆ ಹೂವಿನ‌ ಹಾಸಿಗೆ ಹಾಸಲಾಗಿತ್ತು.

ಬೆಳಗ್ಗೆ 3 ಗಂಟೆಯಿಂದಲೇ ಭಕ್ತರು ಅಂತಿಮ ವಿದಿವಿಧಾನ ನೋಡಲು ಅಪಾರ ಸಂಖ್ಯೆಯಲ್ಲಿ ಬಂದಿದ್ದರು. ಶ್ರೀಗಳ ಇಚ್ಛೆಯಂತೆ ನಡೆಯುತ್ತಿರುವ ಚಿತಾಭಸ್ಮ ವಿಸರ್ಜನಾ ಕಾರ್ಯ ಇದಾಗಿದೆ.

ವಿಶೇಷ ಪೂಜೆ ಬಳಿಕ ಚಿತಾಭಸ್ಮ ರವಾನೆ

ಬೆಳಗ್ಗೆ ಜ್ಞಾಯೋಗಾಶ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಯ ಮೇಲೆ ಚಿತಾಭಸ್ಮವನ್ನು ಇಟ್ಟು ಪೂಜೆ ಸಲ್ಲಿಸಿದ ನಾನಾ ಸ್ವಾಮೀಜಿಗಳು ನಂತರ ಲಿಂ. ಸ್ವಾಮಿ ಸಿದ್ದೇಶ್ವರರ ಅಸ್ಥಿಯನ್ನು ವಿಶೇಷ ವಾಹನದಲ್ಲಿ ತೆಗೆದುಕೊಂಡು ಹೋದರು.  ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಶ್ರೀ ಬಸವಲಿಂಗ ಸ್ವಾಮೀಜಿ‌ ವಿಶೇಷ ವಾಹನದಲ್ಲಿ ಅಸ್ಥಿಗಳನ್ನು ತೆಗೆದುಕೊಂಡು ವಿಶೇಷ ವಾಹನದಲ್ಲಿ ತೆರಳಿದರು. ಈ ಚಾಹನ ಕೂಡಲ ಸಂಗಮ ಹಾಗೂ ಗೋಕರ್ಣಕ್ಕೆ ವಿಶೇಷ ವಾಹನ ಹೊರಟಿತು. ವಿಜಯಪುರ ನಗರದ ಪ್ರಮುಖ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರ ಮೂಲಕ ವಾಹನ ಹೊರಟಿದೆ.‌ ಬೆಳಗ್ಗೆ ಕೂಡಲ ಸಂಗಮಕ್ಕೆ ತೆರಳಿ ಚಿತಾಭಸ್ಮ ವಿಸರ್ಜನೆ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಗೋಕರ್ಣಕ್ಕೆ ತೆರಳಿ ಸಮುದ್ರದಲ್ಲಿ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ.‌ 40ಕ್ಕೂಅಧಿಕ ಮಠಾಧೀಶರು ಕೂಡಲ ಸಂಗಮಕ್ಕೆ ತೆರಳಿದರು.

ವಿಜಯಪುರ ನಗರಚ ಜ್ಞಾನಯೋಗಾಶ್ರಮದಿಂದ ಹೊರಟ ಈ ಚಿತಾಭಸ್ಮ ವಿಸರ್ಜನೆ ವಾಹನ ನಗರದ ಗಾಂಧಿಚೌಕ, ಬಾಗಲಕೋಟ ರಸ್ತೆಯಿಂದ ರಾಷ್ಟ್ರಿಯ ಹೆದ್ದಾರಿ ಮೂಲಕ ನಿಡಗುಂದಿ ಮಾರ್ಗವಾಗಿ ಕೂಡಲ ಸಂಗಮ ತಲುಪಲಿವೆ.‌ ಅಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸಂಗಮವಾಗುವ ಸ್ಥಳದಲ್ಲಿ ಅಸ್ಥಿ ವಿಸರ್ಜನೆ ನಡೆಯಲಿದೆ.

ಈ ಕುರಿತು ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಶ್ರೀಗಳ ಆಶಯದಂತೆ ಅವರ ಅಂತ್ಯಕ್ರಿಯೆ ‌ನಡೆದಿದೆ. ಈಗ ಅಸ್ಥಿ ವಿಸರ್ಜನೆ ನಡೆಯಲಿದೆ. ನೂರಾರು ವಾಹನಗಳಲ್ಲಿ ಭಕ್ತರು ಸಂಗಮ ಹಾಗೂ ಗೋಕರ್ಣಕ್ಕೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.

ಕಣ್ಣೀರು ಹಾಕಿದ ಭಕ್ತೆಯರು

ಶ್ರೀಗಳ ಅಸ್ತಿ ವಿಸರ್ಜನೆಯ ಅಂತಿಮ ವಿಧಿವಿಧಾನ ನೋಡಲು ಬಾನಾ ಕಡಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಶ್ರೀಗಳು ಮತ್ತೊಮ್ಮೆ ಇದೇ ಪುಣ್ಯಭೂಮಿಯಲ್ಲಿ ಜನಿಸಿ ನಮಗೆ ದರ್ಶನ ನೀಡಬೇಕೆಂದು ಭಕ್ತರು ಕಣ್ಣೀರು ಹಾಕಿದರು.

Leave a Reply

ಹೊಸ ಪೋಸ್ಟ್‌