ವಿಜಯಪುರ: ಬಸವನಾಡು ವಿಜಯಪುರ ನಗರದ ಜನ ಬೆಳಿಗ್ಗೆ ವಿಪರೀತ ಚಳಿಯಿಂದಾಗಿ ಮನೆ ಬಿಟ್ಟು ಹೊರ ಬರಲಾರದಂಥ ಪರಿಸ್ಥಿತಿ ಎದುರಾಗಿತ್ತು. ಉಷ್ಣತೆ ಮಾಪಕದಲ್ಲಿ ಬೆಳಿಗ್ಗೆ ಕನಿಷ್ಠ ತಾಪಮಾನ ಕೇವಲ 6.5 ಡಿ. ಸೆ. ದಾಖಲಾಗಿದೆ ಎಂದು ವಿಜಯಪುರ ಜಿಲ್ಲೆಯ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ವಾಕಿಂಗ್ ಗೆ ತೆರಳುವ ವಾಯು ವಿಹಾರಿಗಳು, ಶಾಲೆಗೆ ತೆರಳು ಮಕ್ಕಳು, ಅವರನ್ನು ಶಾಲೆಗೆ ಕಳುಹಿಸಲು ಬೇಗ ಏಳುವ ಪೋಷಕರು ಹಾಗೂ ಬೆಳಿಗ್ಗೆ ಕಸ ಸಂಗ್ರಹಿಸಲು ಬರುವ ಪೌರ ಕಾರ್ಮಿಕರು, ಪೇಪರ್, ಹಾಲು, ತರಕಾರಿ ಹಂಚುವ ಜನತೆ ಅಕ್ಷರಶಃ ಬೆಳಿಗ್ಗೆ ಮೈ ಕೊರೆಯುವ ಚಳಿಯಿಂದಾಗಿ ಹೈರಾಣಾಗಿದ್ದರು.
ಬೆಳಿಗ್ಗೆ ಮನೆಯಿಂದ ಹೊರಗೆ ಇರುವವರು ಮತ್ತು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿರುವ ಜನತೆ ಕಾಗದ ಸೇರಿದಂತೆ ತಮಗೆ ಕೈಗೆ ಸಿಕ್ಕ ಮತ್ತು ಸರಳವಾಗಿ ಬೆಂಕಿ ಹೊತ್ತಿಸಬಹುದಾದ ವಸ್ತುಗಳ್ನು ಸುಟ್ಟು ತಮ್ಮ ಕೈಗಳನ್ನು ಬೆಚ್ಚಗೆ ಮಾಡಿಕೊಳ್ಳುವ ದೃಶ್ಯಗಳು ಕಂಡು ಬಂದವು.
ಕಳೆದ 10 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ತಾಪಮಾನ ಸೋಮವಾರ ಬೆಳಿಗ್ಗೆ ದಾಖಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಇದೂ ಕೂಡ ತಂಪಿನ ವಾತಾವರಣ ಹೆಚ್ಚಾಗಳು ಪ್ರಮುಖ ಕಾರಣವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
2020ರಲ್ಲಿ ಮಳೆಗಾಲದಲ್ಲಿ 862.2 ಮೀ. ಮೀ. 2021ರಲ್ಲಿ 632.8 ಮೀ. ಮೀ. ಹಾಗೂ 2021ರಲ್ಲಿ 793.2 ಮೀ ಮೀ. ಮಳೆ ದಾಖಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಪ್ರತಿವರ್ಷ ಸರಾಸರಿ 594 ಮಿ. ಮೀ. ಮಳೆಯಾಗುವುದು ವಾಡಿಕೆಯಾಗಿದೆ. ಆದರೆ, ಈ ಮೂರು ವರ್ಷಗಳ ಅವಧಿಯಲ್ಲಿ 150 ರಿಂದ 200 ಮೀ. ಮೀ. ಹೆಚ್ಚುವರಿ ಮಳೆ ಸುರಿದ ಪರಿಣಾಮ ಕಳೆದ 10 ವರ್ಷಗಳಲ್ಲಿಯೇ ಈ ಬಾರಿ ಕೇವಲ 6.5 ಕನಿಷ್ಠ ತಾಪಮಾನ ದಾಖಲಾಗಿದ್ದು, ಜನತೆ ತೀವ್ರ ಚಳಿಯನ್ನು ಎದುರಿಸುವಂತಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.