ಲಿಂ. ಸ್ವಾಮಿ ಸಿದ್ಧೇಶ್ವರ ಶ್ರೀಗಳ ಗೌರವಾರ್ಥ ಈ ಬಾರಿ ಸರಳವಾಗಿ ಸಿದ್ಧರಾಮೇಶ್ವರ ಜಾತ್ರೆ ಆಚರಣೆ- ಯತ್ನಾಳ

ವಿಜಯಪುರ: ಬಸವ ನಾಡಿನ ನಡೆದಾಡಿದ ದೇವರ ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಅಗಲಿಕೆಯಿಂದಾಗಿ ಈ ಬಾರಿ ವಿಜಯಪುರ ಗ್ರಾಮದ ದೇವತೆ ಶ್ರೀ ಸಿದ್ಧರಾಮೇಶ್ವರ ಜಾತ್ರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶತಮಾನದ ಇತಿಹಾಸ ಹೊಂದಿರುವ ಸಂಕ್ರಮಣ ಜಾತ್ರೆಯನ್ನು ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ.  ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದಾಗಿ ಯಾವುದೇ ಸಂಭ್ರಮದ ಆಚರಣೆ ಬೇಡ ಎಂದು ನಿರ್ಧಾರ ಮಾಡಲಾಗಿದೆ.  ಈ ಸಲದ ಜಾತ್ರೆ ಕೇವಲ ಧಾರ್ಮಿಕ ಆಚರಣೆ ಮಾತ್ರ ಸೀಮಿತವಾಗಿದೆ.  ಅಲ್ಲದೇ, ಜಾತ್ರೆಯ ಅವಧಿಯಲ್ಲಿ ಪ್ರತಿದಿನ ನಡೆಯುತ್ತಿದ್ದ ಮನರಂಜನೆ ಕಾರ್ಯಕ್ರಮಗಳ ಬದಲಾಗಿ ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳ ನುಡಿನಮನ ಕಾರ್ಯಕ್ರಮ ನಡೆಯಲಿವೆ.

ಮದ್ದು ಸುಡುವುದಿಲ್ಲ, ದನಗಳ ಜಾತ್ರೆಯೂ ನಡೆಯುವುದಿಲ್ಲ

ಉತ್ತರ ಕರ್ನಾಟಕದಲ್ಲಿಯೇ ಅತೀ ವಿಜೃಂಭಣೆಯಿಂದ ನಡೆಯುವ ಈ ಸಂಕ್ರಮಣ ಜಾತ್ರೆಯಲ್ಲಿ ಮದ್ದು ಸುಡುವ ಕಾರ್ಯಕ್ರಮ ವಿಶೇಷವಾಗಿ ರೈತಾಪಿ ಹಾಗೂ ನಗರದ ಜನರ ಗಮನ ಸೆಳೆಯುತ್ತದೆ.  ಆದರೆ, ಈ ಬಾರಿ ಮದ್ದು ಸುಡುವ ಕಾರ್ಯಕ್ರಮವೂ ರದ್ದಾಗಿದೆ.  ಅಷ್ಟೇ ಅಲ್ಲ, ಜಾನುವಾರುಗಳ ಅತೀ ದೊಡ್ಡ ಜಾತ್ರೆಯನ್ನೂ ರದ್ದುಪಡಿಸಲಾಗಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ಯತ್ನಾಳ, ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಮಾತನಾಡಿದರು

ಶ್ರೀ ಸಿದ್ದೇಶ್ರವ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಮಾತನಾಡಿ, ಜನೆವರಿ 12 ರಿಂದ ಜ. 17ರ ವರೆಗೆ ಸಂಕ್ರಮಣ ಜಾತ್ರೆ ನಡೆಯಲಿದೆ.  ದೇವಸ್ಥಾನ ಆವರಣದಲ್ಲಿರುವ ಗೋವುಗಳ ಪೂಜೆ ನೇರವೇರಿಸುವ ಮೂಲಕ‌ಜಾತ್ರೆ ಆರಂಭವಾಗಲಿದೆ.  ನಂತರ ನಂದಿ ಧ್ವಜಗಳಿಗೆ ಸಂಪ್ರದಾಯದಂತೆ ಪೂಜೆ ನಡೆಯಲಿದೆ.  ಜ. 13 ರಂದು ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳ ಕುರಿತು ನುಡಿನಮನ, ಭಜನಾ ಕಾರ್ಯಕ್ರಮಗಳು ನಡೆಯಲಿವೆ.  ನಂತರ ನಂದಿ ಧ್ವಜಗಳ ಉತ್ಸವದ ಜತೆ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನೇರವೇರಲಿದೆ ಎಂದು ತಿಳಿಸಿದರು.

ಜ. 14 ರಂದು ಸಂಕ್ರಮಣ ಭೋಗಿ, ವಚನ ಸಂಗೀತ, ಗೊಂದಳಿ ಹಾಡುಗಳ ಕಾರ್ಯಕ್ರಮ ನಡೆಯಲಿವೆ.  ಜ. 15 ರಂದು ಸಂಕ್ರಮಣ ಆಚರಣೆ ನಡೆಯಲಿದ್ದು, ಅಂದು ಸಾಂಪ್ರದಾಯಕ ನಂದಿ ಧ್ವಜಗಳ ಮೆರವಣಿಗೆ, ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ.  ಜ. 16 ರಂದು ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದಿಂದ ನಂದಿ ಮೆರವಣಿಗೆ ನಡೆಯಲಿದೆ.  ಜ. 17 ರಂದು ಭಾರ ಎತ್ರುವ ಸ್ಪರ್ಧೆ, ಕುಸ್ತಿ ಸ್ಪರ್ಧೆಗಳು ನಡೆಯಲಿದ್ದು, ಅವುಗಳನ್ನೂ ಕೂಡ ಸಾಂಕೇತಿಕವಾಗಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಂಗಡಿಗಳಿಗೂ ಅವಕಾಶವಿಲ್ಲ

ವಿಜಯಪುರದ ಶ್ರೀ ಸಿದ್ಧರಾಮೇಶ್ವರ ಜಾತ್ರೆ ಎಂದರೆ ಸಾಕು ದೇವಸ್ಥಾನಕ್ಕೆ ರಸ್ತೆಯ ಎರಡೂ ಬದಿಗಳಲ್ಲ ಸಾಲು ಸಾಲು ಅಂಗಡಿಗಳನ್ನು ಹಾಕಲಾಗುತ್ತದೆ.  ಆದರೆ, ಈ ಬಾರಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಗುತ್ತಿರುವುದರಿಂದ ವ್ಯಾಪಾರ ವಹಿವಾಟಿಗೂ ನಿರ್ಬಂಧ ವಿಧಿಸಲಾಗಿದೆ.  ಪ್ರತಿ ವರ್ಷದಂತೆ ಜಾತ್ರೆಯಲ್ಲಿ ನಾನಾ ವ್ಯಾಪಾರ, ಮನರಂಜನೆ ಕಾರ್ಯಕ್ರಮ ನಡೆಯುತ್ತಿದ್ದವು.  ಈ ಬಾರಿ ವ್ಯಾಪಾರ ವಹಿವಾಟು, ದನಗಳ ಜಾತ್ರೆ ರದ್ದು ಪಡಿಸಲಾಗಿದೆ.  ದೇವಸ್ಥಾನದ ಸುತ್ತ ಅಂಗಡಿಗಳನ್ನು ಹಾಕಲು ಸಹ ನಿರ್ಬಂಧ ಹಾಕಲಾಗಿದ್ದು, ಈ ಬಾರಿ ಸರಳವಾಗಿ ಜಾತ್ರೆ ನಡೆಯಲಿದೆ ಎಂದು ಬಸಯ್ಯ ಹಿರೇಮಠ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆ ಮತ್ತು ಜಾತ್ರಾ ಕಮಿಟಿ  ಪದಾಧಿಕಾರಿಗಳಾದ ಸಿದ್ರಾಮಪ್ಪ ಉಪ್ಪಿನ, ಸಂಗು ಸಜ್ಜನ, ನಾಡಗೌಡ, ಎಂ. ಎಸ್. ಕರಡಿ, ರಾಜು ಗಣಿ, ಮಹಾದೇವ ಹತ್ತಿಕಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌