ವಿಜಯಪುರ: ಮಹಿಳೆಯರು ರೋಗಲಕ್ಷಣ ಕಂಡು ಬಂದ ತಕ್ಷಣ ಯಾವುದೇ ಸಂಕೋಟವಿಲ್ಲದೇ ವೈದ್ಯರನ್ನು ಸಂಪರ್ಕಿಸಿದರೆ ಮಾರಕ ರೋಗಗಳಿಗೆ ಆರಂಭದಲ್ಲಿಯೇ ಚಿಕಿತ್ಸೆ ನೀಡಬಹುದು ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಅರಕೇರಿಯಲ್ಲಿ ನಡೆದ ಬಿ. ಎಲ್. ಡಿ. ಇ. ಸಂಸ್ಥೆಯ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಮಹಿಳೆಯರು ಮತ್ತು ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಮುಟ್ಟು ದೋಷಗಳು ಮತ್ತು ಬಿಳೆ ಸೆರಗು ಸೇರಿದಂತೆ ನಾನಾ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಸಂಕೋಚದಿಂದ ಮುಚ್ಚಿಡುತ್ತಾರೆ. ಕಾಯಿಲೆಗಳು ಉಲ್ಬಣವಾದಾಗ ಆಸ್ಪತ್ರೆಗಳಿಗೆ ದೌಡಾಯಿಸುತ್ತಾರೆ. ಇದರಿಂದಾಗಿ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗುತ್ತದೆ. ಕೆಲವು ಬಾರಿ ಪ್ರಾಣಕ್ಕೂ ಕುತ್ತು ಎದುರಾಗುತ್ತದೆ. ಇದನ್ನು ಅರಿತ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಆಶಾ ಎಂ. ಪಾಟೀಲ ಅವರ ಆಶಯದಂತೆ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜಿಲ್ಲೆಯ ನಾನಾ ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರತಿಯೊಂದು ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಕೈಗೊಳ್ಳಲು ಇಡೀ ಒಂದು ಬಸ್ಸನ್ನು ಸಂಚಾರಿ ಕ್ಲಿನಿಕ್ ಆಗಿ ಮಾರ್ಪಡಿಸಿ ಅದರಲ್ಲಿ ಆರೋಗ್ಯ ತಪಾಸಣೆಗೆ ಬೇಕಾಗಿರುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನುರಿತ ವೈದ್ಯರ ತಂಡ ಈ ಶಿಬಿರಗಳಲ್ಲಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದೆ. ಈ ತಪಾಸಣೆಯ ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಅಂಥ ರೋಗಿಗಳಿಗೆ ವೈದ್ಯಕೀಯ ವ್ಯವಸ್ಥೆ ಮಾಡಿ ಹೆಲ್ತ್ ಕಾರ್ಡ್ ನೀಡಲಾಗುವುದು. ಆ ಕಾರ್ಡನ್ನು ಬಿ ಎಲ್ ಡಿ ಇ ಆಸ್ಪತ್ರೆಗೆ ತೆಗೆದುಕೊಂಡು ಬಂದರೆ ಅವರಿಗೆ ಎಲ್ಲ ವೈದ್ಯಕೀಯ ನೆರವು ನೀಡಲಾಗುವುದು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಡಾ. ಆರ್. ಎಸ್. ಮುಧೋಳ ಹೇಳಿದರು.
ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಎಂ. ಎನ್. ಚೋರಗಸ್ತಿ ಮಾತನಾಡಿ, ಎಂ. ಬಿ. ಪಾಟೀಲ ದಂಪತಿ ಕೇವಲ ತಾವಷ್ಟೇ ಆರೋಗ್ಯವಾಗಿದ್ದರೆ ಸಾಲದು. ಇಡೀ ಮತಕ್ಷೇತ್ರದ ಜನ ಕೂಡ ಆರೋಗ್ಯವಂತರರಾಗಿ ಬದುಕಬೇಕು ಎಂಬ ಸದುದ್ದೇಶ ಹೊಂದಿದ್ದು, ಈ ಶಿಬಿರಗಳನ್ನು ಗ್ರಾಮೀಣ ಭಾಗದ ಮಹಿಳೆಯರು ಮತ್ತು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು. ಈ ಕಾರ್ಯದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ವೈದ್ಯರಾದ ಡಾ. ಲಕ್ಷ್ಮಿ ಬಡದಾಳ, ಡಾ. ತ್ರಿಮಲ ಕುಲಕರ್ಣಿ, ಡಾ. ಅವಿನಾಶ ಜುಗತಿ, ಗ್ರಾ. ಪಂ. ಅಧ್ಯಕ್ಷೆ ಸೋನುಬಾಯಿ ರಾಠೋಡ, ಜಿ. ಪಂ. ಮಾಜಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಗೀತಾಂಜಲಿ ಪಾಟೀಲ, ಸುರೇಶ ಭಂಡಾರಿ, ಹುಸೇನ ಪಟೇಲ, ಅರಕೇರಿ ಗ್ರಾ. ಪಂ. ಎಲ್ಲ ಸದಸ್ಯರು, ಗ್ರಾಮದ ಮುಖಂಡರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಒಟ್ಟು 460 ಮಹಿಳೆಯರು ಮತ್ತು ಮಕ್ಕಳ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.