ವಿಜಯಪುರ: ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗದ ನಿರ್ದೇಶನದಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಿಂದಗಿ ಮತ್ತು ಆಲಮೇಲ ತಾಲೂಕಿನ ನಾನಾ ಮತಗಟ್ಟೆಗಳಿಗೆ ಭೇಟಿ ನೀಡಿ, ಮೂಲಭೂತ ಸೌಕರ್ಯ ಪರಿಶೀಲನೆ ನಡೆಸಿದರು.
ಆಲಮೇಲ ತಾಲೂಕಿನ ಮೋರಟಗಿಯ ಎಂಪಿಎಸ್ ಶಾಲೆಯ ಮತಗಟ್ಟೆ ಸಂಖ್ಯೆ 112 ರಿಂದ 115ರ, ಮೋರಟಗಿಯ ಮತಗಟ್ಟೆ ಸಂಖ್ಯೆ 116 ಹಾಗೂ 117 ಬರುವ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು. ಅದೇ ತಾಲೂಕಿನ ಗಬಸಾವಳಗಿ ಗ್ರಾಮದ ಮತಗಟ್ಟೆ ಸಂಖ್ಯೆ 119 ರಿಂದ 121, ಸಿಂದಗಿ ತಾಲೂಕಿನ ಯರಗಲ್ ಕೆಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 189 ಹಾಗೂ ಯರಗಲ್ ಬಿಕೆ ಗ್ರಾಮದ ಮತಗಟ್ಟೆ ಸಂಖ್ಯೆ 186 ರಿಂದ 197ರವರೆಗೆ ಬರುವ ಹಿರಿಯ ಪ್ರಾಥಮಿಕ ಶಾಲೆಗೆ, ಚಿಕ್ಕಸಿಂದಗಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 208 ರಿಂದ 210ರ, ಕನ್ನೋಳ್ಳಿಯ 216 ರಿಂದ 218ರವರೆಗಿನ ಬರುವ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿನ ಅಗತ್ಯ ಮೂಲಭೂತ ಸೌಕರ್ಯದ ಕುರಿತು ಪರಿಶೀಲನೆ ನಡೆಸಿ, ದುರಸ್ತಿಪಡಿಸುವುದು ಸೇರಿದಂತೆ ನಾನಾ ವಿಷಯಗಳ ಕುರಿತು ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ನಾನಾ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಮಧ್ಯಾಹ್ನದ ಬಿಸಿಯೂಟದ ಕುರಿತು ಮಾಹಿತಿ ಪಡೆದುಕೊಂಡು ಸಮರ್ಪಕವಾಗಿ ಹಾಗೂ ಶುಚಿ ಹಾಗೂ ರುಚಿಯಾದ ಆಹಾರ ಒದಗಿಸಲು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಂಬಂಧಿಸಿದವರಿಗೆ ಸೂಚಿಸಿದರು. ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಕುರಿತು ಜಿಲ್ಲಾಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಿದರು.
ಚಿಕ್ಕಸಿಂದಗಿ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿರುವ ವಿಕಲಚೇತನ ವಿದ್ಯಾರ್ಥಿನಿಗೆ ಅಗತ್ಯವಿರುವ ವ್ಹೀಲ ಚೇರ (ಗಾಲಿ ಕುರ್ಚಿ) ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಿಂದಗಿಯ ತಹಸೀಲ್ದಾರ ನಿಂಗಣ್ಣ ಬಿರಾದಾರ, ಕಂದಾಯ ನಿರೀಕ್ಷಕ ಐ. ಎ. ಮಕಾಂದಾರ, ಎಂ. ಎ. ಅತ್ತಾರ, ಚುನಾವಣೆ ಶಿರಸ್ತೇದಾರ ಸಿ. ಬಿ. ಬಾಬಾನಗರ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.