ವಿಜಯಪುರ: ಬಿಜೆಪಿ ಬಿಜಿನೆಸ್ ಜನತಾ ಪಾರ್ಟಿಯಾಗಿದೆ. ಜನರಿಗೆ ಏರೋಪ್ಲೇನ್ ಹತ್ತಿಸುತ್ತಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಅಭಿವೃದ್ಧಿಯನ್ನು ಸಂಪೂರ್ಣಾಗಿ ಕಡೆಗಣಿಸಿದೆ. ರಸ್ತೆ, ಚರಂಡಿ ಸೇರಿದಂತೆ ಎಲ್ಲ ಕಾಮಗಾರಿಗಳಲ್ಲಿ ಕಮಿಷನ್ ಹೊಡೆಯುತ್ತಿದೆ. ಬಿಜೆಪಿಯವರು ದೇಶ ಆಳಲು ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಕಟೀಲ ಜಿಹಾದ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ನಿಜವಾದ ದೇವರು. ಅವರು ಪಾರ್ಲಿಮೆಂಟಿನಲ್ಲಿ ಹೆಚ್ಚಿ ಇಡಲು ಯೋಗ್ಯರಲ್ಲ. ನಾನು ಸಂವಿಧಾನಕ್ಕೆ ನಾನು ಮೊದಲು ಗೌರವ ಕೊಡುತ್ತೇನೆ. ಹಿಂದುತ್ವ ವಿಚಾರದಲ್ಲಿ ಮಾತ್ರ ಮಾತನಾಡುವ ಕಟೀಲ ಅವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು.
ಮುಸ್ಲಿಮಂರನ್ನು ದೂರ ಇಡುವ ಕೆಲಸ ಆಗುತ್ತಿದೆ. ಬಿಜೆಪಿಯ ಹಿಂದುತ್ವ ಅಜೆಂಡಾ ನೆಲಕಚ್ಚಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ನಾನು ಸಿನೇಮಾ ತೆಗೆಯುತ್ತಿಲ್ಲ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಹಾಲಿ ಶಾಸಕ ಕುಮಾರ ಬಂಗಾರಪ್ಪ ಎದುರು ತಮ್ಮ ಸ್ಪರ್ಧೆಯನ್ನು ಮತ್ತೊಮ್ಮೆ ಸಹೋದರರ ಸವಾಲು ಎನ್ನಬಹುದೇ ಎಂಬ ಪ್ರಶ್ನೆಗೆ ಗರಂ ಆದ ಅವರು, ಸಹೋದರರ ಸವಾಲು ಎನ್ನಲು ನಾನು ಸಿನೇಮಾ ತೆಗೆಯುತ್ತಿಲ್ಲ. ನಮ್ಮ ಕುಟುಂಬ ವಿಚಾರದಲ್ಲಿ ನಮ್ಮ ತಂದೆ ಎಸ್. ಬಂಗಾರಪ್ಪ ಈಗಾಗಲೇ ನಮ್ಮ ಮನೆ ಪಂಚಾಯಿತಿ ಮಾಡಿ ಬಿಟ್ಟಿದ್ದಾರೆ. ಪದೇ ಪದೇ ಅದೇ ಹೇಳುವುದು ಸರಿಯಲ್ಲ. ನಾನು ಕಾಂಗ್ರೆಸ್ ಪಕ್ಷದಿಂದ ಅರ್ಜಿ ಹಾಕಿದ್ದೇನೆ. ಟಿಕೇಟ್ ಸಿಗುವ ವಿಶ್ವಾಸವಿದೆ. ಅದೇ ರೀತಿ ಅವರು ಅವರ ಪಕ್ಷದ ಪರ ಇರುತ್ತಾರೆ. ಅವರವರ ವಿಷಯ ಬಿಟ್ಟು ಬಿಡಿ ಎಂದು ಹೇಳಿದರು.
ಬಿಜೆಪಿಯಿಂದ ದ್ವೇಷ ರಾಜಕಾರಣ ನಡೆಯುತ್ತಿದೆ
ಹಿಂದೂ ಕಾರ್ಯಕರ್ತ ಪರೇಶ ಮೇಸ್ತ್ರಾ ಹತ್ಯೆಯನ್ನು ಬಿಜೆಪಿ 2018ರ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಅದರ ಪರಿಣಾಮ ಮಂಗಳೂರು, ಶಿವಮೊಗ್ಗ, ಉಡುಪಿ, ಕಾರವಾರದಲ್ಲಿ ಕೋಮು ಗಲಭೆಗಳು ನಡೆದವು. ಹಿಂದು- ಮುಸ್ಲಿಂ ನಡುವೆ ಧ್ವೇಷ ಹುಟ್ಟುವಂತಾಯಿತು. ಅದನ್ನು ಯಾರು ಮಾಡಿದರು? ಈಗ ಮತ್ತೆ ಇಂಥ ರಾಜಕಾರಣ ಮಾಡುತ್ತಿದ್ದಾರೆ. ಈ ಸಲ ಏನು ಮಾಡಬೇಕೆಂಬುದು ಜನರಿಗೆ ಗೊತ್ತಿದೆ. ಭಾವನಾತ್ಮಕ ವಿಷಯದಿಂದ ಹೊಟ್ಟೆ ತುಂಬುವದಿಲ್ಲ ಎಂದು ಮತದಾರರಿಗೆ ಗೊತ್ತಿದೆ. ಅವರೇನೂ ಅಷ್ಟು ಮೂರ್ಖರಲ್ಲ. ಆದರೆ ಬಿಜೆಪಿಯವರು ಏನೇ ಬಾಲಬಿಚ್ಚಿದರೂ ಇನ್ನೂ ಮುಂದೆ ಯಶಸ್ವಿಯಾಗುವದಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾದರೆ ಕಾಂಗ್ರೆಸ್ ಸಹ ಇದಕ್ಕೆ ತಕ್ಕ ಕೌಂಟರ್ ಕೊಡಲಿದೆ. ಅಂದು ಹಿಂದು ಕಾರ್ಯಕರ್ತ ಪರೇಶ್ ಮಿಸ್ತ್ರಾ ಹತ್ಯೆಯನ್ನು ಸಿಬಿಐಗೆ ವಹಿಸಿದ್ದಾಗ, ಅದನ್ನು ಸಿದ್ದರಾಮಯ್ಯ ತಿದ್ದಿದ್ದಾರೆ ಎಂದು ಹೇಳಿದರು. ಆದರೆ, ಅಂದು ಬಿಜೆಪಿ ಅಧಿಕಾರದಲ್ಲಿತ್ತು. ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್ ನೀಡಲಾಯಿತು. ದೊಡ್ಡ ಸಂಸ್ಥೆಯಾಗಿರುವ ಸಿಬಿಐ ನೀಡಿದ ವರದಿಯನ್ನೇ ಬಿಜೆಪಿ ಅನುಮಾನದಿಂದ ನೋಡಿತು. ಈ ಸರಕಾರ ಬಂದಿದ್ದು ಜನರ ಬಹುಮತದಿಂದ ಅಲ್ಲ. ಈಗ ಪ್ರತಿದಿನ 40 ಪರ್ಸೆಂಟ್, ಶೇ. 30 ಪರ್ಸೆಂಟ್, ಸ್ಯಾಂಟ್ರೋ ರವಿ ಪ್ರಕರಣ ಬೆಳಕಿಗೆ ಬರಲು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದು ಬಿಜೆಪಿ ಸರಕಾರ ಜನರ ವಿಶ್ವಾಸದಿಂದ ಬಂದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಜಿಲ್ಲಾವಾರು ಪ್ರಣಾಳಿಕೆ ಬಿಡುಗಡೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯಕ್ಕೆ ಒಂದು ಪ್ರಣಾಳಿಕೆ ತಯಾರಿಸಲಿದೆ. ನಂತರ ಜಿಲ್ಲಾವಾರು ಪ್ರತ್ಯೇಕ ಪ್ರಣಾಳಿಕೆ ತಯಾರಿಸಲಿದೆ. ಒಂದು ಜಿಲ್ಲೆಯಲ್ಲಿರುವ ಸಮಸ್ಯೆ ಬೇರೆ ಜಿಲ್ಲೆಯಲ್ಲಿ ಇರಲ್ಲ. ಹೀಗಾಗಿ ಜಿಲ್ಲಾವಾರು ಪ್ರತ್ಯೇಕ ಪ್ರಣಾಳಿಕೆಗೆಳಿಗೆ ಆದ್ಯತೆ ನೀಡಲಾಗುವುದು. ಆಯಾ ಸ್ಥಳೀಯ ಮುಖಂಡರ ನೇತ್ವತೃದಲ್ಲಿ ಚಿಂತನ ಮಂಥನ ನಡೆಸಿ ಪ್ರನಾಳಿಕೆ ತಯಾರಿಸಲಾಗುವುದು. ಬಿಜೆಪಿಯವರ ತರ 300- 400 ಭರವಸೆಯ ಪ್ರಣಾಳಿಕೆ ತಯಾರಿಸಿ ಅದರಲ್ಲಿ 10 ಆಶ್ವಾಸನೆಗಳನ್ನೂ ಈಡೇರಿಸಿಲ್ಲ ಎಂದು ಅವರು ಮಧು ಬಂಗಾರಪ್ಪ ಆರೋಪಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರಿಫ್ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.