ಮಾತೃಹೃದಯಿ, ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ವರದಾನವಾಗಿದ್ದಾರೆ ಬಸವನಾಡಿನ ಈ ಶಿಕ್ಷಕಿ- ಇವರ ಕಾಯಕ ಇತರರಿಗೆ ಸ್ಪೂರ್ತಿ

ಮಹೇಶ ವಿ. ಶಟಗಾರ

ವಿಜಯಪುರ: ಆರ್ಥಿಕ ಸಮಸ್ಯೆ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಮೆಟ್ರಿಕ್ ಕೂಡ ಮಾಡಲಾಗದೇ ಶಾಲೆಗಳಿಂದ ದೂರವಾಗುತ್ತಿದ್ದ ಮಕ್ಕಳಿಗೆ ವಿದ್ಯಾಭ್ಯಾಸದ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಬಸವನಾಡಿನ ಶಿಕ್ಷಕಿಯೊಬ್ಬರು ಗಮನ ಸೆಳೆದಿದ್ದಾರೆ.

ಈ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಬಹುತೇಕರು ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು.  ಅದರಲ್ಲಿಯೂ ಈ ಶಾಲೆಯಲ್ಲಿ ಎಂಟನೇ ತರಗತಿಯವರೆಗೆ ಓದುವ ಬಹುತೇಕ ಹೆಣ್ಣು ಮಕ್ಕಳು ನಂತರ 9 ಮತ್ತು 10ನೇ ತರಗತಿಗೆ ಸೇರದೆ ಡ್ರಾಪ್ ಔಡ್ ಆಗುತ್ತಿದ್ದರು.  ಶಾಲೆ ಬಿಟ್ಟು ಮನೆಯಲ್ಲಿಯೇ ಇದ್ದು, ಪೋಷಕರೊಂದಿಗೆ ಹೊಟ್ಟಿಪಾಡಿಗಾಗಿ ಕಾಯಕ ಮಾಡುತ್ತ ಮತ್ತು ನಂತರ ಗ್ರಹಸ್ಥಾಶ್ರಮಕ್ಕೆ ಕಾಲಿಡುವ ಮೂಲಕ ಉತ್ತಮ ಶಿಕ್ಷಣದಿಂದ ದೂರವಾಗುತ್ತಿದ್ದರು.

ತಾವು ಕಲಿಸುವ 6, 7 ಮತ್ತು 8ನೇ ತರಗತಿಯವರೆಗೆ ಚೆನ್ನಾಗಿ ಓದುವ ಮಕ್ಕಳು ನಂತರ ಶಾಲಾಭ್ಯಾಸ ಮುಂದುವರೆಸದೇ ಶಿಕ್ಷಣದಿಂದ ದೂರ ಉಳಿಯುವ ವಿಚಾರ ತಿಳಿದ ಈ ಶಿಕ್ಷಕಿ ಇದಕ್ಕೆ ಮೂಲ ಕಾರಣವನ್ನು ಹುಡುಕಿದರು.  ಇದಕ್ಕೆ ಪೂರಕವಾಗಿ ವಿದ್ಯಾಭ್ಯಾಸ ತೊರೆಯುವ ಮಕ್ಕಳ ಪೋಷಕರನ್ನು ಅದರಲ್ಲೂ ಬಾಲಕಿಯರ ತಾಯಂದಿರನ್ನು ಭೇಟಿ ಮಾಡಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಹೇಳಿ ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳಿಗೆ ಸ್ವಾವಲಂಬಿಯಾಗಲು ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿದ್ದರು.

ಶಾಲೆಯಲ್ಲಿ ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು ಪಾಠ ಮಾಡುತ್ತಿರುವ ಶಿಕ್ಷಕಿ

ಇದೆಲ್ಲದರ ಪರಿಣಾಮ ಈಗ ಹೊರ ಬರುತ್ತಿದೆ.  ಈ ಎಂಟನೇ ತರಗತಿ ಮುಗಿದ ಬಳಿಕವೂ ವಿಶೇಷವಾಗಿ ಹೆಣ್ಣು ಮಕ್ಕಳು 9 ಮತ್ತು 10ನೇ ತರಗತಿ, ಪಿಯುಸಿ ಹಾಗೂ ಡಿಪ್ಲೋಮಾ ಸೇರಿದಂತೆ ವೃತ್ತಿ ಶಿಕ್ಷಣ ಹಾಗೂ ಡಿಗ್ರಿವರೆಗೂ ಓದಲು ಇವರ ಪ್ರಯತ್ನ ಈಗ ನೆರವಾಗಿದೆ.

ಈ ಶಿಕ್ಷಕಿ ಶಾಲೆಯ ಮಕ್ಕಳೊಂದಿಗೆ ಕುಟುಂಬ ಸದಸ್ಯರಂತೆ ಬೆರೆತು ಹೊಸ ಹೊಸ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಮೂಲಕವೂ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ.  ವಿದ್ಯಾರ್ಥಿಗಳೊಂದಿಗೆ ಸ್ನೇಹದ ಭಾಷೆಯಲ್ಲಿಯೇ ಕಲಿಸುವ ಈ ಶಿಕ್ಷಕಿ ಪ್ರತಿಯೊಬ್ಬ ಮಗುವಿಗೆ ಶಾಲೆ ಎಂದರೆ ಕೇವಲ ಗೋಡೆಗಳ ಮೇಲೆ ಬರೆದು ಓದಿಸುವುದಲ್ಲ, ಬದಲಾಗಿ ಮನೆಯಲ್ಲಿರುವಂತೆಯೇ ಸ್ವತಂತ್ರವಾಗಿ ಹಕ್ಕಿಯಂತೆ ನಾಲ್ಕು ಗೋಡೆಗಳ ಮಧ್ಯೆಯೇ ಪರಿಸರದಲ್ಲಿ ಅಧ್ಯಯನ ಮಾಡುವಂತೆ ವಾತಾವರಣ ಮೂಡಿಸಿದ್ದಾರೆ.  ಶಾಲೆಯಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಗುವ ಸಮಯ ಪಾಲನೆ, ಶಿಸ್ತು, ಗಂಭೀರತೆಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ.

ಕೀಟಲೆ ಮಾಡುವ ಮಕ್ಕಳಿಗೆ ನಯವಾಗಿಯೇ ಬುದ್ಧಿವಾದ ಹೇಳುವ ಇವರಲ್ಲಿರುವ ಶಿಸ್ತು ಈಗ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದೂ, ಈ ಶಿಕ್ಷಕಿಯನ್ನು ಕಂಡೆ ಸಾಕು ಗಲಾಟೆ ಮಾಡುವ ಮಕ್ಕಳು ಏಕಾಏಕಿ ಸೈಲೆಂಟ್ ಆಗಿ ಬಿಡುತ್ತಾರೆ.  ಅವರು ಮಾಡುವ ಪಾಠಗಳನ್ನು ಏಕಚಿತ್ತದಿಂದ ಆಲಿಸುತ್ತಾರೆ.  ಇವರು ಕಲಿಸುವ ವಿಧಾನ ಮಕ್ಕಳಿಗೆ ಸೂಜಿಗಲ್ಲಿನಂತೆ ಸೆಳೆಯುತ್ತದೆ.  ವಿದ್ಯಾರ್ಥಿಗಳನ್ನು ಕರೆಯಿಸಿ ಕಪ್ಪು ಹಲಗೆಯ ಮೇಲೆ ಬರೆಯಿಸಿ ತಪ್ಪು ಬರೆದವರನ್ನು ತಿದ್ದಿಸಿ, ಶುದ್ಧ ಮತ್ತು ಸರಿಯಾಗಿ ಬರೆಯುವವರಿಗೆ ಶಹಬ್ಬಾಷ್ ಎಂದು ಪ್ರೋತ್ಸಾಹಿಸುವ ಇವರ ಗುಣ ಮೆಚ್ಚುವಂಥದ್ದು.

ನೋಡಲು ಗಂಭೀರವಾಗಿದ್ದರೂ, ವಿದ್ಯಾರ್ಥಿಗಳ ಪಾಲಿಗೆ ಇವರು ಮಾತೃಹೃದಯಿ.  ಕಣ್ಣಿನಿಂದಲೇ ವಿದ್ಯಾರ್ಥಿಗಳನ್ನು ಹಾವಭಾವಗಳನ್ನು ತಿಳಿದು ಇಡೀ ಕೋಣೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ನಿಯಂತ್ರಿಸುವ ಚಾಕಚಕ್ಯತೆ ಹೊಂದಿದ್ದಾರೆ.  ಮಾದರಿಗಳು ಮತ್ತು ಸರಳ ವಿಧಾನಗಳ ಮೂಲಕ ಇವರು ನೀಡುತ್ತಿರುವ ಶಿಕ್ಷಣ ವಿದ್ಯಾರ್ಥಿಗಳ ಪೋಷಕರ ಪ್ರೀತಿಗೂ ಪಾತ್ರವಾಗಿದೆ.

 

ಇವರೇ ಬಸವನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸುಗಂಧದ ರೀತಿಯಲ್ಲಿ ಪಸರಿಸುತ್ತಿರುವ ಎ. ಎಸ್. ಅತ್ತಾರ ಮೇಡಂ.  ಆಲಮಟ್ಟಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಇವರು, ಉರ್ದುವಿನಲ್ಲಿ ಅತ್ತಾರ ಎಂದರೆ ಸುವಾಸನೆಯಂತೆ ವಿದ್ಯಾಬೋಧನೆ ಮಾಡುತ್ತಿದ್ದಾರೆ.  ಹೆಸರಿಗೆ ತಕ್ಕಂತೆ ಮಕ್ಕಳಿಗೆ ವಿದ್ಯೆಯ ಘಮಘಮ ಸುವಾಸನೆ ಜ್ಞಾನವನ್ನು ನೀಡುತ್ತಿದ್ದಾರೆ.

ಮಾದರಿ ಶಿಕ್ಷಕಿ ಎ. ಎಸ್. ಅತ್ತಾರ

ಶಾಲೆಯಲ್ಲಿ ಅಮೂಲಾಗ್ರ ಬದಲಾವಣೆ ತಂದ ಶಿಕ್ಷಕಿ

ಅಷ್ಟೇ ಅಲ್ಲ, ಈ ಶಾಲೆಯಲ್ಲಿ ಓದುವ ಬಹುತೇಕ ಮಕ್ಕಳು ಬಡವರಾಗಿರುವ ಹಿನ್ನೆಲೆಯಲ್ಲಿ, ಇಲ್ಲಿನ ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳಿಗೆ ವಿದ್ಯಾರ್ಜನೆಗೆ ಅಗತ್ಯವಾಗಿರುವ ಪೆನ್ಸಿಲ್, ದುಪಟ್ಟಾ, ಪುಸ್ತಕಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ಪೂರೈಸುತ್ತಿದ್ದಾರೆ.  ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತ ಬಡ, ಕೂಲಿಕಾರ್ಮಿಕರ ಮಕ್ಕಳಿಗೆ ಕಲ್ಪವೃಕ್ಷದಂತೆ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ.  ಈ ಶಾಲೆಯಲ್ಲಿ ಓದಿದ ತೆಹರಿಮ್ ಮತ್ತು ತಂಜಿಮ್ ತಮ್ಮ ಅಚ್ಚುಮೆಚ್ಚಿನ ಶಿಕ್ಷಕಿಯ ಕುರಿತು ಲೇಖನ ಬರೆದು ತಮ್ಮ ಸ್ನೇಹಿತರಿಗೆ ನೀಡಿದಾಗ ಈ ವಿಷಯ ಬಹಿರಂಗವಾಗಿದೆ.  ಇಂಥ ತಾಯಿ ಮಮತೆಯ ಎ. ಎಸ್. ಅತ್ತಾರ ಶಿಕ್ಷಕಿಯಿಂದ ಮತ್ತಷ್ಟು ಜನ ಸ್ಪೂರ್ತಿ ಪಡೆದು ಅರ್ಧದಲ್ಲಿಯೇ ಶಾಲೆ ತೊರೆಯುವ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ನೆರವಾದರೆ ಯಾವುದೇ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಲು ನೆರವಾಗಲಿದೆ.

ಕಳೆದ ಶಿಕ್ಷಕರ ದಿನಾಚರಣೆಯಂದು ಎ. ಎಸ್. ಅತ್ತಾರ ಅವರಿಗೆ ತಾಲೂಕು ಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿರುವುದೂ ಗಮನಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌