ಬೆಂಗಳೂರು: ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಚಿಂತನೆ ನಾಡಿನಲ್ಲಿ ಹರಿಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ವಿಧಾನಸಭಭೆಯ ಮುಂಭಾಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈ ಇಬ್ಬರೂ ಮಹಾನ್ ಪುರುಷರ ಆಡಳಿತ ಮತ್ತು ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬರಬೇಕು. ಈ ಶಕ್ತಿ ಸೌಧದಿಂದ ಅದು ಹರಿಯಬೇಕು. ಆ ವಿಚಾರಗಳು ಹರಿದು ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿಯಾಗಿರುವ, ಸಾಮರಸ್ಯವಿರುವ, ಭಾರತದಲ್ಲಿಯೇ ಅತ್ಯಂತ ಶ್ರೇಷ್ಠ ರಾಜ್ಯವಾಗಬೇಕು. ಈ ಇಬ್ಬರೂ ಮಹಾತ್ಮರ ಪ್ರೇರಣೆ ವಿಧಾನಸೌಧದಲ್ಲಿ ನಿಲ್ಲಲಿ ಎಂದು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
*ನವ ಕರ್ನಾಟಕ ನಿರ್ಮಾಣಕ್ಕೆ ಭದ್ರ ಬುನಾದಿ*
ಮುಂಬರುವ ದಿನಗಳಲ್ಲಿ ನಾಡಿನ ಜನತೆಗೆ ಒಳ್ಳೆಯದಾಗಿ ನವ ಕರ್ನಾಟಕ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಇಂದಿನಿಂದ ಈ ಕೆಲಸ ಪ್ರಾರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಎಲ್ಲರೂ ಸೇರಿ ಉದ್ಘಾಟನೆ ಮಾಡೋಣ ಎಂದು ತಿಳಿಸಿದ ಸಿಎಂ, ಕನ್ನಡ ನಾಡಿಗೆ ಇದೊಂದು ಶುಭದಿನ ಎಂದು ಅಭಿಪ್ರಾಯಪಟ್ಟರು.
ನಾಡು ಕಟ್ಟಿರುವ ಅಪ್ರತಿಮ ನಾಯಕರು
ಕನ್ನಡನಾಡಿನಲ್ಲಿ ಹುಟ್ಟಿ, ಕ್ರಾಂತಿಯನ್ನು ಮಾಡಿದ ಇಬ್ಬರು ಮಹಾನ್ ಪುರುಷರು. ಒಬ್ಬರು ವಿಶ್ವಬಂಧು, ಸಾಮಾಜಿಕ, ಆರ್ಥಿಕ ಹಾಗೂ ವೈಚಾರಿಕ ಕ್ರಾಂತಿಯನ್ನು ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಮಾಡಿ ಜಗತ್ತಿಗೆ ದರ್ಶನವನ್ನು ನೀಡಿದ್ದಾರೆ. ಇನ್ನೊಬ್ಬರು ನಾಡು ಕಟ್ಟಿರುವ ಅಪ್ರತಿಮ ನಾಯಕರು. ಜನಹಿತಕ್ಕಾಗಿ ಕೆರೆಕಟ್ಟೆಗಳು, ಊರು ಕೇರಿಗಳನ್ನು, ಮಾರುಕಟ್ಟೆಗಳನ್ನು ಕಟ್ಟಿ ಮಾದರಿ ಆಡಳಿತ ಮಾಡಿರುವ ನಾಡಪ್ರಭು ಕೆಂಪೇಗೌಡರ. ಈ ಇಬ್ಬರೂ ಮಹನೀಯರ ಪುತ್ಥಳಿಗಳನ್ನು ವಿಧಾನಸಭೆ ಮುಂಭಾಗದಲ್ಲಿ ನಿರ್ಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು, ಎಲ್ಲಾ ನಾಯಕರ ಅನುಮತಿ ಪಡೆದು, ಸಚಿವ ಆರ್. ಅಶೋಕ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಅಶೋಕ ಅವರು ಅತ್ಯಂತ ಅಚ್ಚುಕಟ್ಟಾಗಿ ಜವಾಬ್ದಾರಿಯನ್ನು ನಿರ್ವಹಿಸಿ, ಕೇವಲ ಒಂದೂವರೆ ಎರಡು ತಿಂಗಳೊಳಗೆ ಕಾರ್ಯ ನಿರ್ವಹಿಸಿ ಕ್ರಮ ಕೈಗೊಂಡಿದ್ದಾರೆ. ನಾಡಿನ ಎಲ್ಲಾ ಪರಮಪೂಜ್ಯರ ಸಾನಿಧ್ಯದಲ್ಲಿ, ಅವರ ಆಶೀರ್ವಾದದೊಂದಿಗೆ ಒಂದು ಶಂಕುಸ್ಥಾಪನೆ ನೆರವೇರಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.