ವಿಜಯಪುರ: ನಾ ನಾಯಕಿ ಎಂಬ ಸಮಿತಿ ರಚಿಸುವ ಮೂಲಕ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಹೇಳಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಕಳೆದ ಒಂದೂವರೆ ವರ್ಷ ಹಿಂದೆ ನಾ ನಾಯಕಿ ಎಂಬ ಸಮಿತಿಗೆ ಚಾಲನೆ ನೀಡಿದ್ದಾರೆ. ಈ ಸಮಿತಿಯ ಮೂಲಕ ಗ್ರಾಮೀಣ ಮತ್ತು ತಾಲೂಕು ಮಟ್ಟದ ಪ್ರತಿ ಹಂತದಲ್ಲಿಯೂ ಮಹಿಳೆಯರು ತಮ್ಮ ನಾಯಕತ್ವದ ಗುಣಗಳ ಮೂಲಕ ರಾಜಕೀಯಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಮಹಿಳೆಯರೆಲ್ಲರೂ ತಂತಮ್ಮ ರಂಗದಲ್ಲಿ ನಾಯಕಿಯರೇ ಆಗಿರುತ್ತಾರೆ. ಆದರೆ, ಮಹಿಳೆಯರಿಗೆ ಅವಕಾಶಗಳು ಕಡಿಮೆ. ತಮ್ಮ ಶಕ್ತಿಯನ್ನು ತೋರಿಸಿಕೊಳ್ಳಲು ಅದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಈ ನಾ ನಾಯಕಿ ಎಂಬ ಸಮಿತಿಯನ್ನು ರಚಿಸಿ ಅದರ ಮೂಲಕ ಹಲವಾರು ಮಹಿಳೆಯರು ಪಂಚಾಯಿತಿ ಮಟ್ಟದಿಂದ ಹಿಡಿದು ಎಲ್ಲರನ್ನು ಒಗ್ಗೂಡಿಸಲಾಗುತ್ತಿದೆ. ಈ ಸಮಿತಿ ಅವರಲ್ಲಿರುವ ಶಕ್ತಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಿದೆ. ಅಲ್ಲದೇ, ಮಹಿಳೆಯರ ಸಮಸ್ಯೆಗಳನ್ನು ಆಲಿಸುವ ಮೂಲಕ ಮಹಿಳೆಯರಿಂದಲೇ ಅಭಿಪ್ರಾಯಗಳನ್ನು ಸಂಗ್ರಹಿಸಿ ಪ್ರಣಾಳಿಕೆಯಲ್ಲಿ ಸೇರಿಸುವ ಕೆಲಸ ಮಾಡಲಾಗುತ್ತಿದೆ. ಇದು ಮಹಿಳೆಯರಿಗೆ ಹೆಮ್ಮೆ ತರುವ ವಿಷಯವಾಗಿದೆ. ಕಾಂಗ್ರೆಸ್ ಸದಾ ಮಹಿಳಾಪರ ಇರುತ್ತದೆ ಎಂಬುವುದಕ್ಕೆ ಇದು ಸಾಕ್ಷಿ ಎಂದು ಅವರು ಹೇಳಿದರು.
ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಮತ್ತು ಅವರ ಅಭಿಪ್ರಾಯಗಳನ್ನು 7996551999 ಈ ಸಂಖ್ಯೆಗೆ ವಾಟ್ಸ್‍ಪ್ ಮೂಲಕ ಕಳುಹಿಸಬಹುದು ಮತ್ತು ಇದು ಬರೀ ಕಾಂಗ್ರೆಸ್ ಮಹಿಳೆಯರು ಮಾತ್ರವಲ್ಲ ಪ್ರತಿಯೊಬ್ಬರೂ ಈ ನಂಬರ್‍ಗೆ ತಮ್ಮ ಅನಿಸಿಕೆಗಳನ್ನು ಕಳುಹಿಸಬಹುದು ಎಂದು ಅವರು ತಿಳಿಸಿದರು.
ಜ.16ಕ್ಕೆ ಪ್ರೀಯಾಂಕಾ ಗಾಂಧಿ ಭೇಟಿ
ಜ. 16ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯಿಂದ ಎಂಟು ಮತಕ್ಷೇತ್ರಗಳ ಮಹಿಳೆಯರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿಯೂ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಬರೆದು ಹಾಕಲು ಒಂದು ದೊಡ್ಡ ಬಾಕ್ಸ್‍ನ್ನು ಇಡಲಾಗುತ್ತದೆ. ಇದೊಂದು ಮಹಿಳೆಯರಿಗಾಗಿಯೇ ನಡೆಯಲಿರುವ ಅತೀ ದೊಡ್ಡ ಸಮಾವೇಶವಾಗಲಿದೆ. ಹೀಗಾಗಿ ಜಿಲ್ಲೆಯಿಂದ ಹೆಚ್ಚಿನ ಸಂಖೆಯಲ್ಲಿ ಪ್ರತಿಯೋಬ್ಬರೂ ಭಾಗವಹಿಸಬೇಕು ಎಂದು ಕಾಂತಾ ನಾಯಕ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.