ವಿಜಯಪುರ: ಶಿಕ್ಷಣದ ಜೊತೆಗೆ ಕ್ರೀಡೆಗೆ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು ಹೆಸ್ಕಾಂ ವಿಜಿಲನ್ಸ್ ಎಸ್ಪಿ ಚೆನ್ನಬಸವಣ್ಣ ಎಸ್. ಎಲ್. ಹೇಳಿದ್ದಾರೆ.
ವಿಜಯಪುರದಲ್ಲಿ ಆಕ್ಸಫರ್ಡ್ ಐಐಟಿ ಒಲಂಪಿಯಾಡ್ ಶಾಲೆಯ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಓರ್ವ ವ್ಯಕ್ತಿಯ ಸರ್ವಾಂಗೀಣ ಮತ್ತು ಸಮರ್ಥ ವ್ಯಕ್ತಿತ್ವ ರೂಪಗೊಳ್ಳಬೇಕಾದರೆ ಕ್ರೀಡೆಯ ಪಾತ್ರ ಅನನ್ಯವಾಗಿದೆ. ಆಕ್ಸಫರ್ಡ್ ಶಾಲೆಯ ಮಕ್ಕಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರತಿನಿಧಿಸುವಂತಾಗಲಿ. ಭಾರತ ಜಗತ್ತಿನ ಬಲಿಷ್ಟ ಕ್ರೀಡಾಪಟುಗಳನ್ನು ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿ ಎಂದು ಅವರು ಹೇಳಿದರು.
ಕೊರೊನಾ ನಂತರ ಆರೋಗ್ಯ ಸಂಪತ್ತಿನ ಮುಂದೆ ಯಾವ ಸಂಪತ್ತು ಮುಖ್ಯವಾದುದಲ್ಲ ಎಂಬುದನ್ನು ಜಗತ್ತು ಅರಿತಿದೆ. ಹೀಗಾಗಿ ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಚನ್ನಬಸವಣ್ಣ ಎಸ್. ಎಲ್. ಹೇಳಿದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಒಂದು ದೇಶದ ಅಭಿವೃದ್ಧಿಯ ಜೊತೆಗೆ ಆದೇಶದ ಘನತೆ ಗೌರವವನ್ನು ಎತ್ತಿ ಹಿಡಿಯುವಲ್ಲಿ ಕ್ರೀಡಾಪಟುಗಳ ಪಾತ್ರ ಮಹತ್ವದ್ದಾಗಿದೆ. ಆಕ್ಸಫರ್ಡ್ ಶಿಕ್ಷಣ ಸಂಸ್ಥೆ ಸದಾ ಕ್ರೀಡಾಪಟುಗಳನ್ನು ಪೋಷಿಸುವ ಅವರ ಸಾಮರ್ಥ್ಯವನ್ನು ವೃದ್ಧಿಸುವ ಅವರ ಆಸಕ್ತಿಯ ಕ್ರೀಡೆಗಳಲ್ಲಿ ಅವರಿಗೆ ವಿಶೇಷ ತರಬೇತಿಯನ್ನು ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಕ್ರೀಡೆ ಎನ್ನುವುದು ಪ್ರತಿ ಮಗುವಿನ ಸರ್ವಾಂಗಿನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳ ಕ್ರೀಡಾ ಆಸಕ್ತಿಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಹಾಗೂ ಸರಕಾರದ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿಯ ಅತ್ಯುತ್ಕೃಷ್ಟ ಸೇವೆಗಾಗಿ ಕೊಡ ಮಾಡುವ ಕೇಂದ್ರ ಗೃಹ ಸಚಿವರ ಪದಕ ಪಡೆದಿರುವ ಐಪಿಎಸ್ ಅಧಿಕಾರಿ ಚನ್ನಬಸವಣ್ಣ ಅವರನ್ನು ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.
ಇದಕ್ಕೂ ಮುಂಚೆ ಲಿಂ. ಸಿದ್ದೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಸಂಸ್ಥೆಯ ಪರವಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಪ್ರದೀಪ್ ಲಿಂಗದಳ್ಳಿ, ನಿವೃತ್ತ ಡಿವೈಎಸ್ಪಿ ಬಿ. ಪಿ. ಹುಲಸಗುಂದ, ಸಿಪಿಐ ಶರಣಗೌಡ ಪಾಟೀಲ, ಸಂಗಮೇಶ ಪಾಲಭಾವಿ, ರಮೇಶ್ ಅವಜಿ, ಪ್ರಾಚಾರ್ಯ ಜೆ. ಎಂ. ಇನಾಮದಾರ, ಪ್ರಾಥಮಿಕ ವಿಭಾಗದ ಜಿ. ಎಂ. ಕಟ್ಟಿ, ದರ್ಶನ ಬೋಹಿತೆ, ಅನುಸೂಯ ಅಮರನ್ನವರ, ಶಿಕ್ಷಕ ವೃಂದ ಪಾಲಕರು ಹಾಗೂ ಮಕ್ಕಳು ಕ್ರೀಡಾಸಕ್ತರು ಪಾಲ್ಗೊಂಡಿದ್ದರು.