ವಿಜಯಪುರ: ಹೊಸ ಶಿಕ್ಷಣ ನೀತಿಯಿಂದ ದೇಶದ ಚಿತ್ರಣ ಬದಲಾಗಲಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಎಂ. ಮದನಗೋಪಾಲ ಹೇಳಿದ್ದಾರೆ.
ವಿಜಯಪುರದಲ್ಲಿ ಜಿ. ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ಹಾಗೂ ಜಿಲ್ಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಸಂಘ ಜಂಟಿಯಾಗಿ ಆಯೋಜಿಸಿದ್ದ 2022-23ನೇ ವರ್ಷದ ಎಸ್. ಎಸ್. ಎಲ್. ಸಿ ಗಣಿತ ಮತ್ತು ವಿಜ್ಞಾನ ಪರೀಕ್ಷಾ ಮಾರ್ಗದರ್ಶಿ ಸಾಹಿತ್ಯಗಳಾದ ಸಂಪ್ರತಿ ಹಾಗೂ ಸನ್ಮತಿ ಪುಸ್ತಕಗಳ ಬಿಡುಗಡೆ ಸಮಾರಂಭ, ಡಾ. ಶ್ರೀನಿವಾಸ ರಾಮಾನುಜನ್, ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ವಿಜಯಪುರ ಜಿಲ್ಲೆ ಲಿಂ. ಸಿದ್ದೇಶ್ವರ ಸ್ವಾಮಿಗಳು, ಕಾಕಾ ಕಾರ್ಕಾನೀಸ್, ರಾನಡೆ ಮಹಾರಾಜರು, ಭಾಸ್ಕರಾಚಾರ್ಯರನ್ನು ಪಡೆದ ಪುಣ್ಯಭೂಮಿ ಎಂದು ಹೇಳಿದರು.
ಯಾವ ವ್ಯಕ್ತಿಯು ಮಾತೃಭಾಷೆಯನ್ನು ಸುಲಭವಾಗಿ ಕಲಿಯುವನೋ ಅವನು ಇನ್ನುಳಿದ ಭಾಷಗೆಳನ್ನು ಸುಲಭವಾಗಿ ಕಲಿಯುತ್ತಾನೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸಲು ಸಾಧ್ಯ. ಭೌತಶಾಸ್ತ್ರ, ಗಣಿತ ಮತ್ತು ರಸಾಯನಶಾಸ್ತ್ರ ವಿಭಾಗದಲ್ಲಿ ಅತೀ ಹೆಚ್ಚು ವಿಜ್ಞಾನಿಗಳನ್ನು ನೀಡಿದ ದೇಶ ನಮ್ಮದು. ಅ್ಲದೇ, ಅತೀ ಹೆಚ್ಚು ಐಎಎಸ್ ಮತ್ತು ಕೆಎಎಎಸ್ ಅಧಿಕಾರಿಗಳು ಸರಕಾರಿ ಶಾಲೆಗಳಲ್ಲಿ ಕಲಿತಿದ್ದಾರೆ. ಈಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಚಿತ್ರವನ್ನು ಬದಲಿಸಲಿದೆ ಎಂದು ಎಂ. ಮದನಗೋಪಾಲ ತಿಳಿಸಿದರು.
ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ ದೇಶದಲ್ಲಿ ಎನ್ ಇ ಪಿಯನ್ನು ಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ ಎಂದು ಹೇಳಿದರು.
ಮಾಜಿ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಇದನ್ನು ಜಾರಿಗೆ ತಂದರೆ, ಹಾಲಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಅವರು ಅದನ್ನು ಅನುಷ್ಠಾನಗೊಳಿಸಿದರು. ಶಿಕ್ಷಕ ಬದಲಾಗದಿದ್ದರೆ ಶಿಕ್ಷಣ ಬದಲಾಗಲ್ಲ. ಶಿಕ್ಷಣ ಬದಲಾಗದಿದ್ದರೆ ದೇಶ ಬದಲಾಗಲ್ಲ. ನೈತಿಕ ಮೌಲ್ಯ ಕೊರೆತೆಯಾದರೆ ಒಂದು ರಾಷ್ಟ್ರ ನಾಶವಾಗುತ್ತದೆ. ಮುಂದಿನ ದಶಕದಲ್ಲಿ ಇಡೀ ಜಗತ್ತು ಶಿಕ್ಷಕರತ್ತ ನೋಡುಲಿದೆ ಎಂದು ಅರುಣ ಶಹಾಪುರ ಹೇಳಿದರು.
ಬಿಜೆಪಿ ಮುಖಂಡ ಡಾ. ಗೋಪಾಲ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಎಂಜಿನಿಯರ್ ಸೋಮಶೇಖರ ಎಸ್. ಸಾವನ್, ಸಿದ್ರಾಮಪ್ಪ ಎಸ್. ಹಳ್ಳದ, ಡೈಟ್ ಅಧಿಕಾರಿ ಸಾಯೀರಾಬಾನುಖಾನ, ಅರವಿಂದ ಕುಲಕರ್ಣಿ, ಶಿವಾನಂದ ಎಂ. ಗುಡ್ಡೋಡಗಿ, ರವೀಂದ್ರ ಎಸ್. ತುಂಗಳ, ಶಿವರಾಜ ಬಿರಾದಾರ, ಸಿದ್ದು ಹಂಚಿನಾಳ, ಎಂ. ಕೆ. ಬಿರಾದಾರ, ರವೀಂದ್ರ ಝಳಕಿ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಜಿಲ್ಲೆಯ ಪ್ರೌಢಶಾಲೆ ವಿಭಾಗದ ಎಲ್ಲ ಗಣಿತ ಹಾಗೂ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು.
ರೇವತಿ ಎಂ. ಬುದಿಹಾಳ ಮತ್ತು ಅಶೋಕ ಹಂಚಲಿ ನಿರೂಪಿಸಿದರು. ಜಗದೀಶ ಬೋಳಸೂರ ವಂದಿಸಿದರು.