ಸರಳವಾಗಿ ನಡೆದ ಬಸವನಾಡಿನ ಗ್ರಾಮದೇವತೆ ಶ್ರೀ ಸಿದ್ಧರಾಮೇಶ್ವರ ಜಾತ್ರೆ- ಯತ್ನಾಳ ದಂಪತಿಯಿಂದ ವಿಶೇಷ ಪೂಜೆ

ವಿಜಯಪುರ: ಶತಮಾನದ ಇತಿಹಾಸವಿರುವ ಬಸವನಾಡು ವಿಜಯಪುರ ನಗರದ ಗ್ರಾಮ ದೇವತೆ ಶ್ರೀಸಿದ್ಧರಾಮೇಶ್ವರ ಜಾತ್ರೆ ಈ ಬಾರಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಸರಳವಾಗಿ ನಡೆಯುತ್ತಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಗೆ ಅತ್ಯಂತ ಸರಳವಾಗಿ ನಡೆದಿತ್ತು.  ಈ ಬಾರಿಯೂ ಶ್ರೀಗಳ ಗೌರವಾರ್ಥ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಜಾತ್ರೆ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರಲಿದೆ ಎಂದು ಮೊದಲೇ ತಿಳಿಸಿದ್ದರು.  ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಯಾವುದೇ ವ್ಯಾಪಾರ ವಹಿವಾಟಿನ ಅಂಗಡಿಗಳಿಲ್ಲ ಹಾಕಲಾಗಿಲ್ಲ.  ಮೇಲಾಗಿ ಮನರಂಜನೆ ಕಾರ್ಯಕ್ರಮಗಳು, ಕುಸ್ತಿ ಪಂದ್ಯವಾವಳಿ, ಭಾರ ಎತ್ತುವ ಸ್ಪರ್ಧೆಗಳು ಹಾಗೂ ಉತ್ತರ ಕರ್ನಾಟದಲ್ಲಿಯೇ ಜಾನುವಾರಗಳ ಬೃಹತ್ ಜಾತ್ರೆಯನ್ನೂ ಕೂಡ ರದ್ದುಪಡಿಸಲಾಗಿದೆ.

ಆದರೂ ಕೂಡ ಸಂಪ್ರದಾಯಂತೆ ಜಾತ್ರೆಯ ಎರಡನೇ ದಿನ ಭೋಗಿ ಕಾರ್ಯಕ್ರಮ ನಡೆಯಿತು.  ಶ್ರೀ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ದೇವಸ್ಥಾನದ ಒಳಗಡೆ ದೇವರ ಬೆಳ್ಳಿಯ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.  ಗರ್ಭಗುಡಿಯನ್ನು ನಾನಾ ರೀತಿಯ ಹೂವುಗಳಿಂದ ಸಿಂಗರಿಸಲಾಗಿತ್ತು.

ವಿಜಯಪುರದ ಶ್ರೀ ಸಿದ್ಧರಾಮೇಶ್ವರ ಮೂರ್ತಿಯನ್ನು ನಾನಾ ಪುಷ್ಪಗಳಿಂದ ಅಲಂಕರಿಸಲಾಗಿದೆ

ಮಕರ ಸಂಕ್ರಾಂತಿ ಮುನ್ನಾ ದಿನ ನಡೆಯುವ ಈ ಕಾರ್ಯಕ್ರದಮಲ್ಲಿ ಮಂತ್ರದಂಡದೊಂದಿಗೆ ಶ್ರೀ ಸಿದ್ಧರಾಮೇಶ್ವರನ ಯೋಗದಂಡಕ್ಕೆ ಅಕ್ಷತೆ ಹಾಗೂ ವಿಧಿ ವಿಧಾನಗಳೊಂದಿಗೆ ಚರಿತ್ರೆ ಓದುವ ಕಾರ್ಯಕ್ರಮ ನಡೆಯಿತು.  ಅಲ್ಲದೇ, ನಂದಿ ಧ್ವಜಗಳ ಉತ್ಸವ ಕೂಡ ಆಯೋಜಿಸಲಾಗಿತ್ತು.

ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಪತ್ನಿ ಶೈಲಜಾ ಜೊತೆ ದೇವಸ್ಥಾನ ದಲ್ಲಿ ಯೋಗ ದಂಡಕ್ಕೆ ಪ್ರದಕ್ಷಿಣೆ ಹಾಕಿ ಸರಳವಾಗಿ ವಿಶೇಷ ಪೂಜೆ ಸಲ್ಲಿಸಿದರು.  ನಂತರ ದೇವಸ್ಥಾನದ ಹೊರಗಡೆ ಆವರಣದಲ್ಲಿ ಹಾಕಲಾಗಿರುವ ವೇದಿಕೆಯಲ್ಲಿ ಬೋಗಿ ಕಾರ್ಯಕ್ರಮ ನೆರವೇರಿಸಿದರು.

ಸಂಕ್ರಮಣದ ಭೋಗಿ ದಿನ ಬಸವನಾಡಿನ ಜನ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ.  ಭಜಿ ಪಲ್ಯ ಅಂದರೆ ನಾನಾ ಬಗೆಯ ಬೆಳೆಯ ಕಾಳಗಳಾದ, ಕಡಲೆ, ಶೇಂಗಾ, ಅಲಸಂದಿ, ತೊಗರಿ, ಉದ್ದು ಹಾಗೂ ತರಕಾರಿಗಳಾದ ಮೂಲಂಗಿ, ಗಜ್ಜರಿ, ಬೀನ್ಸ್, ಸವತೆಕಾಯಿ, ಬೂದು ಕುಂಗಳಕಾಯಿ, ಕಬ್ಬು, ಬದನೆಕಾಯಿ, ಬಿಟರೂಟ್, ಬೆಂಡಿಕಾಯಿ, ಚವಳಿಕಾಯಿ, ಮೆಂತೆಪಲ್ಯೆ, ಕಿರಸಾಲೆ, ಕೋತಂಬರಿ, ಗೆಣಸು ಸೇರಿದಂತೆ ಎಲ್ಲವನ್ನು ಸೇರಿಸಿ ವಿಶೇಷ ಪಲ್ಯೆ ತಯಾರಿಸುತ್ತಾರೆ.  ಕಟಾವು ಮಾಡಿದ ಹೊಸ ಧಾನ್ಯಗಳಿಂದ ಈ ಖಾದ್ಯವನ್ನು ತಯಾರಿಸುವುದುರ ಜೊತೆಗೆ, ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಕೋಸಂಬರಿ, ಹುಳಿಯನುಚ್ಚು ಮತ್ತು ಸಾಂಬಾರ್ ಮಾಡುತ್ತಾರೆ.  ಈ ಖಾದ್ಯವನ್ನು ಶ್ರೀ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ತಂದು ದೇವರಿಗೆ ಅರ್ಪಿಸಿ ಕೃತಾರ್ಥರಾಗುತ್ತಾರೆ.  ನಂತರ ಸಾಲುಗಟ್ಟೆಯಲ್ಲಿ ಪಾಳಿಯಲ್ಲಿ ನಿಂತುಕೊಂಡು ದೇವರ ದರ್ಶನ ಪಡೆದು ಅಕ್ಷತೆ ಹಾಕಿ ತೀರ್ಥ ಪಡೆದು ನಂದಿಧ್ವಜಗಳಿಗೂ ವಿಶೇಷ ಪೂಜೆ ಸಲ್ಲಿಸಿ ಮನೆಗೆ ಮರಳುತ್ತಾರೆ.

ಸರಳ ಜಾತ್ರೆಯಲ್ಲೂ ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು

ನಡೆದಾಡಿದ ದೇವರು ಸ್ವಾಮಿ ಸಿದ್ಧೇಶ್ವರ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಜಾತ್ರೆ ಆಯೋಜಕರು ಮೊದಲೆ ಮಾಹಿತಿ ನೀಡಿದ್ದರೂ ಕೂಡ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನಕ್ಕೆ ಮುಗಿಬಿದ್ದಿದ್ದು ಗಮನಾರ್ಹವಾಗಿತ್ತು.  ಶ್ರೀಗಳ ಅಗಲಿಕೆಯಿಂದ ಭಾರವಾದ ಮನಸ್ಸಿನ ನಡುವೆಯೂ ಸಂಪ್ರದಾಯ ಪಾಲನೆ ಮಾಡುವ ಅನಿವಾರ್ಯತೆಯಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಸಂಕ್ರಾಂತಿಯ ಸಂಭ್ರಮದಲ್ಲಿ ತೊಡಗಿದರು.

ರಾಜ್ಯಾದ್ಯಂತ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ರವಿವಾರ ಶ್ರೀ ಸಿದ್ಧರಾಮೇಶ್ವರ ಜಾತ್ರೆ ಅಂಗವಾಗಿ ನಂದಿ ಧ್ವಜಗಳ ಮೆರವಣಿಗೆ, ನಂತರ ಹೋಮ ಹವನ ನಡೆಯಲಿದೆ. ಅಲ್ಲದೇ, ನಂತರ ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಮೆರವಣಿಗೆ ನಡೆಯಲಿದೆ.

Leave a Reply

ಹೊಸ ಪೋಸ್ಟ್‌