ಮೀಸಲಾತಿ ಸಂಬಂಧ ವರಿಷ್ಠರು ಬೆಳಿಗ್ಗೆ ನನ್ನ ಜೊತೆ ಮಾತನಾಡಿದ್ದಾರೆ- ಈ ಹಿಂದೆ ಮಾಜಿ ಸಚಿವನ ಕೊಲೆಗೆ ಸುಪಾರಿ ಆರೋಪದಲ್ಲಿ ನನ್ನನ್ನು ಸಿಲುಕಿಸಲು ಪ್ರಯತ್ನಿಸಿದ್ದರು- ಯತ್ನಾಳ

ವಿಜಯಪುರ: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಹೈಕಮಾಂಡಿಗೆ ಪಂಚಮಸಾಲಿ ಸಮುದಾಯದ ಹೋರಾಟ ಮನವರಿಕೆಯಾಗಿದೆ.  ಬೆಳಿಗ್ಗೆಯಷ್ಟೇ ಹೈಕಮಾಂಡ್ ನವರು ನನ್ನ ಜೊತೆ ಮಾತನಾಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರವಾಗಿ ನಮ್ಮ ಕೇಂದ್ರ ನಾಯಕ ಮಂಡಳಿ, ಪಕ್ಷದ ಹೈಕಮಾಂಡ ಇಂದು ಬೆಳಿಗ್ಗೆ ಫೋನ್ ಮಾಡಿ ಮಾತನಾಡಿದೆ.  ಕರ್ನಾಟಕದ ಮೀಸಲಾತಿ ವಿಚಾರ ಮತ್ತು ಈ ಬಗ್ಗೆ ಇರುವ ಗೊಂದಲ ನಿವಾರಣೆ ಮಾಡಲು ಸಭೆ ಕರೆದು ನಿಮ್ಮ ಭಾವನೆಗಳನ್ನು ತಿಳಿದು ಮುಂದಿನ ಕ್ರಮ ಕೈಗೊಳ್ಳಲು ಹೈಕಮಾಂಡ್ ಅಸ್ತು ಎಂದಿದೆ ಎಂದು ತಿಳಿಸಿದರು.

ಇದರಿಂದ ಕಳೆದ ಎರಡು ವರ್ಷಗಳಿಂದ ಕೂಡಲ ಸಂಗಮ ಶ್ರೀಗಳ ಒಂದು ತಪಸ್ಸು, ಪಾದಯಾತ್ರೆಯ ಪ್ರತಿಫಲ ಮಕರ ಸಂಕ್ರಮಣ ಉತ್ತರಾಯಣ ಶುಭ ಪ್ರಸಂಗದಲ್ಲಿ ಕೇಂದ್ರ ಹೈಕಮಾಂಡ ಬಹಳ ಸ್ಪಷ್ಟವಾದ ನಿಲುವು ತೆಗೆದುಕೊಂಡಿದೆ.  ಆದಷ್ಟು ಬೇಗನೇ ನಮ್ಮ ರಾಷ್ಟ್ರೀಯ ನಾಯಕರು ನಾವೆಲ್ಲ ಕೂಡಿ ಕೂಡಲ ಸಂಗಮ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರ ಭೇಟಿಗೆ ಹೊಗುತ್ತಿದ್ದೇವೆ.  ಬಹಳ ಒಳ್ಳೆಯ ಸುದ್ದಿಯನ್ನು ನಮ್ಮ ಪಕ್ಷ ನೀಡಲಿದೆ ಎಂದು ಅವರು ತಿಳಿಸಿದರು.

ಚಿಲ್ಲರೆ ವ್ಯಕ್ತಿಗಳಿಗೆ ಪ್ರತಿಕ್ರಿಯೆ ನೀಡದಂತೆ ಹೈಕಮಾಂಡ್ ನಿರ್ದೇಶನ

ಇದೇ ವೇಳೆ, ಮೀಸಲಾತಿ ಮತ್ತೀತರ ವಿಚಾರಗಳಲ್ಲಿ ಹೈಕಮಾಂಡ್ ನನಗೆ ಒಂದು ಸೂಚನೆ ಕೊಟ್ಟಿದೆ.  ಯಾವುದೇ ರೀತಿ ಚಿಲ್ಲರೆ ವ್ಯಕ್ತಿಗಳ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡಬಾರದು. ಎಲ್ಲವನ್ನೂ ಪಕ್ಷ ಗಮನಿಸಿದೆ ಎಂದು ತಿಳಿಸಿದ್ದಾರೆ.  ಅದಕ್ಕಾಗಿ ಅಂಥ ಚಿಲ್ಲರೆ ವ್ಯಕ್ತಿಗಳ ಬಗ್ಗೆ, ಸಂಸ್ಕಾರ ಇಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಉ್ತತಮವಲ್ಲ.  ಇಂದು ಸಂಕ್ರಾಂತಿ ಹಬ್ಬವಿದೆ.  ಒಳ್ಳೆಯ ಮಾತನಾಡೋಣ.  ಒಳ್ಳೆಯ ಸುದ್ದಿ ಬಂದಿದೆ.  ಕೇಂದ್ರ ಹೈಕಮಾಂಡ ಮೀಸಲಾತಿ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿಗಿ ಹೇಳಿದೆ ಎಂದು ಅವರು ತಿಳಿಸಿದರು.

ಹೈಕಮಾಂಡ್ ಭೇಟಿಗೆ ಶೀಘ್ರದಲ್ಲಿಯೇ ಸಮಯ ನೀಡುವುದಾಗಿ ತಿಳಿಸಿದ್ದಾರೆ.  ಜ. 21ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಬರುತ್ತಿದ್ದಾರೆ.  ಅವರ ಭೇಟಿಗೂ ಸಮಯ ನಿಗದಿಯಾಗಲಿದೆ.  ಹೈಕಮಾಂಡಿನ ಇತರರೂ ಹೋರಾಟವನನು ಗಂಭೀರವಾಗಿ ಪರಿಗಣಿಸಿದ್ದಾರೆ.  ಒಂದು ದೊಡ್ಡ ಸಮುದಾಯಕ್ಕೆ ಚುನಾವಣೆ ಪೂರ್ವದಲ್ಲಿ ನ್ಯಾಯ ಕೊಡದಿದ್ದರೆ ಅದರ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಮಾಡುತ್ತಿದ್ದಾರೆ.  ಇಲ್ಲಿಯ ಹಾಗೇ, ಚಿಲ್ಲರೆ ರೌಡಿ ಗ್ಯಾಂಗಿನವರಿಗೆ ಏನು ಗೊತ್ತಿದೆ? ಯತ್ನಾಳ ತುಳಿಯುವುದನ್ನು ಬಿಟ್ಟರೆ ಅವರಿಗೆ ಬೇರೇನೂ ಕೆಲಸವಿಲ್ಲ.  ಯತ್ನಾಳರನ್ನು ಯಾರೂ ತುಳಿಯಲು ಆಗುವುದಿಲ್ಲ.  ಯತ್ನಾಳ ಅವರ ಬೇರುಗಳು ಬಹಳ ಗುಮ್ಮ(ಆಳ)ವಾಗಿವೆ.  ಯತ್ನಾಳ ಅವರ ಶಕ್ತಿ ಬಿಜೆಪಿಯನ್ನು ಮೂಲ ಸಂಘಟನೆ ಮಾಡಿದವರಿಗೆ ಗೊತ್ತಿದೆ.  ನಾವು ಮೂಲ ಕಾರ್ಯಕರ್ತರು.  ಜನರಲ್ಲಿ ನಮ್ಮ ಬೇರುಗಳಿವೆ.  ಜನ ನಮ್ಮನ್ನು ಕೈ ಬಿಡುವುದಿಲ್ಲ ಎಂದು ಯತ್ನಾಳ ಹೇಳಿದರು.

ಸ್ಯಾಂಟ್ರೋ ರವಿ, ಯುವರಾಜ ಪ್ರಕರಣ ವಿಚಾರ

ಇಂದು ರಾಜಕಾರಣದಲ್ಲಿ ಬ್ಲ್ಯಾಕ್ ಮೇಲರ್ಸ್ ಸುತ್ತಮುತ್ತಲಿರುತ್ತಾರೆ.  ಸ್ಯಾಂಟ್ರೋ ರವಿ ಯಾರಾರೋ ಸಚಿವರ ಜೊತೆ ಫೋಟೋದಲ್ಲಿದ್ದಾನೆ ಎಂಬ ಕಾರಣಕ್ಕಾಗಿ ಅವರನ್ನು ಆತ್ಮೀಯರು ಎಂದು ತಿಳಿದೊಳ್ಳಬಾರದು.  ಆದರೆ, ಅವನ ಬಳಿ ಪ್ರೂಫ್‌ ಸಿಗುತ್ತಿದೆ.  ಏನೂ ಆಗುವುದಿಲ್ಲ ನೋಡುತ್ತೀರಿ.  ಮತ್ತೋಂದು ವಿಷಯ ಬಂದಾಗ ಹಳೆಯದನ್ನು ಬಿಟ್ಟು ಹೊಸದಾಗಿ ಬರುವ ವಿಷಯಗಳನ್ನು ಮಾಧ್ಯಮದವರು ತೋರಿಸುತ್ತೀರಿ ಎಂದು ಅವರು ಹೇಳಿದರು.

ಯುವರಾಜನನ್ನು ಯಾಕೆ ಬಂಧನ ಮಾಡಿದ್ದೀರಿ? ಸಿನೇಮಾ ನಟಿಯರು ಡ್ರಗ್ಸ್ ಸಲುವಾಗಿ ಮಾಡಿದ ರೇಡ್ ಅದಲ್ಲ.  ಡ್ರಗ್ಸ್ ಕೇವಲ ನೆಪ.  ಅದರ ಹೆಸರಲ್ಲಿ, ಅವರ ಸಂಜಾತ ಪುತ್ರನ ವಿಡಿಯೋಗಳನ್ನು ಡಿಲೀಟ್ ಮಾಡಲು ಮಾಡಿದ್ದಾರೆ.  ಪೋಲೀಸ್ ಅಧಿಕಾರಿಗಳು ರೇಡ್ ಹಾಕಿದ ಮೇಲೆ ಹಿರೋಯಿನ್ ಗಳ ಮೊಬೈಲ್ ಕಿತ್ತುಕೊಂಡು, ಆ ವಿಡಿಯೋಗಳನ್ನು ತಮ್ಮ ಮೊಬೈಲಿಗೆ ಹಾಕಿಕೊಂಡು ಡಿಲೀಟ್ ಮಾಡುತ್ತಿದ್ದರು.  ಏಕೆಂದರೆ ನಾಳೆ ಆ ಲಪುಟ ಟ್ರಾನ್ಸಫರ್ ಗೆ ದುಡ್ಡು ಕೇಳಿದರೆ ಹೇಗೆ ಎಂಬ ದುರಾಲೋಚನೆಯಿಂದ ಹೀಗೆ ಮಾಡುತ್ತಿದ್ದಾರೆ.  ಯುವರಾಜನನ್ನು ಯಾಕೆ ಇನ್ನೂ ಹೊರಗೆ ಬಿಟ್ಟಿಲ್ಲ? ಅವನ ಬಳಿ ಯಾರಾರ ವಿಡಿಯೋಗಳಿವೆ? ಈಗ ಟೀಕಿಸುತ್ತಿದ್ದಾರಲ್ಲ, ಅವರ ವಿಡಿಯೋಗಳು ಆತನ ಬಳಿ ಇವೆ.  ನೀವು ಡ್ರಗ್ಸ್ ಸಲುವಾಗಿ ಹೋರಾಟ ಮಾಡಲಿಲ್ಲ.  ಅವರ ಬಳಿಯಿದ್ದ ನಿಮ್ಮ ವಿಡಿಯೋ ಡಿಲೀಟ್ ಮಾಡಲು ಹೋರಾಟ ಮಾಡಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದರು.

ಸಿಬಿಐ ತನಿಖೆಗೆ ವಹಿಸಲು ಆಗ್ರಹ

ನಿನ್ನೆ ರಾಜ್ಯದ ಕ್ಯಾಬಿನೆಟ್ ಸಚಿವರೊಬ್ಬರು ಚಾಲಕನ ಕೊಲೆಯಾಗಿದೆ ಎಂಬ ಆರೋಪ ಮಾಡಿದ್ದಾರೆ.  ಅದನ್ನು ಸಿಬಿಐನಿಂದ ತನಿಖೆ ಮಾಡಿಸಬೇಕು.  ಸತ್ಯಾಸತ್ಯತೆ ಹೊರ ಬೀಳಬೇಕು.  ಓರ್ವ ಕ್ಯಾಬಿನೆಟ್ ದರ್ಜೆಯ ಮಂತ್ರಿ ಬೇಜವಾಬ್ದಾರಿಯಾಗಿ ಯಾರ ಬಗ್ಗೆಯೂ ಹಗುರವಾಗಿ ಮಾಧ್ಯಮಗಳ ಎದುರು ಹೇಳಲು ಅವಕಾಶವಿಲ್ಲ.  ನಾನು ಸಿಎಂ ಗೆ ಪತ್ರ ಬರೆದಿದ್ದೇನೆ.  ಸಾಧ್ಯವಾದರೆ ಸಂಜೆ ಮುಖ್ಯಮಂತ್ರಿ ಜೊತೆ ಮಾತನಾಡಿ, ಸಿಬಿಐಗೆ ಕೊಡಿ.  ತನಿಖೆ ಮಾಡಿ.  ತನಿಖೆಯಲ್ಲಿ ಏನು ಹೊರ ಬೀಳುತ್ತೋ ಬೀಳಲಿ ಎಂದು ಹೇಳುತ್ತೇನೆ ಎಂದು ಅವರು ತಿಳಿಸಿದರು.

ಈ ಹಿಂದೆ ಮಾಜಿ ಸಚಿವರ ಕೊಲೆಗೆ ಸುಪಾರಿ ಆರೋಪ ಪ್ರಕರಣಕ್ಕೆ ನನ್ನನ್ನು ಜೋಡಿಸಿದ್ದರು 

ಈ ಹಿಂದೆ ನಾನು ಮಾಜಿ ಸಚಿವರೊಬ್ಬರಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದೇನೆ ಎಂದು ಶಹಾಪೇಟೆಯ ಹುಡುಗರ ವಿರುದ್ಧ ದೂರು ದಾಖಲಾಗಿತ್ತು.  ಅಲ್ಲದೇ, ಅಥಣಿ ಪೊಲೀಸರಿಂದ ಯತ್ನಾಳ ನಮಗೆ ಕೊಲೆ ಮಾಡಲು ಸುಪಾರಿ ನೀಡಿದ್ದಾರೆ.  ಹಣ ಕೊಟ್ಟಿದ್ದಾರೆ.  ಜಮೀನು ಕೊಡಿಸುವುದಾಗಿ ಆಮೀಷ ಒಡ್ಡಿದ್ದಾರೆ ಎಂದು ಹೇಳುವಂತೆ ಒತ್ತಾಯ ಮಾಡಿದ್ದರು.  ನಂತರ ಈ ಪ್ರಕರಣದ ತನಿಖೆಯನ್ನು ಸಿಓಡಿ ತನಿಖೆಗೆ ನೀಡಲಾಗಿತ್ತು.  ಅಂದಿನ ಸಿಓಡಿ ಎಸ್ಪಿ ಚರಣರೆಡ್ಡಿ ಅವರು, ಅಂದು ನನಗೆ ಕರೆ ಮಾಡಿ ನಿಮ್ಮ ವಿರುದ್ಧ ಈ ರೀತಿ ದೂರು ಬಂದಿವೆ.  ಬಂದು ಸಾಕ್ಷಿ ನುಡಿಯುವಂತೆ ಹೇಳಿದ್ದರು.  ಜಂಗಮಶೆಟ್ಟಿ ಎಂಬ ಡಿವೈಎಸ್ಪಿ ತನಿಖೆ ಮಾಡಿದ್ದರು.  ಅಂದಿನ ಪೊಲೀಸ್ ಅಧಿಕಾರಿಯೊಬ್ಬರು ಆ ಮಾಜಿ ಸಚಿವನ ಚೇಲಾ ಆಗಿದ್ದರು.  ಆತ ಹುಡುಗನನ್ನು ಅಥಣಿಗೆ ಕರೆದೊಯ್ದು, ಸಿಕ್ಕಾಪಟ್ಟೆ ಹೊಡೆದು ಕಿರುಕಳ ನೀಡಿದ್ದರು.  ಆದರೂ, ಆ ಹುಡುಗರು, ಗೌಡರು ಆ ರೀತಿ ಹೇಳಿಲ್ಲ.  ಅಂಥ ಹಲ್ಕಾ ಕೆಲಸವನ್ನು ಅವರು ಹೇಳುವುದಿಲ್ಲ.  ಸುಮ್ಮನೇ ಅವರ ವಿರುದ್ಧ ಹೇಳುವುದಿಲ್ಲ ಎಂದಿದ್ದರು.  ಇತ್ತೀಚೆಗೆ ಅವರು ನಿರಪರಾಧಿಯಾಗಿ ಹೊರಗೆ ಬಂದಿದ್ದಾರೆ.  ಬೆಳಗಾವಿ ಐಜಿಯಾಗಿದ್ದ ಚರಣರೆಡ್ಡಿ ಅವರನ್ನು ನಾನು ಭೇಟಿ ಮಾಡಿದ್ದೆ.  ಆಗ ಅವರು ಪೊಲೀಸ್ ಇಲಾಖೆಯಲ್ಲಿ ಕೆಲವು ಜನ ಖಾಕಿ ಬಟ್ಟೆಯಲ್ಲಿ ಕ್ರಿಮಿನಲ್ಸ್ ಇದ್ದಾರೆ ಎಂದು ಹೇಳಿದ್ದರು.  ಅಂದು ಆ ಆರೋಪದಿಂದ ಮುಕ್ತನಾಗಿದ್ದೆ.  ಈಗ ಮತ್ತೋಂದು ಇಂಥದ್ದೆ ಪಿತೂರಿ ನಡೆಯುತ್ತಿದೆ.  ಸಿಬಿಐ ಇದೆ.  ಈ ಕುರಿತು ತನಿಖೆ ನಡೆಸಲಿ.  ಸಿಎಂ 24 ಗಂಟೆಗಳ್ಲಿ ಇದನ್ನು ಸಿಬಿಐ ತನಿಖೆಗೆ ಒಪ್ಪಿಸಲಿ.  ನೀವು ಕೊಡದಿದ್ದರೆ, ಸಿಎಂ ಆಗಿ ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿಯನ್ನು ವಜಾ ಮಾಡಬೇಕು.  ರಾಜಕಾರಣದಲ್ಲಿ ಬ್ಲ್ಯಾಕ್‌ಮೇಲ್ ಮಾಡುವವರು ಈಗ ಹೆಚ್ಚಾಗಿದ್ದಾರೆ.  ರಾಜಕಾರಣಿಗಳ ಸುತ್ತಮುತ್ತ ಇರುತ್ತಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌