ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರಿಗೆ ಕೇರಳ ಮಾದರಿಯಲ್ಲಿ ಗೌರವ ಧನ ಹೆಚ್ಚಳ, ಬಸ್ ಪಾಸ್ ಸೌಲಭ್ಯ ಮತ್ತು ಇತರ ಸೌಕರ್ಯಗಳನ್ನು ಸರಕಾರ ಒದಗಿಸುವವರೆಗೂ ವಿರಮಿಸುವುದಿಲ್ಲ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಅಮೋಘಸಿದ್ಧ ದೇವಸ್ಥಾನಕ್ಕೆ ಗ್ರಾ. ಪಂ. ಸದಸ್ಯರೂ ಸೇರಿದಂತೆ ಆಗಮಿಸಿದ 150 ಜನ ಪಾದಯಾತ್ರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾ. ಪಂ. ಸದಸ್ಯರ ಗೌರವಧನ ಹೆಚ್ಚಳದ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮೊದಲ ಬಾರಿಗೆ ನಾನು ಧ್ವನಿ ಎತ್ತಿದ್ದೇನೆ. ನಂತರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಎಲ್ಲ 25 ಜನ ವಿಧಾನ ಪರಿಷತ ಸದಸ್ಯರು ಪಕ್ಷಾತೀತವಾಗಿ ನನ್ನ ಹೋರಾಟ ಬೆಂಬಲಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಮಾಜಿ ಸದಸ್ಯ ಕೆ. ಎಸ್. ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೇವೆ. ಅಲ್ಲದೇ, ಈಗಾಗಲೇ ನಾನು ಏಳು ಬಾರಿ ಈ ನಿಟ್ಟಿನಲ್ಲಿ ಹೋರಾಟ ನಡೆಸಿದ ಪರಿಣಾಮ ಇತ್ತೀಚೆಗೆ ಸರಕಾರ ಗ್ರಾ. ಪಂ. ಸದಸ್ಯರ ಗೌರವಧನ ಹೆಚ್ಚಳ ಮಾಡಿದೆ. ಆದರೆ, ಇದು ಸಂತೃಪ್ತಿ ತಂದಿಲ್ಲ. ಬೇಡಿಕೆ ಈಡೇರಿವವರೆಗೂ ನಾನು ನಡೆಸುತ್ತಿರುವ ಹೋರಾಟ ನಿಲ್ಲುವುದಿಲ್ಲ ಎಂದು ಸುನೀಲಗೌಡ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ವಿಧಾನ ಪರಿಷತ ಸದಸ್ಯರಾಗಿ ಮೊದಲ ಬಾರಿಗೆ ದೊರೆತ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಸುನೀಲಗೌಡ ಪಾಟೀಲ ಜನಮೆಚ್ಚುವ ಕೆಲಸ ಮಾಡಿದ್ದಾರೆ. ಈಗಲೂ ತಮ್ಮೆಲ್ಲರ ಪರ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಎಲ್ಲರೂ ಕಾಯಾ, ವಾಚಾ, ಮನಸಾ ಬೆಂಬಲ ನೀಡಿ ಶಕ್ತಿ ತುಂಬೋಣ ಎಂದು ಹೇಳಿದರು.
ಇದಕ್ಕೂ ಮುಂಚೆ ಸುನೀಲಗೌಡ ಪಾಟೀಲ ಎರಡನೇ ಬಾರಿ ಎಂ.ಎಲ್.ಸಿ ಯಾಗಲಿ ಎಂದು ಹರಕೆ ಹೊತ್ತಿದ್ದ ಇಂಚಗೇರಿ ಗ್ರಾ. ಪಂ. ಸದಸ್ಯ ಮತ್ತು ಚಡಚಣ ಗ್ರಾ. ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷ ಆದಿಲ್ ವಾಲಿಕಾರ ಅವರು ಇಂಚಗೇರಿಯಿಂದ ಅರಕೇರಿ ಅಮೋಘಸಿದ್ಧ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸುವುದಾಗಿ ಹರಕೆ ಹೊತ್ತಿದ್ದರು. ಈಗ ಸುನೀಲಗೌಡ ಪಾಟೀಲ ಎರಡನೇ ಬಾರಿ ಎಂ.ಎಲ್.ಸಿ. ಆಗಿದ್ದಾರೆ. ಈ ಹರಕೆ ತೀರಿಸಲು ಬೆಳಿಗ್ಗೆ ಇಂಚಗೇರಿಯಿಂದ ಅಮೋಘಸಿದ್ಧ ದೇವಸ್ಥಾನದವರೆಗೆ ಅವರು 30 ಕಿ. ಮೀ. ಪಾದಯಾತ್ರೆ ನಡೆಸಿದರು. ಆದಿಲ್ ವಾಲಿಕಾರ ಕೈಗೊಂಡ ಪಾದಯಾತ್ರೆಯಲ್ಲಿ ಇಂಚಗೇರಿ, ದೇವರ ನಿಂಬರಗಿ, ನಂದರಗಿ, ಜಿಗಜೇವಣಿ ಮತ್ತು ಲೋಣಿ ಗ್ರಾ. ಪಂ. ಸದಸ್ಯರು ಸೇರಿದಂತೆ ಸುಮಾರು 150 ಜನ ಪಾಲ್ಗೋಂಡರು. ಮುಮ್ಮಟ್ಟಿಗುಡ್ಡದಲ್ಲಿರುವ ಅಮೋಘಸಿದ್ಧನ ದರ್ಶನ ಪಡೆದ ಪಾದಯಾತ್ರಿಗಳನ್ನು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡಟರಾದ ಸುರೇಶ ಘೋಣಸಗಿ, ಪ್ರೊ. ಎಂ. ಜಿ. ಯಂಕಂಚಿ, ಸಂತೋಷ ಬೆಳ್ಳೆಣ್ಣವರ, ಚಂದು ಡೆಂಗೆ, ಸುಭಾಷ ಮೋರೆ, ರಾಜು ಸಿಂಗೆ, ಮಹಾದೇವ ಜೀರಂಕಲಗಿ, ರವಿದಾಸ ಜಾಧವ, ಸಂತೋಷಗೌಡ ಪಾಟೀಲ, ಚಂದು ಪೂಜಾರಿ, ಮಹಾಂತೇಶ ಗುಡ್ಡದ, ಅಶೋಕ ಬಳ್ಳೊಳ್ಳಿ, ಅಶೋಕ ಬೆಳ್ಳುಂಡಗಿ, ವಾಸಿಮ್ ಮಣಿಯಾರ ಮುಂತಾದವರು ಉಪಸ್ಥಿತರಿದ್ದರು.