ಗಿನ್ನಿಸ್ ದಾಖಲೆಯ ಅಂಗವಾಗಿ ಸೈನಿಕ ಶಾಲೆಯ ಆವರಣದಲ್ಲಿ ಯೋಗಾಥಾನ- 25 ಸಾವಿರಕ್ಕೂ ಹೆಚ್ಚು ಜನ ಯೋಗಾಪಟುಗಳು ಭಾಗಿ

ವಿಜಯಪುರ: ದೇಹ ಮತ್ತು ಮನಸ್ಸನ್ನು ಸದೃಡಗೊಳಿಸಲು ಜೀವನದಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಸೈನಿಕ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಯೋಗಾಥಾನಗೆ ಚಾಲನೆ ನೀಡಿ ಮಾತನಾಡಿದ ಅವರು, ಯೋಗದಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನವಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಅಷ್ಟೇ ಅಲ್ಲದೇ ಅಂತರರಾಷ್ಟ್ರೀಯ ಮಟ್ಟಕ್ಕೂ ಯೋಗವನ್ನು ಪರಿಚಯಿಸಿದರು. ಪ್ರತಿ ವರ್ಷ ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ.  ಯೋಗದಿಂದ ಮನಶಾಂತಿ ಲಭಿಸುತ್ತದೆ.ಸಶಕ್ತ ಆರೋಗ್ಯಯುತ ರಾಷ್ಟ್ರ ನಿರ್ಮಾಣಕ್ಕಾಗಿ ಯೋಗವನ್ನು ಜೀವನದ ಭಾಗವಾಗಿ ರೂಢಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಯೋಗ ಪ್ರಚಲಿತದಲ್ಲಿದೆ ಎಂದು ಹೇಳಿದರು.

ವಿಜಯಪುರ ಸೈನಿಕ ಶಾಲೆಯ ಆವರಣದಲ್ಲಿ ನಡೆದ ಯೋಗಾಥಾನ್ ಗೆ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದರು

ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರು ಮಾತನಾಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಾಭಾಗಿತ್ವದಲ್ಲಿ ಕಳೆದ ಅಂತರರಾಷ್ಟ್ರೀಯ ದಿನದಂದು ಯೋಗಥಾನ್ ಕಾರ್ಯಕ್ರಮ ಪ್ರಾರಂಭಿಸಲಾಯಿತು.  ಕರ್ನಾಟಕವು 26ನೇ ರಾಷ್ಟ್ರೀಯ ಯುವಜನೋತ್ಸವ ಆತಿಥ್ಯವಹಿಸಿಕೊಂಡಿದೆ. ಯೋಗಾಥಾನ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಯೋಗ ಬೋಧಕರು ಹಾಗೂ 10 ಲಕ್ಷ ಯೋಗಪಟುಗಳಿಂದ ಹಾಗೂ ಯೋಗಾಸಕ್ತರಿಂದ ಗಿನ್ನಿಸ್ ವಿಶ್ವ ದಾಖಲೆ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.  ಈ ಮೂಲಕ ರಾಜ್ಯವನ್ನು ‘ಯೋಗ ಸಾಕ್ಷರತಾ ರಾಜ್ಯ’ವನ್ನಾಗಿ ಮಾಡಲಾಗುತ್ತಿದೆ.  ಈ ಹಿಂದೆ ರಾಜಸ್ಥಾನದಲ್ಲಿ ಒಂದು ಲಕ್ಷ ಅರವತ್ತು ಸಾವಿರ ಜನರು ಯೋಗಾಭ್ಯಾಸ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು ಎಂದು ಹೇಳಿದರು.

ಯೋಗಾಥಾನ್ ಮೂಲಕ ಯೋಗ ತರಬೇತಿದಾರರಿಗೆ, ಯೋಗಾಸಕ್ತರಿಗೆ ಪ್ರಯೋಜನೆ, ಯುವ ಸಮುದಾಯ ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರಿಗೂ ಆರೋಗ್ಯ ಪರಿಕಲ್ಪನೆಯು ಸಾಕಾರಗೊಳಿಸುವುದು. ಉದ್ಯೋಗದ ಅವಕಾಶಗಳ ಅರಿವು ಮೂಡಿಸುವ ಉದ್ದೇಶ ಕಾರ್ಯಕ್ರಮ ಹೊಂದಿದೆ. ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಯೋಗ ಅಗತ್ಯವಾಗಿದೆ. ವಿಜಯಪುರದ ಸೈನಿಕ ಶಾಲೆಯ ಆವರಣದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಯೋಗಪಟುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡು ಯೋಗಾಭ್ಯಾಸದಲ್ಲಿ ಭಾಗವಹಿಸಿರುವುದು ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ.  2022 ರ ಜೂನ್ 21ರಂದು 8ನೇ ವಿಶ್ವ ಯೋಗ ದಿನಾಚರಣೆಯನ್ನು ಗೋಳಗುಮ್ಮಟದ ಆವರಣದಲ್ಲಿ ಹತ್ತು ಸಾವಿರ ಯೋಗಪಟುಗಳು ಹಾಗೂ ಯೋಗಾಸಕ್ತರಿಂದ ಸಂಭ್ರಮದಿಂದ ಯಶಸ್ವಿಯಾಗಿ ಆಚರಿಸಿರುವುದು ಅವಿಸ್ಮರಣೀಯವಾಗಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದರು.

 

 

ಎಸ್ಪಿ ಎಚ್. ಡಿ. ಆನಂದಕುಮಾರ್ ಮಾತನಾಡಿ, ಉತ್ತಮ ಜೀವನ ನಿರ್ವಹಣೆಗೆ ಹಾಗೂ ಮನಸ್ಸಿನ ಏಕಾಗ್ರತೆಗೆ ಯೋಗ ಸಹಾಯಕಾರಿ. ಈ ನಿಟ್ಟಿನಲ್ಲಿ ಯುವ ಜನತೆ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು.  ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಆಚರಿಸಲಾಗುತ್ತದೆ.  ಗಿನ್ನಿಸ್ ದಾಖಲೆ ನಿರ್ಮಿಸುವ ಕಾರ್ಯಕ್ರಮ ಯಶಸ್ವಿ ಹೆಜ್ಜೆಯನ್ನಿಟ್ಟಿದೆ. ನಮ್ಮ ಜಿಲ್ಲೆ ಹೆಚ್ಚು ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದರು

ಈ ಸಂದರ್ಭ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ,ಎನ್ ಸಿಸಿ ಬಟಾಲಿಯನ್ನನ ಕಮಾಂಡೆಂಟ್ ಕರ್ನಲ್ ರಶಪಾಲ್ ಸಿಂಗ್ ಎನ್ ಸಿಸಿ ಹಿರಿಯ ಅಧಿಕಾರಿ ಲೆಪ್ಟಿನೆಂಟ್ ಕರ್ನಲ್ ಗಿರೀಶ, ಮಿರಾಕಲ್ ಬ್ರಿಕ್ ಸಂಸ್ಥೆಯ ಪ್ರತಿನಿಧಿ ಧಾರವಾಡಕರ್, ರಾಷ್ಟ್ರಪ್ರಶಸ್ತಿ ವಿಜೇತ ಡಾ. ಜಾವೇದ್ ಜಮಾದಾರ, ಆಯುಷ್ ಟಿವಿಯ ನೋಡಲ್ ಅಧಿಕಾರಿ ಶ್ರೀನಿವಾಸ ಗುರುಜಾಲ, ಯೋಗಥಾನ್ ಕಾರ್ಯಕ್ರಮ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಎನ್ ಸಿ ಸಿ ಹಾಗೂ ಸ್ಕೌಟ್ಸ್ ಗೈಡ್ಸ್, ಯೋಗ ತರಬೇತಿದಾರರು, ಯೋಗಪಟುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌