ವಿಜಯಪುರ: ಕೊಲೆ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿ ಬಸವನಾಡು ವೆಬ್ ಗೆ ಲಭ್ಯವಾಗಿದ್ದು, ಸಚಿವ ಮುರುಗೇಶ ನಿರಾಣಿ ಹೆಸರು ಹೇಳದೇ ಪತ್ರ ಬರೆದು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಕಾರು ಚಾಲಕನೊಬ್ಬನ ಕೊಲೆಯಾಗಿದ್ದು, ಈ ಕುರಿತು ತನಿಖೆಯಾದರೆ ಸತ್ಯ ಹೊರಬರಲಿದೆ ಎಂದು ಶನಿವಾರ ಸಚಿವ ಮುರುಗೇಶ ನಿರಾಣಿ ಆರೋಪಿಸಿದ್ದರು. ಈ ಆರೋಪದ ಸಂದರ್ಭದಲ್ಲಿ ನಿರಾಣಿ ಕೂಡ ಯತ್ನಾಳ ಹೆಸರು ಹೇಳದೇ ಗಂಭೀರ ಆರೋಪ ಮಾಡದ್ದರು.
ಈ ಹಿನ್ನೆಲೆಯಲ್ಲಿ ಯತ್ನಾಳ ಕೂಡ ಈಗ ಈ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಯತ್ನಾಳ, ವಿಜಯಪುರದ ಒಬ್ಬ ಕಾರು ಚಾಲನಕ ಹತ್ಯೆಯಾಗಿರುವ ಬಗ್ಗೆ ತಮ್ಮ ಸಂಪುಟ ದರ್ಜೆ ಸಚಿವರು ಮಾಡಿರು ಆರೋಪದ ಕುರಿತು ಸಿಬಿಐ ತನಿಖೆಗೆ ಒಳಬಡಿಸಿ ಸತ್ಯಾಸತ್ಯತೆ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
14.01.2023 ರಂದು ತಮ್ಮ ಸಚಿವ ಸಂಪುಟದ ಕ್ಯಾಬಿನೆಟ್ ದರ್ಜೆಯ ಸಚಿವರೊಬ್ಬರು, ವಿಜಯಪುರದ ಯಾರೋ ಒಬ್ಬ ಕಾರು ಚಾಲಕನ ಕೊಲೆ ಮಾಡಿರುವ ಬಗ್ಗೆ ಮಾಧ್ಯಮದ ಮುಂದೆ ಗಂಭೀರ ಆರೋಪದ ಹೇಳಿಕೆ ನೀಡಿದ್ದು, ಇಂಥ ಸುಳ್ಳು ಆರೋಪದಿಂದ ಸರಕಾರಕ್ಕೆ ಮತ್ತು ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ದೇಶದ ಜನತೆಗೆ ಎಲ್ಲ ಸತ್ಯಾಸತ್ಯತೆ ಗೊತ್ತಾಗಬೇಕು. ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ನಮ್ಮದೇ ಆದ ಸರಕಾರವಿರುವುದರಿಂದ, ಸತ್ಯಾಸತ್ಯತೆ ತಿಳಿಯಲು, ತಕ್ಷಣ 24 ಗಂಟೆಯಲ್ಲಿಯೇ ಸದರಿ ಈ ಪ್ರಕರಣದ ಕುರಿತು, ತಾವು ಸಿಬಿಐ ತನಿಖೆಗೆ ಒಳಪಡಿಸಲು ಶೀಘ್ರ ಶಿಫಾರಸು ಮಾಡಬೇಕೆಂದು ಒತ್ತಾಯಿಸುತ್ತೇನೆ.
ಈ ರೀತಿ ಸುಳ್ಳು ಆರೋಪ ಮಾಡಿ, ಜನತೆಗೆ ತಪ್ಪು ಸಂದೇಶ ನೀಡುವ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಯತ್ನಾಳ ಪತ್ರದಲ್ಲಿ ಆಗ್ರಹಿಸಿದ್ದಾರೆ.