ವಿಜಯಪುರ: ದೆಹಲಿಯಲ್ಲಿ ನಡೆದಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನನ್ನ ಪರವಾಗಿ ನಿರ್ಣಯ ಬರಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮಗೆ ನೋಟೀಸ್ ನೀಡಲಾಗಿದೆ ಎಂಬ ವದಂತಿಗಳ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದರು.
ತಮಗೆ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ನೊಟೀಸ್ ಕೊಡುವಂಥ ಅಪರಾಧವನ್ನು ನಾನೇನೂ ಮಾಡಿಲ್ಲ. ಕೆಲವರು ಉಹಾಪೋಹಳನ್ನು ಮಾಡುತ್ತಾರೆ. ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಯಾವುದಕ್ಕೂ ನಾನು ಭಯ ಪಡುವುದಿಲ್ಲ. ಅಂಜುವುದಿಲ್ಲ. ನಾನು ಏನು ಮಾತನಾಡಿದ್ದೇನೆ ಸತ್ಯವನ್ನು ಮಾತನಾಡಿದ್ದೇನೆ. ಪಕ್ಷದ ಹಿತದೃಷ್ಠಿಯಿಂದ ಮಾತನಾಡಿದ್ದೇನೆ. ಕರ್ನಾಟಕದಲ್ಲಿ ಭವಿಷ್ಯದಲ್ಲಿ ಬಿಜೆಪಿಗೆ 150 ಸೀಟುಗಳು ಬರಬೇಕು ಎಂಬ ಉದ್ದೇಶದಿಂದ ಮಾತನಾಡಿದ್ದೇನೆ ಎಂದು ಅವರು ಹೇಳಿದರು.
ಈ ರೀತಿ ಸುಳ್ಳು ಸುದ್ಧಿಗಳನ್ನು ಹರಡಿಸಲಾಗುತ್ತಿದೆ. ನನ್ನ ವಿರೋಧಿಗಳಿಗೆ ಭಯವಿದೆ. ಯಾವುದೇ ರೀತಿಯ ಕ್ರಮ ಆಗುತ್ತಿಲ್ಲ. ಏನಾದರೂ ಮಾಡಿ ಭಯ ಹುಟ್ಟಿಸಬೇಕು ಎಂಬುದು ವಿರೋಧಿಗಳ ತಂತ್ರವಾಗಿದೆ. ಯಾವ ಭಯಕ್ಕೂ ಅಂಜುವ ಮಗ ನಾನಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರ ಮತ್ತು ತಾವು ಆಡಿರುವ ಮಾತುಗಳಿಗೆ ಸಂಬಂಧಿಸಂತೆ ನಿನ್ನೆ ಹೈಕಮಾಂಡಿನ ಅತ್ಯಂತ ವರಿಷ್ಠರು ನನ್ನ ಜೊತೆ ಮಾತನಾಡಿದ್ದಾರೆ. ಮೀಸಲಾತಿ, ಸಂಘಟನೆ ಸೇರಿದಂತೆ ಎಲ್ಲ ವಿಚಾರಗಳನ್ನು ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದೆ. ನನಗೆ ಅನಿಸುವಂತೆ ಬಹಳ ದೊಡ್ಡ ನಿರ್ಣಯಗಳು ಹೊರ ಬರಬಹುದು. ಮುಂದಿನ ಮಾರ್ಚ್, ಏಪ್ರಿಲ್, ಮೇ ನಲ್ಲಿ ದೇಶದ ನಾನಾ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಸರಕಾರದಲ್ಲಿ ಮತ್ತು ಸಂಘಟನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ನನ್ನ ಪರವಾಗಿ ಒಳ್ಳೆಯ ನಿರ್ಣಯ ಬರಬಹುದು ಎಂಬ ವಿಶ್ವಾಸವಿದೆ ಎಂದು ಯತ್ನಾಳ ಹೇಳಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ನನ್ನ ಜೊತೆ ಮಾತನಾಡಿಲ್ಲ ಎಂದು ತಿಳಿಸಿದ ಅವರು, ಬಿಜೆಪಿ ಹೈಕಮಾಂಡ್ ತಮ್ಮ ಪರ ಮೃದು ಧೋರಣೆ ಅನುಸರಿಸುತ್ತಿದೆ ಎಂಬ ಆರೋಪದ ಕುರಿತೂ ಪ್ರತಿಕ್ರಿಯ ನೀಡಿದರು. ನನ್ನ ಪರವಾಗಿ ಹೈಕಮಾಂಡ್ ಸಾಫ್ಟ್ ಕಾರ್ನರ್ ತೋರಿಸುತ್ತಿಲ್ಲ. ಏಕೆಂದರೆ ಯತ್ನಾಳ ಮಾತನಾಡಿದ್ದು ಪಕ್ಷ ವಿರೋಧಿಯಲ್ಲ. ವ್ಯಕ್ತಿಯ ವಿರುದ್ಧ. ಭ್ರಷ್ಟಾಚಾರದ ವಿರುದ್ಧ. ವಂಶಾಡಳಿತ, ಪಾರಂಪರಿಕ ಕೆಟ್ಟ ಸಂಸ್ಕೃತಿಯ ವಿರುದ್ಧ ಮಾತನಾಡಿದ್ದಾರೆ ಎಂಬ ಹೈಕಮಾಂಡಿಗಿದೆ. ನಾನು ನೀಡುತ್ತಿರುವ ಹೇಳಿಕೆಗಳಿಂದ ಪಕ್ಷಕ್ಕೆ ದೊಡ್ಡ ಲಾಭವಾಗಲಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಒಂದು ಮನೆಗೆ ಒಂದೆ ಟಿಕೇಟ್. ವಂಶವಾದ ಇರಬಾರದು. ಬಿಜೆಪಿಯಲ್ಲಿ ಅಪ್ಪ, ಮಗ, ಅಣ್ಣ, ತಮ್ಮ, ಎಲ್ಲರೂ ಎಂಎಲ್‌ಎ, ಎಂ ಎಲ್ ಸಿ, ಆ ಪಕ್ಷದಲ್ಲಿಯೂ ಶಾಸಕ, ಈ ಪಕ್ಷದಲ್ಲಿಯೂ ಎಂಎಲ್ಎ ಆಗಬಾರದು. ಗುಜರಾತಿನಲ್ಲಿ ಹೇಗೆ ಇತ್ತೀಚಿನ ಚುನಾವಣೆಯಲ್ಲಿ ಕ್ಲೀನ್ ಮಾಡಿದರೋ ಅದೇ ರೀತಿ ಇಲ್ಲಿಯೂ ವಂಶಾಡಳಿತವನ್ನು ಕ್ಲೀನ್ ಆಗಲಿದೆ. ಕರ್ನಾಟಕದಲ್ಲಿ ಕ್ಲೀನ್ ಮಾಡಿದ ಮೇಲೆ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಅವರು ತಿಳಿಸಿದರು.
ನಾನು ಯಾವುದೇ ಆಕಾಂಕ್ಷಿಯಲ್ಲ. ನಾನು ಮಂತ್ರಿಗಿರಿ ಕೇಳಿಲ್ಲ, ಮುಖ್ಯಮಂತ್ರಿ ಸೀಟು ಕೇಳಿಲ್ಲ. ನಾನು ಕರ್ನಾಟಕದಲ್ಲಿ ಮಂತ್ರಿಗಿಂತ ಫವರ್ ಪುಲ್ ಆಗಿದ್ದೀನಿ. ಎಲ್ಲ ಮಂತ್ರಿಗಳು ನನ್ನ ಮಾತು ಕೇಳುತ್ತಾರೆ. ನಾನು ಯಾವುದನ್ನು ನಿರೀಕ್ಷೆ ಮಾಡಲ್ಲ. ಓರ್ವ ಸಿಎಂ ನಂತೆ ನಾನು ಶಾಸಕನಾಗಿಯೇ ಎಲ್ಲ ಸಚಿವರ ಮೇಲಿದ್ದೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.