ವಿಜಯಪುರ: ನಗರದ ಪ್ರತಿಷ್ಠಿತ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 21ನೇ ಶಾಂತಿಸಂಗಮ ಶಾಂತಿನಿಕೇತನ ಸಾಂಸ್ಕತಿಕ ಉತ್ಸವ 2022-23ನೇ ನಡೆಯಿತು.
ಈ ಕಾರ್ಯಕ್ರಮವನ್ನು ವಿಧಾನ ಪರಿಷತ ಸದಸ್ಯ ಹಣಮಂತ ನಿರಾಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಜಿಲ್ಲೆಯ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದ್ದು, ಮಕ್ಕಳಲ್ಲಿ ಶಿಸ್ತು, ನೈತಿಕತೆಯನ್ನು ಕಲಿಸಿತ್ತ ಬಂದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಜ್ಞಾನ ಸಂಪತ್ತನ್ನು ನೀಡುತ್ತಿರುವ ಈ ಸಂಸ್ಥೆ, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುತ್ತಿದೆ. ಇಲ್ಲಿನ ಶಿಕ್ಷಕರು ಕೇವಲ ಪಾಠವನ್ನು ಬೋಧಿಸುವುದಿಲ್ಲ. ಜೊತೆಗೆ ರಾಷ್ಟ್ರನಿರ್ಮಾಣದ ವಿಚಾರಗಳನ್ನು ಮಕ್ಕಳಲ್ಲಿ ತುಂಬುತ್ತಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಹಲವಾರೂ ಕ್ಷೇತ್ರಗಳಲ್ಲಿ ಉನ್ನತವಾದ ಸಾಧನೆಯನ್ನು ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಸಂಸ್ಥೆಯು ಮುಂದೆ ಅತ್ಯುತ್ತಮವಾದ ಸಂಸ್ಥೆ ಬೆಳೆದು ಮಕ್ಕಳಿಗೆ ದಾರಿದೀಪವಾಗಬೇಕು ಎಂದು ಹಾರೈಸಿದರು.
ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ ಮಾತನಾಡಿ, ನುಡಿಯಲ್ಲಿ ವಿದ್ಯಾರ್ಥಗಳ ಕಲಿಯುವ ಆಸಕ್ತಿಗಳು ಹೊಸತನಕ್ಕೆ ತೆರೆದು ಕೊಳ್ಳುತ್ತಿವೆ. ಆದ ಕಾರಣ ನಮ್ಮ ಸಂಸ್ಥೆಯು ಹೊಸತನಕ್ಕೆ ಅನುಗುಣವಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿ, ಅವರಲ್ಲಿ ಜ್ಞಾನಾರ್ಜನೆಯನ್ನು ಮಾಡಿಸುತ್ತ ಬಂದಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಸ್ವಾತಂತ್ರ್ಯ, ಇತರರಿಗೆ ಗೌರವ, ಸಾಮಾಜಿಕ ಜವಾಬ್ದಾರಿ, ಸಮಾನತೆ, ಸೌಜನ್ಯ ಮೊದಲಾದ ಗುಣಗಳನ್ನು ಬೆಳೆಸುತ್ತಿದೆ. ಪಾಲಕರು 21 ವರ್ಷಗಳಿಂದ ಸಂಸ್ಥೆಯ ಎಲ್ಲ ಚಟುವಟಿಕೆಗಳಿಗೆ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀಡುತ್ತಿದ್ದು, ಮುಂದೆನೂ ಸಹ ಇದೇ ರೀತಿ ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಶೀಲಾ ಎಸ್. ಬಿರಾದಾರ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನೆರವೇರಿಸಿದರು. ಮುಖಂಡರಾದ ಸಿದ್ದಣ್ಣ ದೇಸಾಯಿ, ವಿವೇಕ ಡಬ್ಬಿ, ಅಶೋಕ ಕಬಾಡೆ, ನಾನಾ ಸ್ಪರ್ಥೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಎಸ್. ಎಸ್. ಎಲ್. ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಕಳಸಗೊಂಡ, ಶರತ ಬಿರಾದಾರ, ಭರತ ಬಿರಾದಾರ, ದಿವ್ಯಾ ಎಸ್ ಬಿರಾದಾರ, ನಿಖಿಲ ಶೇಖದಾರ, ರಿಜೇಶ್ ಪಿ. ಎನ್, ಎಚ್. ಎಂ. ಕೋಲಾರ, ರಂಗನಾಥ ವೈ. ಆರ್, ಶಾಲಾ ನಾಯಕಿ ಅನುಷ್ಕಾ ಗಜಾಕೋಶ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು.
ಪ್ರಾಚಾರ್ಯ ಶ್ರೀಧರ ಕುರಬೆಟ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಶಾಲಾ ನಾಯಕಿ ಶಿಕ್ಷಕಿ ಶ್ರೀದೇವಿ ಜೋಳದ ಸ್ವಾಗತಿಸಿದರು. ಸವಿತಾ ಪಾಟೀಲ ನಿರೂಪಿಸಿದರು. ಜ್ಯೋತಿ ಅಣೆಪ್ಪನವರ ವಂದಿಸಿದರು.
ನಂತರ ಸುಮಾರು ಮೂರು ಗಂಟೆಗಳ ಕಾಲ ನಡೆದ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಮಕ್ಕಳು ಜಿಲ್ಲೆಯ, ನಾಡಿನ ಹಾಗೂ ದೇಶದ ಸಂಸ್ಕತಿಯನ್ನು ಬಿಂಬಿಸುವ ಜಾನಪದ, ಭಕ್ತಿಗೀತೆ ಹಾಗೂ ಚಲನಚಿತ್ರ ಗೀತೆಗಳ ಹಾಡಿಗೆ ಹೆಜ್ಜೆ ಹಾಕಿದರು. ಶಿಕ್ಷಕರಾದ ಪ್ರವೀಣ ಗೆಣ್ಣೂರ, ಸುರೇಖಾ ಪಾಟೀಲ, ಎ. ಎಚ್. ಸಗರ, ಈಶ್ವರ, ಅಶ್ವೀನ, ಶಶಿಧರ, ಜುಬೇರ, ಅನೀಲ ಬಾಗೇವಾಡಿ, ಮಧುಮತಿ, ಸರೋಜಾ, ತಬಸ್ಸುಮ್, ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.