ವಿಜಯಪುರ: ಬಿಜೆಪಿಯಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಮಾನದಂಡ ಅನುಸರಿಸಿದರೆ ಅಪ್ಪ ಒಬ್ಬರೇ ನಿಲ್ತಾರೆ. ಸಾಮರ್ಥ್ಯ ಪರಿಗಣಿಸಿ ಇಬ್ಬರಿಗೆ ನೀಡಿದರೆ ನಾನೂ ಕೂಡ ಸ್ಪರ್ಧಿಸುತ್ತೇನೆ. ಇದೆಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪುತ್ರ ಮತ್ತು 2018ರಲ್ಲಿ ನಾಗಠಾಣ(ಮೀ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಗೋಪಾಲ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆಯೇ ಹೊರತು ಯಾವುದೇ ಪದಾಧಿಕಾರಿಯಾಗಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ತಿಳಿಸಿದರು.
ನಾಗಠಾಣ(ಮೀ) ಕ್ಷೇತ್ರದಿಂದ ಬಿಜೆಪಿ ಯಾರಿಗೆ ಟಿಕೇಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ. ಎರಡು ವರ್ಷಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಮತಕ್ಷೇತ್ರದಲ್ಲಿ ಸುತ್ತಾಡಲು ಸಾಧ್ಯವಾಗಿರಲಿಲ್ಲ. ಆದರೂ, ಕಾರ್ಯಕರ್ತರೊಂದಿಗೆ ಸರತ ಸಂಪರ್ಕದಲ್ಲಿದ್ದೇನೆ. ಅವರ ಕೆಲಸ ಕಾರ್ಯಗಳಿಗೆ ಸ್ಪಂದಿಸಿದ್ದೇನೆ. ಈಗ ಮತಕ್ಷೇತ್ರಾದ್ಯಂತ ಸಂಚರಿಸುತ್ತಿದ್ದೇನೆ. ಈ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಲು ಅಗತ್ಯ ತಯಾರಿ ಮಾಡಿಕೊಂಡಿದ್ದೇನೆ. ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಸಂಸದ ರಮೇಶ ಜಿಗಜಿಣಗಿ ಈಗಾಗಲೇ ವಿಧಾನ ಸಭೆ ಚುನಾವಣೆ ಸ್ಪರ್ಧೆಯ ಕುರಿತು ತಮ್ಮ ನಿಲುವನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಹೈಕಮಾಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಅವರು ತಿಳಿಸಿದರು.
ಆಡಿಯೋ ಬಹಿರಂಗ ವಿಚಾರ
ಇತ್ತೀಚೆಗೆ ವೈರಲ್ ಆಗಿದ್ದ ಆಡಿಯೋ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಹಾಗೂ ಬಿಜೆಪಿ ಕಾರ್ಯಕರ್ತ ಶಿವಾನಂದ ಮಖಣಾಪುರ ಮಧ್ಯೆ ಎರಡು ವರ್ಷಗಳ ಹಿಂದೆ ಜಿ. ಪಂ. ಚುನಾವಣೆ ಸಂಬಂಧ ನಡೆದ ಸಂಭಾಷಣೆ ಅದಾಗಿದೆ. ಈಗ ಅದನ್ನು ಯಾಕೆ ವೈರಲ್ ಮಾಡಿದ್ದಾರೋ ಗೊತ್ತಿಲ್ಲ. ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ. ಬಿಜೆಪಿ ಜಿಲ್ಲಾ ಘಟಕ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅಭಿವೃದ್ಧಿಗೆ ಅಡ್ಡಗಾಲು ಆರೋಪ ವಿಚಾರ
ನಾಗಠಾಣ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಚಿವ ಗೋವಿಂದ ಕಾರಜೋಳ ಅಡ್ಡಗಾಲು ಹಾಕುತ್ತಿದ್ಸಾರೆ ಎಂದು ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮಾಡಿರುವ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇವಾನಂದ ಚವ್ಹಾಣ ಅವರು ದಾಖಲೆ ಸಮೇತ ಬರಲಿ. ಮಾಧ್ಯಮಗಳ ಮುಂದೆಯೇ ಉತ್ತರಿಸುತ್ತೇನೆ. ಆರೋಪ ಮಾಡುವುದು ಪ್ರತಿಪಕ್ಷಗಳ ಕೆಲಸವಾಗಿದೆ ಎಂದು ಡಾ. ಗೋಪಾಲ ಗೊವಿಂದ ಕಾರಜೋಳ ಟೀಕಿಸಿದರು.
ನಾಳೆ ಶನಿವಾರ ಜೆ ಪಿ ನಡ್ಡಾ ವಿಜಯಪುರ ಜಿಲ್ಲಾ ಪ್ರವಾಸ
ಇದೇ ವೇಳೆ, ನಾಳೆ ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಗೋಪಾಲ ಗೋವಿಂದ ಕಾರಜೋಳ ತಿಳಿಸಿದರು.
ಶನಿವಾರ ಬೆಳಿಗ್ಗೆ ನಡ್ಡಾ ಅವದು ಹೆಲಿಕಾಪ್ಟರ್ ಮೂಲಕ ಮೂಲಕ ವಿಜಯಪುರಕ್ಕೆ ಆಗಮಿಸಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಲಬುರಗಿ ಏರ್ ಪೋರ್ಟ್ ಗೆ ಆಗಮಿಸಲಿರುವ ಅವರು,
ಬೆಳಿಗ್ಗೆ 11. 30 ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರ ನಗರದ ಸೈನಿಕ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಬೆ. 11. 40ಕ್ಕೆ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಆಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ಚಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ನಂತರ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ನಗರದ ವಾರ್ಡ್ ನಂಬರ್ 12 ರ ಬಿ ಎಲ್ ಡಿ ಇ ಎಂಜೀನಿಯರುಂಗ್ ಕಾಲೇಜ್ ಬಳಿ ಮೈದಾನದಲ್ಲಿ ಮನೆ ಮನೆ ಭೇಟಿ ಹಾಗೂ ಸದಸ್ಯತ್ವ ಅಭಿಮಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಬಳಿಕ ವಾರ್ಡ್ ನಂಬರ್ 10 ರಲ್ಲಿ ಗೋಡೆ ಬರಹ ಹಾಗೂ ಫಲಾನುಭವಿಗಳ ಮನೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಐದು ಜನ ಫಲಾನುಭವಿಗಳ ಮನೆಗೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನ 12. 45 ಕ್ಕೆ ಹೆಲಿಕಾಪ್ಟರ್ ಮೂಲಕ ಸಿಂದಗಿಯತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಗೋಪಾಲ ಗೋವಿಂದ ಕಾರಜೋಳ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಪ್ರಭಾರಿ ಚಂದ್ರಶೇಖರ ಕವಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ಜಿಲ್ಲಾ ವಕ್ತಾರ ಸುರೇಶ ಬಿರಾದಾರ, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಮುಖಂಡ ಕೃಷ್ಣಾ ಗುನ್ಹಾಳಕರ ಉಪಸ್ಥಿತರಿದ್ದರು.
ಸಿಂದಗಿಯಲ್ಲಿ ಜೆ. ಪಿ. ನಡ್ಡಾ ಕಾರ್ಯಕ್ರಮ
ಸಿಂದಗಿಯಲ್ಲಿ ವಿಜಯಪುರ ರಸ್ತೆಯಲ್ಲಿ ಅಯೋಜನೆ ಮಾಡಿರುವ ಸಾರ್ವಜನಿಕ ಸಭೆಯಲ್ಲಿ ಜೆ. ಪಿ. ನಡ್ಡಾ ಭಾಗವಹಿಸಲಿದ್ದಾರೆ. ಅವರ ಜೊತೆ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಡಾ.ಸಿ. ಎನ್. ಅಶ್ವಥ ನಾರಾಯಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು
ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಜಿಲ್ಲೆಯ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು, ಪದಾಧಿಕಾರಿಗಳು ನಿಗಮ ಮಂಡಳಿ ಅಧ್ಯಕ್ಷರು ಉಪಸ್ಥಿತ ಇರಲಿದ್ದಾರೆ. ಸಾರ್ವಜನಿಕ ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ವು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ನಾಗಠಾಣ, ಇಂಡಿ, ದೇವರ ಹಿಪ್ಪರಗಿ ಹಾಗೂ ಸಿಂದಗಿ ನಾಲ್ಕು ವಿಧಾನ ಸಭೆ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ 2023 ರ ವಿಧಾನ ಸಭೆ ಚುನಾವಣೆಗೆ ಈಗಲೇ ರಣಕಹಳೆ ಮೊಳಗಿಸಲು ಕೇಸರಿ ಪಡೆ ಸಜ್ಜಾಗಿದೆ ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದ್ದಾರೆ.