ಸಿಎಂ ಆಗಿದ್ದರೂ ಸರಕಾರಿ ಬಂಗಲೆ ನೀಡಿರಲಿಲ್ಲ- ಸಿದ್ಧರಾಮಯ್ಯ ಹಾಡಿದ್ದೆ ಹಾಡೋ ಕಿಸಬಾಯಿ ದಾಸ- ಎಚ್ ಡಿ ಕೆ ವಾಗ್ದಾಳಿ

ವಿಜಯಪುರ: ಸಮ್ಮಿಶ್ರ ಸತಕಾರದಲ್ಲಿ ನಾನು ಸಿಎಂ ಆಗಿದ್ದಾಗ ಸರಕಾರಿ ಬಂಗಲೆ ನೀಡಿರಲಿಲ್ಲ.  ಹೀಗಾಗಿ ವೆಸ್ಟೆಂಡ್ ಹೋಟೇಲಿನಲ್ಲಿರುತ್ತಿದ್ದೆ ಎಂದು ಮಾಜಿ‌ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾನಾಡಿದ ಅವರು, ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಹಾಡಿದ್ದೇ ಹಾಡೋ ಕಿಸಬಾಯಿ ದಾಸ್. ಕಾಂಗ್ರೆಸ್ ಕೈಗೊಂಡಿರುವ ಪ್ರಜಾಧ್ವನಿ ಹೆಸರನ್ನು ಕಾಂಗ್ರೆಸ್ ಧ್ವನಿ ಎಂದು ಬದಲಾಯಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ಧರಾಮಯ್ಯ ಅವರು ಜೆಡಿಎಸ್ ನ್ನು ಬಿಜೆಪಿ ಬಿ ಟೀಮ್ ಎಂದು ಪದೇ ಪದೇ ಆರೋಪಿಸುತ್ತಾರೆ. ಈ ಆರೋಪ ಮಾಡುವುದನ್ನು ಬಿಟ್ಟರೆ ಜೆಡಿಎಸ್ ವಿರುದ್ಧ ಚರ್ಚೆ ಮಾಡಲು ಅವರ ಬಳಿ ಯಾವುದೇ ಸರಕು ಇಲ್ಲ. ಇದನ್ನು ಹೇಳಿಕೊಂಡೆ ಅವರು ರಾಜಕೀಯ ಜೀವನ ಮಾಡಬೇಕಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ನಾನು ಮುಖ್ಯಮಂತ್ರಿ ಆಗಿದ್ದರಿಂದಲೇ ಬಡ ಜನರಿಗೆ ರೂ. 109 ಕೋಟಿ ಹಣವನ್ನು ಚಿಕಿತ್ಸೆಗಾಗಿ ನೀಡಿದ್ದೇನೆ. ರೈತರ ತಲಾ ರೂಮ 25000 ಸಾಲ ಮನ್ನಾ ಮಾಡಿದ್ದೇನೆ. ಜನರ ಹತ್ತಿರ ನಾನು ಇರದಿದ್ದರೆ ಅದನ್ನು ನೀಡಲು ಸಾಧ್ಯವಿತ್ತೆ ಎಂದು ಮಾಜಿ‌ ಮುಖ್ಯಮಂತ್ರಿ ಪ್ರಶ್ನಿಸಿದರು.

ನನ್ನ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ. ನೀವು ಮುಖ್ಯಮಂತ್ರಿಯಾಗಿದ್ದಾಗ ಸಂಜೆ 6 ಗಂಟೆಯ ನಂತರ ಯಾರ ಕೈಗಾದ್ರೂ ಸಿಗುತ್ತಿದ್ದೀರಾ? ಎಂದು ಎಚ್ ಡಿ ಕೆ ಪ್ರಶ್ನಿಸಿದರು.

ಮಧ್ಯಾಹ್ನ 1ಕ್ಕೆ ಊಟಕ್ಕೆ ಅಂತ ಹೋದವರು ಯಾರಿಗೂ ಸಿಗುತ್ತಿರಲಿಲ್ಲ. ನಾನು ಜನಗಳ ಮಧ್ಯೆ ಇರುತ್ತಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ. ಜನರ ಮಧ್ಯೆ ಇರುತ್ತೇನೆ. ನಾನು ಹೇಗೆ ಇರಬೇಕು ಎಂಬುದನ್ನು ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ. ಪಂಚರತ್ನ ಯಾತ್ರೆಯ ಬಗ್ಗೆ ನೀವು ಲೋಗುವಾಗಿ ಮಾತನಾಡಿದರೆ ಜನತೆ ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಜನರ ಕಷ್ಟ, ಹಳ್ಳಿಗಳ ಬದುಕನ್ನು ನೋಡಿ ಈ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇವೆ. ಬಿಜೆಪಿ ಅವರಿಗೂ ಇದನ್ನೇ ಹೇಳಬೇಕು. ಹಣ, ಅಧಿಕಾರ ಬಲ ಬಿಟ್ಟು ಚುನಾವಣೆ ಮಾಡಿ ಎಂದು ಯಡಿಯೂರಪ್ಪನವರಿಗೆ ಹೇಳಿದ್ದೆ. ಆದರೆ ಅವರೂ ಅದನ್ನೇ ಮಾಡಿದ್ದಾರೆ. ‌ ಎರಡೂ ರಾಜಕೀಯ ಪಕ್ಷಗಳ ನರವಳಿಕೆಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ವ್ಯಂಗ್ಯ

ಕಾಂಗ್ರೆಸ್ ಕೈಗೊಂಡಿರುವ ಪ್ರಜಾ ಧ್ವನಿ ಯಾತ್ರೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಈ ಮೊನ್ನೆ ಬಾಗಲಕೋಟೆಗೆ ಹೋಗಿದ್ರಲ್ಲ. ಅಲ್ಲಿ ಪ್ರಜೆಗಳ ಬಗ್ಗೆ ಏನು ಮಾತನಾಡಿದ್ದೀರಿ? ಎಂದು ಅವರು ಪ್ರಶ್ನಿಸಿದರು.

ಅದು ಪ್ರಜಾಧ್ವನಿ ಅಲ್ಲ. ಬಕಾಂಗ್ರೆಸ್ ಧ್ವನಿ ಎಂದು ಹೇಳಿಕೊಳ್ಳಿ. ಪ್ರಜೆಗಳ ಸಮಸ್ಯೆಗಳ ಬಗ್ಗೆ ನೀವು ಚರ್ಚೆನೆ ಮಾಡುತ್ತಿಲ್ಲ. ಪ್ರಜೆಗಳ ಪರ ಪ್ರಜಾ ಧ್ವನಿ ಹೆಸರನ್ನು ಇಟ್ಟುಕೊಂಡಿದ್ದೀರಿ. ಅದರ ಬದಲು ಕಾಂಗ್ರೆಸ್ ಧ್ವನಿ ಎಂದು ಬದಲಾಯಿಸಿಕೊಂಡರೆ ಒಳ್ಳೆಯದು. ಯಾವ ಪುಷಾರ್ಥಕ್ಕಾಗಿ ಆ ಹೆಸರನ್ನು ಇಟ್ಟುಕೊಂಡಿದ್ದೀರಿ? ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಬಿಜೆಪಿಯಿಂದಾಗಿ ರೈತರ ಪರಿಸ್ಥಿತಿ ಏನಾಗಿದೆ. ಯುವಕರ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ನಿಮಗೆ ಅರಿವಿಲ್ಲ. ಹಳ್ಳಿ ಜನರ ಪರಿಸ್ಥಿತಿ ಏನಿದೆ ಎಂಬುದರ ಕುರಿತು ನಾನು ಸಾವಿರ ವಿಷಯಗಳನ್ನು ಹೇಳಬಲ್ಲೆ. ಬಿಜೆಪಿಯಂತೆ ಕಾಂಗ್ರೆಸ್ ನಾಯಕರೂ ಭ್ರಷ್ಟಾಚಾರದಲ್ಲಿ ಕಡಿಮೆಯೇನಿಲ್ಲ. ಹೀಗಾಗಿ ನಾನು ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ನಾನು 14 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಏನೆಲ್ಲ ನೊಡಿದ್ದೇನೆ. ಪುಟ್ಟರಂಗಶೆಟ್ಟಿ ಅವರ ಕಚೇರಿಗೆ ರೂ.‌ 14 ಲಕ್ಷ ರೂಪಾಯಿ ಹಣ ತಂದವರು ಯಾರು? ಅದನ್ನೆಲ್ಲ ಮುಚ್ಚಿ ಹಾಕಿ ಆಯ್ತು. ನಿಮ್ಮ ಯೋಗ್ಯತೆಗಳು ಅಲ್ಲಿಯೇ ಇವೆ ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿಯಾಗಿದ್ದೂ ವಾಸಕ್ಕೆ ಸರಕಾರಿ ಬಂಗಲೆ ನೀಡಿರಲಿಲ್ಲ

ಸಿಎಂ ಆಗಿದ್ದರೂ‌ ನಾನು ಅಮೆರಿಕಕ್ಕೆ ಹೋಗಿದ್ದೆ. ಆದ್ದರಿಂದ ಸರಕಾರ ಹೋಯಿತು ಎಂದು ಕಾಂಗ್ರೆಸ್ ನವರು ಮಾಡುತ್ತಿರುವ ಆರೋಪ ಸುಳ್ಳು. ನೀವು ಸರಕಾರ ತೆಗೆಯುತ್ತಿರಿ ಎಂಬುದು ನನಗೆ ಗೊತ್ತಿತ್ತು. ನೀವು ಧರ್ಮಸ್ಥಳದ ಸಿದ್ದವನದಲ್ಲಿ ಮೈತ್ರಿ ಸರ್ಕಾರ ಕೆಡವಲು ತಂತ್ರ ಹೆಣೆದಿರಲಿಲ್ಲವೇ ಪಾರ್ಲಿಮೆಂಟ್ ಚುನಾವಣೆವರೆಗೂ ಸುಮ್ಮನಿರಿ. ಆಮೇಲೆ ಸರಕಾರ ತೆಗೆಯೋಣ ಎಂದು ನೀವು ಹೇಳಿದ್ದು ಜಗಜ್ಜಾಹಿರವಾಗಿದೆ ಎಂದು ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ‌ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪಕ್ಕೆ ಎಚ್. ಡಿ. ಕೆ ಪ್ರತ್ಯುತ್ತರ ನೀಡಿದರು.

ಜನರಿಗೆ ನನ್ನಷ್ಟು ಹತ್ತಿರವಾಗಿ ನೀವು ಎಷ್ಟು ಸಲ ಸಿಕ್ಕಿದ್ದೀರಿ? ನಾನು ಮುಖ್ಯಮಂತ್ರಿಯಾಗಿದ್ದಾಗ ವೆಸ್ಟೆಂಡ್ ಹೋಟೆಲ್ ನಲ್ಲಿ ಇರುತ್ತಿದ್ದೆ ಎಂದು ಕಥೆ ಹೇಳುತ್ತಿದ್ದೀರಿ. ಈಗ ಅಮಿತ್ ಷಾ ಬಂದರೂ ಅಲ್ಲಿಯೇ ಇರುತ್ತಾರೆ. ನೀವು ಬಂದರೂ ಅಲ್ಲಿಯೇ ಇರುತ್ತೀರಿ. ಸಮ್ಮಿಶ್ರ ಸರಕಾರದಲ್ಲಿ ನಾನು ವಾಸಿಸಲು ಒಂದು ಸರಕಾರಿ ಬಂಗಲೆಯನ್ನು ನೀವು ಕೊಡಲಿಲ್ಲ. ಸರಕಾರವನ್ನು ಅಧಿಕಾರದಿಂದ ಕಿತ್ತು ಹಾಕಿದರೂ ನೀವು ಮಾತ್ರ ಅದೇ ಬಂಗಲೆಯಲ್ಲಿ ಮುಂದುವರೆದಿದ್ದೀರಿ. ನೀವು ಮನೆಯನ್ನು ಕೂಡ ಖಾಲಿ ಮಾಡಲಿಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ನನಗೆ ನಗರಗಳಿಗೆ ಹೋಗಿ ಭಾಷಣ ಮಾಡುವುದು ಗೊತ್ತಿಲ್ಲ. ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದೇನೆ. ನಾನು ಪಾದಯಾತ್ರೆ ಮಾಡುತ್ತಿಲ್ಲ. ಆದರೆ ಪ್ರತಿನಿತ್ಯ ಸುಮಾರು 110 ಕಿಲೋ ಮೀಟರ್ ಪಂಚರತ್ನ ಯಾತ್ರೆ ಮಾಡುತ್ತಿದ್ದೇನೆ. ಹಳ್ಳಿಗರ ಪರಿಸ್ಥಿತಿ, ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳು ಕೊರತೆ ಗಮನಿಸುತ್ತಿದ್ದೇನೆ. ದುಡ್ಡು ಮಾತ್ರ ಹೇರಳವಾಗಿ ಖರ್ಚಾಗಿದೆ. ಆದರೆ, ಆ ದುಡ್ಡು ಎಲ್ಲಿಗೆ ಹೋಗಿದೆ ಗೊತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬಿಜೆಪಿಯವರು ಅವರು ಮಾತ್ರ ಬಣ್ಣ ಬಣ್ಣದ ಜಾಹೀರಾತು ನೀಡುತ್ತಿದ್ದಾರ. ಇಲ್ಲಿಗೆ ಬಂದು ವಸ್ತುಸ್ಥಿತಿ ನೋಡಿದರೆ ಇಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹೇಳಿದರು.

ಈ ಯಾತ್ರೆಯ ಸಂದರ್ಭದಲ್ಲಿ ಜನತೆ ನನಗೂ ಹಲವಾರು ಅನುಭವಗಳನ್ನು ಕೊಟ್ಟಿದ್ದಾರೆ. ಇದರ ಆಧಾರದ ಮೇಲೆ ನಮ್ಮ ಪಕ್ಷದ ಪ್ರಣಾಳಿಕೆ ತಯಾರಿಸುತ್ತೇವೆ. ಅಲ್ಲದೇ, ಮುಂದೆ ಈ ಜನರ ನೋವನ್ನು ನಿವಾರಿಸುವಂತಹ ಸರಕಾರ ಅಧಿಕಾರಕ್ಕೆ ತರಲು ಯಾತ್ರೆ ಕೈಗೊಂಡಿದ್ದೇನೆ. ಅದರಲ್ಲಿ ಯಶಸ್ವಿ ಆಗುತ್ತೇನೆ ಎಂದು‌ ಮಾಜಿ‌ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

Leave a Reply

ಹೊಸ ಪೋಸ್ಟ್‌