ಫೆ. 4, 5 ರಂದು ಕಾರ್ಯನಿರತ ಪತ್ರಕರ್ತರ ರಾಜ್ಯ ಸಮ್ಮೇಳನ- ಯಶಸ್ಸಿಗೆ ಸಹಕರಿಸಲು ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮನವಿ

ವಿಜಯಪುರ: ಬಸವನಾಡು ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕಾರ್ಯನಿರತ ಪತ್ರಕರ್ತರ 37ನೇ ರಾಜ್ಯ ಸಮ್ಮೇಶನದ ಯಶಸ್ಸಿಗೆ ಎಲ್ಲ ಪತ್ರಕರ್ತರು, ಜಿಲ್ಲೆಯ ನಾಗರಿಕರು ಸಹಕರಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮನವಿ ಮಾಡಿದ್ದಾರೆ.  .

ನಗರದ ಜಿ. ಪಂ. ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗಡಿ ಭಾಗದಲ್ಲಿ ನಡೆಯುವ ಈ ಸಮ್ಮೇಳನ ಹಲವು ವೈಶಿಷ್ಠ್ಯಗಳೊಂದಿಗೆ ಐತಿಹಾಸಿಕವಾಗಿ ನಡೆಸಲು ಎಲ್ಲರೂ ಕೈಜೋಡಿಸಬೇಕು.  ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಊಟ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿ ಒಳ್ಳೆಯ ಆತಿಥ್ಯ ನೀಡಿದರೆ ಬೇರೆ ಜಿಲ್ಲೆಗಳಿಂದ ಬಂದ ಪ್ರತಿನಿಧಿಗಳು ಈ ಜಿಲ್ಲೆಯ ಬಗ್ಗೆ ಮನದಲ್ಲಿ ಸವಿನೆನಪು ಇಟ್ಟುಕೊಂಡು  ತಮ್ಮೂರಿಗೆ ಮರಳುತ್ತಾರೆ.  ಈ ಸಮ್ಮೇಳನ ನಮ್ಮ ಮನೆಯ ಕಾರ್ಯಕ್ರಮ ಎಂದು ತಿಳಿದುಕೊಂಡು ಎಲ್ಲರೂ ಹುರುಪಿನಿಂದ ಒಗ್ಗೂಡಿ ಕೆಲಸ ಮಾಡುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.

ಕಳೆದ ಡಿಸೆಂಬರ್ 23 ಮತ್ತು 24 ರಂದು ನಡೆಯಬೇಕಾಗಿದ್ದ ಈ ಸಮ್ಮೇಳನ ಕಾರಣಾಂತರಗಳಿಂದ ಜ. 9 ಮತ್ತು 10 ಕ್ಕೆ  ಮುಂದೂಡಲಾಗಿತ್ತು.  ಆದರೆ, ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಸ್ವಾಮಿ ಸಿದ್ಧೇಶ್ವರರರು ಲಿಂಗೈಕ್ಯರಾದ ಹಿನ್ನೆಲೆಲ್ಲಿ ಎರಡನೇ ಬಾರಿ ಮುಂದೂಡಕೆಯಾಯಿತು.  ಈಗ ಈ ಸಮ್ಮೇಳನ ಫೆಬ್ರವರಿ 4 ಮತ್ತು 5 ರಂದು ನಡೆಸಲು ನಿರ್ಧರಿಸಲಾಗಿದೆ.  ಲಿಂ. ಸ್ವಾಮಿ ಸಿದ್ಧೇಶ್ವರರು ಈ ಸಮ್ಮೇಳನದ ಸಾನ್ನಿಧ್ಯ ವಹಿಸಲು ಸಂತೋಷದಿಂದ ಒಪ್ಪಿಕೊಂಡು ಸಮ್ಮೇಳನ ಗಡಿಭಾಗದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ್ದರು.  ಅವರ ಸಾನ್ನಿಧ್ಯದಲ್ಲಿ ಈ ಸಮ್ಮೇಳನ ನಡೆಯಬೇಕಾಗಿತ್ತು.  ಆದರೆ, ಅವರು ನಮ್ಮನ್ನಗಲಿರುವುದು ನಮಗೆಲ್ಲರಿಗೂ ತುಂಬಾ ದುಃಖವನ್ನುಂಟು ಮಾಡಿದೆ ಎಂದು ಅವರು ಹೇಳಿದರು.

ಫೆ. 4 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮ್ಮೇಳನ ಉದ್ಘಾಟಿಸಲಿದ್ದಾರೆ.  ಫೆ. 5 ರಂದು ಪ್ರತಿನಿಧಿಗಳ ಸಮಾವೇಶ ನಡೆಯಲಿದೆ.  ನಂತರ ಸಮಾರೋಪ ಸಮಾರಂಭ ಹಾಗೂ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.  ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.  ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಹಲವಾರು ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಮ್ಮೇಳನದಲ್ಲಿ ನವಮಾಧ್ಯಮ ಮತ್ತು ಪತ್ರಕರ್ತರು, ಸುದ್ದಿಮಾಧ್ಯಮದಲ್ಲಿ ಮಹಿಳೆಯರು, ಗಡಿ ಮತ್ತು ಮಾಧ್ಯಮ ಎಂಬ ವಿಷಯ ಕುರಿತು ಮೂರು ಪ್ರಮುಖ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.  ಇದರ ಜೊತೆಗೆ ಪತ್ರಿಕಾ ವಿತರಕರ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ.  ಅಲ್ಲದೇ, ಈ ಸಮ್ಮೇಳನದಲ್ಲಿ ಜಿಲ್ಲೆಯ 10 ಜನ ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಅವರು ತಿಳಿಸಿದರು.

ಎರಡು ದಿನಗಳ ಈ ಸಮ್ಮೇಳನದಲ್ಲಿ ಐದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.  ಈಗಾಗಲೇ ಎರಡೂವರೆ ಸಾವಿರ ಜನ ಪ್ರತಿನಿಧಿಗಳ ನೋಂದಣಿಯಾಗಿದೆ ಎಂದು ಶಿವಾನಂದ ತಗಡೂರ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಫಿರೋಜ್ ರೋಜಿಂದಾರ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಮಲ್ಲಿಕಾರ್ಜುನ ಕೆಂಭಾವಿ,  ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಬಿ.ವಡವಡಗಿ, ಕೆ. ಕೆ. ಕುಲಕರ್ಣಿ, ವಿಶೇಷ ಆಮಂತ್ರಿತೆ ಕೌಶಲ್ಯ ಪನಾಳಕರ, ಹಿರಿಯ ಪತ್ರಕರ್ತರಾದ ಕೆ. ಎನ್. ರಮೇಶ, ಡಾ. ಓಂಕಾರಗೌಡ ಕಾಕಡೆ ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಲಿಂ.ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ನಮನ ಸಲ್ಲಿಸಿ ನಂತರ ಎರಡು ನಿಮಿಷ ಮೌನ ಆಚರಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

Leave a Reply

ಹೊಸ ಪೋಸ್ಟ್‌