ವಿಜಯಪುರ: ಲಂಬಾಣಿ ತಾಂಡಗಳು ಕಂದಾಯ ಗ್ರಾಮವಾಗಬೇಕು ಎನ್ನುವುದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕನಸಿನ ಕೂಸು. ಆದರೆ, ಬಿಜೆಪಿ ಇದರ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮತ್ತು ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಖರ್ಗೆ ಅವರ ಕನಸಿಗೆ ಪೂರ್ಣಶಕ್ತಿ ಬಂದಿದೆ. ಕಂದಾಯ ಗ್ರಾಮ ಘೋಷಣೆಗೆ ಎಲ್ಲಾ ಸಿದ್ಧತೆಗಳಾಗಿದ್ದರೂ ಬಿಜೆಪಿ ಕಳೆದ ಮೂರೂವರೆ ವರ್ಷದಿಂದ ತಾಂಡಾ ಜನರನ್ನು ಚಂಚಿಸಿದೆ. ಈಗ ಬಿಜೆಪಿ ಏನೇ ಹೇಳಿದರೂ ತಾಂಡಾ ಜನರಿಗೆ ಇದರ ಹಿಂದಿರುವ ಶಕ್ತಿ ಯಾವುದು ಎಂಬುದು ಗೊತ್ತಿದೆ. ಈಗ ಹಕ್ಕುಪತ್ರ ನೀಡುವ ಹೆಸರಿನಲ್ಲಿ ಹತ್ತಾರು ಕೋಟಿ ಸರಕಾರದ ಹಣ ಖರ್ಚು ಮಾಡಿಸಿ ಪ್ರಧಾನಿ ಮೋದಿ ಅವರಿಗೆ ಚುನಾವಣೆ ವೇದಿಕೆ ಒದಗಿಸಿದ್ದಾರೆ ಎಂದು ಪ್ರಕಾಶ ರಾಠೋಡ ಆರೋಪಿಸಿದರು.
ಲಂಬಾಣಿ ಜನಾಂಗಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಗಳನ್ನು ವಿವರಿಸಿದ ಅವರು, 1997ರಲ್ಲಿ ಲಂಬಾಣಿ ಜನಾಂಗವನ್ನು ಉತ್ತರ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಿದ ಕೀರ್ತಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಅಂದಿನ ಸಿಎಂ ದೇವರಾಜ ಅರಸು ಮತ್ತು ಅಂದಿನ ಸಮಾಜ ಕಲ್ಯಾಣ ಸಚಿವ ಕೆ. ಟಿ. ರಾಠೋಡ ಹಾಗೂ ಅಂದಿನ ರಾಜ್ಯಸಭೆ ಸದಸ್ಯರಾದ ಎಲ್. ಆರ್. ನಾಯಕ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆದ ನಂತರ ಸರಕಾರದ ವತಿಯಿಂದ ಸೇವಾಲಾಲ ಜಯಂತಿಯನ್ನು ಆಚರಿಸುವ ನಿರ್ಣಯ ಕೈಗೊಂಡಿದ್ದಾರೆ. ಈ ಮೂಲಕ ನಮ್ಮ ಸಮಾಜದ ಧರ್ಮ ಗುರುಗಳಿಗೆ ಮತ್ತು ನಮ್ಮ ಜನಾಂಗಕ್ಕೆ ದೊಡ್ಡ ಗೌರವ ನೀಡಿದ್ದಾರೆ. ಅಲ್ಲದೇ, ಲಂಬಾಣಿ ಜನಾಂಗದ ಆರಾಧ್ಯ ಗುರು ಸಂತ ಸೇವಾಲಾಲರ ಜನ್ಮಸ್ಥಳ ಭಾಯಾಗಡ್- ಲ ಸೂರಗೊಂಡನಕೊಪ್ಪದ ಸಮಗ್ರ ಅಭಿವೃದ್ಧಿ ಮಾಡಿಸಿದ್ದಾರೆ. 2016ರಲ್ಲಿ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡುವ ನಿರ್ಣಯದ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ ಎಂದು ಅವರು ಹೇಳಿದರು.
ಬಂಜಾರ ಜನಾಂಗ ಪ್ರಧಾನಿ ಮೋದಿ ಅವರಿಂದ ಹಲವಾರು ನಿರೀಕ್ಷೆ ಇಟ್ಟುಕೊಂಡಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಕ್ಕೆ ಲಂಬಾಣಿ ಸಮಾಜದ ಮೇಲೆ ಗೌರವ ಹಾಗೂ ಕನಿಕರ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ವಾಸಿಸುತ್ತಿರುವ ಐದರಿಂದ ಆರು ಕೋಟಿ ಬಂಜಾರಾ ಜನಾಂಗದವರನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸುವ ಘೋಷಣೆ ಮಾಡಬೇಕಿತ್ತು. ನಮ್ಮ ಜನಾಂಗದ ಮೇಲೆ ಪ್ರೀತಿ ಇದ್ರೆ ಸದಾಶಿವ ಆಯೋಗದ ವರದಿಯನ್ನು ತಿರಸ್ಕಾರ ಮಾಡಿರುವ ಘೋಷಣೆ ಮಾಡಬೇಕಾಗಿತ್ತು. ಕಲಬುರಗಿಯಲ್ಲಿ ಏರರ್ಪೋರ್ಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸೇವಾಲಾಲ್ ದೇವಸ್ಥಾನವನ್ನು ನಡು ರಾತ್ರಿಯಲ್ಲಿ ದ್ವಂಸ ಮಾಡಿದ್ದರು. ಲಂಬಾಣಿ ಜನಾಂಗದ ಜೊತೆ ಚರ್ಚೆ ಮಾಡದೆ ಸೇವಾಲಾಲ್ ದೇವಸ್ಥಾನವನ್ನು ಧ್ವಂಸ ಮಾಡಿರುವುದು ನಮ್ಮ ಸಮಾಜಕ್ಕೆ ದೊಡ್ಡ ಅಪಮಾನ ಮಾಡಿದಂತಾಗಿದೆ. ಪಶ್ಚಾತಾಪದಿಂದ ಹೋಗಲಾಡಿಸಬೇಕಾದರೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರು ಇಡುವ ಘೋಷಣೆ ಮಾಡಬೇಕಾಗಿತ್ತು. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡುವ ಅಧಿಸೂಚನೆಯಲ್ಲಿ ಪ್ರತಿ ಲಂಬಾಣಿ ತಾಂಡಾಗಳ ನಿವಾಸಿಗಳಿಗೆ ಕೇವಲ 4000 ಚದುರ ಅಡಿ ಮಾತ್ರ ಹಕ್ಕು ಪತ್ರ ಕೊಟ್ಟಿದ್ದಾರೆ. ಇದು ಲಂಬಾಣಿ ಜನಾಂಗದವರಿಗೆ ಆತಂಕ ಹಾಗೂ ಗೊಂದಲ ಸೃಷ್ಟಿ ಮಾಡಿದೆ ಎಂದು ಪ್ರಕಾಶ ರಾಠೋಡ ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹ್ಮದ ರಫೀಕ್ ಟಪಾಲ ಎಂಜಿನಿಯರ್, ಸಾಹೇಬಗೌಡ ಬಿರಾದಾರ, ಎಂ. ಎಸ್. ನಾಯಕ, ಪ್ರೇಮಸಿಂಗ್ ಚವ್ಹಾಣ, ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.